ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

2024ರ ಲೋಕಸಭಾ ಚುನಾವಣೆಗೆ ಸಿದ್ಧತೆ: ಬಿಜೆಪಿ ವಿರೋಧಿ ರಂಗಕ್ಕೆ ಕಹಳೆ

ವಿರೋಧ ಪಕ್ಷಗಳ ಒಗ್ಗಟ್ಟಿನ ಮಂತ್ರ
Last Updated 25 ಸೆಪ್ಟೆಂಬರ್ 2022, 19:31 IST
ಅಕ್ಷರ ಗಾತ್ರ

ಫತೇಹಾಬಾದ್‌ (ಹರಿಯಾಣ): ಬಿಜೆಪಿ ವಿರೋಧಿ ರಂಗವೊಂದರ ರಚನೆಗೆ ಮೊದಲ ಹೆಜ್ಜೆ ಇರಿಸಲಾಗಿದೆ. 2024ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಎದುರಿಸಲು ಕಾಂಗ್ರೆಸ್‌ ಸೇರಿದಂತೆ ಬಿಜೆಪಿಯ ವಿರುದ್ಧ ಇರುವ ಎಲ್ಲ ಪಕ್ಷಗಳ ಮೈತ್ರಿಕೂಟ ರಚಿಸಬೇಕು ಎಂದು ಬಿಹಾರ ಮುಖ್ಯಮಂತ್ರಿ ನಿತೀಶ್‌ ಕುಮಾರ್‌, ಎನ್‌ಸಿಪಿ ಮುಖ್ಯಸ್ಥ ಶರದ್‌ ಪವಾರ್‌ ಮತ್ತು ಇತರ ಪ್ರಮುಖ ಮುಖಂಡರು ಭಾನುವಾರ ಕರೆ ಕೊಟ್ಟಿದ್ದಾರೆ. ದ್ವಿಪಕ್ಷೀಯ ಹಣಾಹಣಿ ನಡೆದರೆ ಬಿಜೆಪಿಯ ಸೋಲು ನಿಶ್ಚಿತ ಎಂದು ಈ ನಾಯಕರು ಅಭಿಪ್ರಾಯಪಟ್ಟಿದ್ದಾರೆ.

‘ಬಿಜೆಪಿಯೇತರ ಪಕ್ಷಗಳು ಒಂದಾಗುವುದಾದರೆ ಕಾಂಗ್ರೆಸ್‌ನಲ್ಲಿರುವ ನಮ್ಮ ಗೆಳೆಯರನ್ನೂ ಸೇರಿಸಿಕೊಳ್ಳಬೇಕು. ಹಾಗಾದರೆ, ನಾಶ ಮಾಡುವವರಿಂದ ಈ ದೇಶವನ್ನು ರಕ್ಷಿಸಬಹುದು’ ಎಂದು ನಿತೀಶ್‌ ಹೇಳಿದ್ದಾರೆ. ಮಾಜಿ ಉಪಪ್ರಧಾನಿ ದೇವಿಲಾಲ್‌ ಅವರ 109ನೇ ಹುಟ್ಟುಹಬ್ಬದ ಅಂಗವಾಗಿ ಇಂಡಿಯನ್‌ ನ್ಯಾಷನಲ್‌ ಲೋಕ ದಳ (ಐಎನ್‌ಎಲ್‌ಡಿ) ಪಕ್ಷವು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

2024ರ ಲೋಕಸಭಾ ಚುನಾವಣೆಗೆ ಮೂರನೇ ರಂಗ ರಚನೆಯ ಪ್ರಶ್ನೆಯೇ ಇಲ್ಲ. ಬದಲಿಗೆ ಬಿಜೆಪಿಯನ್ನು ಸೋಲಿಸುವುದಕ್ಕಾಗಿ ಒಂದು ರಂಗ ಮಾತ್ರ ಇರಲಿದೆ ಎಂದೂ ಅವರು ಹೇಳಿದರು.ಶರದ್‌ ಪವಾರ್‌, ಸಿಪಿಎಂ ಪ್ರಧಾನ ಕಾರ್ಯದರ್ಶಿ ಸೀತಾರಾಮ ಯೆಚೂರಿ, ಶಿವಸೇನಾದ ಅರವಿಂದ ಸಾವಂತ್‌ ಅವರೂ ಇದೇ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.ವಿರೋಧ ಪಕ್ಷಗಳ ಒಗ್ಗಟ್ಟಿನ ರಂಗ ರಚನೆಗಾಗಿ ಕಾಂಗ್ರೆಸ್ ಸೇರಿ ಎಲ್ಲ ಪಕ್ಷಗಳ ಜತೆಗೆ ಮಾತುಕತೆ ನಡೆಸುವುದಾಗಿ ಐಎನ್‌ಎಲ್‌ಡಿ ಅಧ್ಯಕ್ಷ ಒ.ಪಿ. ಚೌತಾಲಾ ಅವರೂ ಹೇಳಿದರು.

ಕಾಂಗ್ರೆಸ್ ಪಕ್ಷವನ್ನು ಸುದೀರ್ಘ ಕಾಲದಿಂದ ವಿರೋಧಿಸಿಕೊಂಡು ಬಂದಿರುವ ಇತಿಹಾಸ ಹೊಂದಿರುವ ಶಿರೋಮಣಿ ಅಕಾಲಿ ದಳದ (ಎಸ್‌ಎಡಿ) ಸುಖಬೀರ್ ಸಿಂಗ್ ಬಾದಲ್‌ ಅವರೂ ವೇದಿಕೆಯಲ್ಲಿ ಇದ್ದರು. ವಿರೋಧ ಪಕ್ಷಗಳು ಒಟ್ಟಾಗಬೇಕು ಎಂಬ ಹಂಬಲವನ್ನು ಅವರೂ ವ್ಯಕ್ತಪಡಿಸಿದರು. ಬಿಹಾರ ಉಪಮುಖ್ಯಮಂತ್ರಿ ತೇಜಸ್ವಿ ಯಾದವ್‌ ಅವರು ಉಪಸ್ಥಿತರಿದ್ದರು.

‘ನಿಜವಾದ ಎನ್‌ಡಿಎ ಬೇರೆಲ್ಲೂ ಇಲ್ಲ, ಇಲ್ಲೇ ಇದೆ. ಎನ್‌ಡಿಎಯ ಸ್ಥಾಪಕ ಸದಸ್ಯ ಪಕ್ಷಗಳಾದ ಎಸ್‌ಎಡಿ, ಶಿವಸೇನಾ ಮತ್ತು ಜೆಡಿಯು ಇಲ್ಲಿ ಇವೆ. ನಾವು ಎನ್‌ಡಿಎಯಿಂದ ಬಿಜೆಪಿಯನ್ನು ಹೊರಕ್ಕೆ ಹಾಕಿದ್ದೇವೆ’ ಎಂದು ಬಾದಲ್ ಹೇಳಿದರು.

ಕಾಂಗ್ರೆಸ್ ಸೇರಿದಂತೆ ಎಲ್ಲ ಪಕ್ಷಗಳೂ ಒಂದೇ ವೇದಿಕೆಯಡಿ ಬರಬೇಕು ಎಂದು ಯೆಚೂರಿ ಹೇಳಿದರು.

ಮಮತಾ, ಕೆಸಿಆರ್‌, ಅಖಿಲೇಶ್‌ ಗೈರು:ಪ್ರಭಾವಿಯಾಗಿರುವ ಹಲವು ಪ್ರಾದೇಶಿಕ ಪಕ್ಷಗಳ ಮುಖಂಡರು ಕಾರ್ಯಕ್ರಮದಲ್ಲಿ ಭಾಗಿ ಆಗಿಲ್ಲ. ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ ರಾವ್‌ (ಕೆಸಿಆರ್‌) ಅವರು ಕಾರ್ಯಕ್ರಮಕ್ಕೆ ಬಂದಿಲ್ಲ. ಬಿಜೆಪಿ ವಿರೋಧಿ ಪಕ್ಷಗಳ ಕೂಟದಲ್ಲಿ ಕಾಂಗ್ರೆಸ್ ಅನ್ನು ಸೇರಿಸುವುದಕ್ಕೆ ಈ ಇಬ್ಬರೂ ಮುಖಂಡರು ಈ ಹಿಂದೆ ವಿರೋಧ ವ್ಯಕ್ತಪಡಿಸಿದ್ದರು. ಕಾಂಗ್ರೆಸ್‌ ಪಕ್ಷದ ಮುಖಂಡರು ಕಾರ್ಯಕ್ರಮದಲ್ಲಿ ಭಾಗಿಯಾಗಿರಲಿಲ್ಲ. ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್‌ ಯಾದವ್‌ ಅವರೂ ಕಾರ್ಯಕ್ರಮಕ್ಕೆ ಹಾಜರಾಗಿಲ್ಲ.

ಸೋನಿಯಾ ಭೇಟಿ ಮಾಡಿದ ಲಾಲು, ನಿತೀಶ್:ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್, ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ ಅವರನ್ನು ಭಾನುವಾರ ಇಲ್ಲಿ ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ.ಮುಂದಿನ ಲೋಕಸಭಾ ಚುನಾವಣೆಗೆ ಎಲ್ಲಾ ವಿರೋಧ ಪಕ್ಷಗಳನ್ನು ಬಿಜೆಪಿ ವಿರುದ್ಧ ಒಗ್ಗೂಡಿಸುವ ಯತ್ನದ ಭಾಗವಾಗಿ ಈ ಭೇಟಿ ನಡೆದಿದೆ.

‘ಬಿಜೆಪಿಯನ್ನು ಸೋಲಿಸಲು ಎಲ್ಲಾ ವಿರೋಧ ಪಕ್ಷಗಳನ್ನು ಒಗ್ಗೂಡಿಸಬೇಕು. ಕಾಂಗ್ರೆಸ್‌ ಹೊಸ ಅಧ್ಯಕ್ಷರ ಆಯ್ಕೆಯ ಪ್ರಕ್ರಿಯೆಯಲ್ಲಿದೆ. ಅಧ್ಯಕ್ಷರ ಚುನಾವಣೆಯ ನಂತರ ಮತ್ತೆ ಭೇಟಿ ಮಾಡೋಣ ಎಂದು ಸೋನಿಯಾ ಗಾಂಧಿ ಹೇಳಿದ್ದಾರೆ’ ಎಂದು ಲಾಲು ಹೇಳಿದ್ದಾರೆ.

ಬಿಹಾರದಲ್ಲಿ ಬಿಜೆಪಿ ಜತೆಗೆ ಮೈತ್ರಿ ಕಡಿದುಕೊಂಡು ಆರ್‌ಜೆಡಿ–ಕಾಂಗ್ರೆಸ್‌ ಜತೆಗೆ ಸರ್ಕಾರ ರಚಿಸಿದ ನಂತರ ನಿತೀಶ್ ಅವರು ಸೋನಿಯಾ ಅವರನ್ನು ಭೇಟಿ ಮಾಡಿದ್ದು ಇದೇ ಮೊದಲು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT