ನವದೆಹಲಿ: ಅದಾನಿ ಸಮೂಹದ ವಿರುದ್ಧದ ಆರೋಪಗಳಿಗೆ ಸಂಬಂಧಿಸಿದಂತೆ ಜಂಟಿ ಸಂಸದೀಯ ಸಮಿತಿ(ಜೆಪಿಸಿ) ತನಿಖೆಗೆ ಒತ್ತಾಯಿಸಿ ವಿಪಕ್ಷಗಳ ಗದ್ದಲದ ನಡುವೆ ₹45ಲಕ್ಷ ಕೋಟಿ ಮೊತ್ತದ ಕೇಂದ್ರ ಬಜೆಟ್ ಅನ್ನು ಲೋಕಸಭೆ ಗುರುವಾರ ಯಾವುದೇ ಚರ್ಚೆಯಿಲ್ಲದೆ ಅನುಮೋದಿಸಿದೆ.
ರಾಹುಲ್ ಗಾಂಧಿ ಕ್ಷಮಾಪಣೆ ಮತ್ತು ಅದಾನಿ ಸಮೂಹದ ಕುರಿತಾದ ತನಿಖೆ ವಿಷಯಗಳಿಗೆ ಸಂಬಂಧಿಸಿದಂತೆ ಆಡಳಿತ ಮತ್ತು ವಿಪಕ್ಷಗಳ ಸದಸ್ಯರ ನಡುವಿನ ಗದ್ದಲದಿಂದ ಎರಡು ಬಾರಿ ಮುಂದೂಡಲ್ಪಟ್ಟ ಸದನದಲ್ಲಿ ಧನವಿನಿಯೋಗ ಮಸೂದೆ ತೆಗೆದುಕೊಳ್ಳಲಾಗಿತ್ತು. ಗದ್ದಲ ಮುಂದುವರಿದಿದ್ದರಿಂದ ಚರ್ಚೆ ಇಲ್ಲದೆ ಅಂಗೀಕರಿಸಲಾಯಿತು.
ಬಜೆಟ್ ಅಧಿವೇಶನದ ಎರಡನೇ ಹಂತವು ಸಂಪೂರ್ಣ ಗದ್ದಲ ಕೋಲಾಹಲದಲ್ಲೇ ಕಳೆದಿದೆ. ಈ ಮಧ್ಯೆ, ಚರ್ಚೆ ನಡೆಯದೇ ಬಜೆಟ್ ಅಂಗೀಕರಿಸಿರುವುದು ಅತ್ಯಂತ ವಿರಳ ನಿದರ್ಶನವಾಗಿದೆ.
ಎರಡು ಬಾರಿ ಮುಂದೂಡಲ್ಪಟ್ಟ ಬಳಿಕ ಸಂಜೆ 6 ಗಂಟೆಗೆ ಮತ್ತೆ ಕಲಾಪ ಆರಂಭವಾದಾಗ, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು, 2023–24ನೇ ಹಣಕಾಸು ವರ್ಷಕ್ಕೆ ಅನುದಾನ ಬೇಡಿಕೆಗಳು ಮತ್ತು ಸಂಬಂಧಿತ ಧನವಿನಿಯೋಗ ಮಸೂದೆಗಳನ್ನು ಚರ್ಚೆ ಮತ್ತು ಮತದಾನಕ್ಕೆ ಮಂಡಿಸಿದರು. ವಿಪಕ್ಷಗಳು ಸದನದ ಬಾವಿಗಿಳಿದು ಪ್ರತಿಭಟನೆಗೆ ಮುಂದಾದವು. ಈ ನಡುವೆಯೇ ಎಲ್ಲ ಸಚಿವಾಲಯಗಳ ಅನುದಾನ ಬೇಡಿಕೆಗಳನ್ನು ಸ್ಪೀಕರ್ ಓಂ ಬಿರ್ಲಾ ಮತದಾನಕ್ಕೆ ಹಾಕಿದರು. ವಿರೋಧ ಪಕ್ಷಗಳ ಗದ್ದಲದ ನಡುವೆ ಮಸೂದೆ ಅಂಗೀಕರಿಸಲಾಯಿತು.
ಬಜೆಟ್ ಅನುಮೋದನೆ ವೇಳೆ ಪ್ರಧಾನಿ ನರೇಂದ್ರ ಮೋದಿ ಸಹ ಸದನದಲ್ಲಿ ಉಪಸ್ಥಿತರಿದ್ದರು.
ಈ ಎಲ್ಲ ಪ್ರಹಸನ ಕೇವಲ 12 ನಿಮಿಷಗಳಲ್ಲಿ ನಡೆದುಹೋಯಿತು. ಮೂರನೇ ಎರಡರಷ್ಟು ಬಹುಮತದೊಂದಿಗೆ ಬಜೆಟ್ ಅನ್ನು ಅಂಗೀಕರಿಸಲಾಯಿತು.
ಫೆಬ್ರುವರಿ 1ರಂದು ಬಜೆಟ್ ಮಂಡನೆ ವೇಳೆ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಪ್ರಸ್ತಾಪಿಸಿದ್ದ ತೆರಿಗೆ ಪ್ರಸ್ತಾವಗಳನ್ನು ಒಳಗೊಂಡ ಹಣಕಾಸು ಮಸೂದೆ–2023ಶುಕ್ರವಾರ ಲೋಕಸಭೆಯಲ್ಲಿ ಚರ್ಚೆಗೆ ಬರುವ ಸಾಧ್ಯತೆ ಇದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.