ಮಂಗಳವಾರ, ಜೂನ್ 28, 2022
24 °C

ಲುಧಿಯಾನ ಸ್ಫೋಟದಲ್ಲಿ ಮೃತಪಟ್ಟವ ಬಾಂಬ್ ಇಡಲು ಹೋಗಿದ್ದ ವ್ಯಕ್ತಿ: ಡಿಜಿಪಿ

ಪಿಟಿಐ Updated:

ಅಕ್ಷರ ಗಾತ್ರ : | |

ಚಂಡೀಗಡ: ಲುಧಿಯಾನದ ಜಿಲ್ಲಾ ನ್ಯಾಯಾಲಯದ ಸಂಕೀರ್ಣದಲ್ಲಿ ಗುರುವಾರ ಸಂಭವಿಸಿದ ಬಾಂಬ್‌ ಸ್ಫೋಟದಲ್ಲಿ ಮೃತಪಟ್ಟ ಮಾಜಿ ಪೊಲೀಸ್ ಹೆಡ್‌ ಕಾನ್‌ಸ್ಟೇಬಲ್ ಶೌಚಾಲಯದಲ್ಲಿ ಬಾಂಬ್ ಅನ್ನು ಇಡಲು ಅಥವಾ ಜೋಡಿಸಲು ಹೋಗಿದ್ದರು ಎನ್ನುವುದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ ಎಂದು ಪಂಜಾಬ್ ಡಿಜಿಪಿ ಸಿದ್ಧಾರ್ಥ್ ಚಟ್ಟೋಪಾಧ್ಯಾಯ ಶನಿವಾರ ತಿಳಿಸಿದ್ದಾರೆ.

ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, '2019ರಲ್ಲಿ ಸೇವೆಯಿಂದ ವಜಾಗೊಂಡಿದ್ದ ಗಗನ್‌ದೀಪ್ ಸಿಂಗ್, ಬಾಂಬ್ ಸ್ಫೋಟಿಸುವ ವೇಳೆ ಶೌಚಾಲಯದಲ್ಲಿ ಒಬ್ಬರೇ ಇದ್ದರು. ಈತ ಕೆಲವು ಖಲಿಸ್ತಾನಿಗಳೊಂದಿಗೆ ಮತ್ತು ಮಾದಕವಸ್ತು ಕಳ್ಳಸಾಗಣೆದಾರರೊಂದಿಗೆ ಸಂಪರ್ಕ ಹೊಂದಿದ್ದರು' ಎಂದು ತಿಳಿಸಿದ್ದಾರೆ.

ಖನ್ನಾ ನಿವಾಸಿಯಾದ ಸಿಂಗ್ ಅವರನ್ನು ಡ್ರಗ್ಸ್‌ಗೆ ಸಂಬಂಧಿಸಿದ ಪ್ರಕರಣವೊಂದರಲ್ಲಿ ವಜಾಗೊಳಿಸಲಾಗಿತ್ತು.

ಲುಧಿಯಾನದ ಜಿಲ್ಲಾ ನ್ಯಾಯಾಲಯದ ಸಂಕೀರ್ಣದಲ್ಲಿ ಗುರುವಾರ ಸಂಭವಿಸಿದ ಬಾಂಬ್‌ ಸ್ಫೋಟದಲ್ಲಿ ಸಿಂಗ್ ಮೃತಪಟ್ಟಿದ್ದರು ಮತ್ತು ಆರು ಮಂದಿ ಗಾಯಗೊಂಡಿದ್ದರು. ಬಳಿಕ ಪಂಜಾಬ್‌ ಸರ್ಕಾರ ತೀವ್ರ ಕಟ್ಟೆಚ್ಚರ ಘೋಷಿಸಿತ್ತು.

ಬಾಂಬ್ ಸ್ಫೋಟದಲ್ಲಿ ಆರ್‌ಡಿಎಕ್ಸ್ ಬಳಸಲಾಗಿದೆಯೇ ಎನ್ನುವ ಪ್ರಶ್ನೆಗೆ ಉತ್ತರಿಸಿದ ಚಟ್ಟೊಪಾಧ್ಯಾಯ, ಸ್ಫೋಟಕ್ಕೆ ಯಾವ ವಸ್ತುವನ್ನು ಬಳಸಲಾಗಿದೆ ಎನ್ನುವ ಕುರಿತು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಪರೀಕ್ಷೆಗೆ ಕಳುಹಿಸಲಾಗಿದ್ದು, ವರದಿ ಬಂದ ನಂತರವೇ ಆ ಬಗ್ಗೆ ತಿಳಿಯಲಿದೆ. ಅಲ್ಲಿಯವರೆಗೂ ಇದನ್ನೇ ಬಳಸಿರಬಹುದೆಂದು ಹೇಳಲಾಗುವುದಿಲ್ಲ' ಎಂದಿದ್ದಾರೆ.

ಮತ್ತೊಂದು ಪ್ರಶ್ನೆಗೆ ಉತ್ತರಿಸಿದ ಅವರು, 'ಪೊಲೀಸ್ ಸೇವೆಯಲ್ಲಿದ್ದಾಗ ಸಿಂಗ್ 'ತಾಂತ್ರಿಕವಾಗಿ ನಿಪುಣ'ರಾಗಿದ್ದರು. ಅವರು ಕಂಪ್ಯೂಟರ್‌ಗಳು ಮತ್ತು ತಂತ್ರಜ್ಞಾನದ ಕುರಿತು ಉತ್ತಮ ಜ್ಞಾನ ಹೊಂದಿದ್ದರು' ಎಂದು ತಿಳಿಸಿದ್ದಾರೆ.

'ಕೆಲವು ವೈರ್‌ಗಳನ್ನು ಜೋಡಿಸಲು ಮತ್ತು ಬಾಂಬ್ ಅನ್ನು ಇಡಲು ಸಿಂಗ್ ಶೌಚಾಲಯಕ್ಕೆ ತೆರಳಿದ್ದರು. ಇದು ಆತ್ಮಾಹುತಿ ಬಾಂಬ್ ದಾಳಿ ಅಲ್ಲ. ಸ್ಫೋಟದ ಬಳಿಕ ಕಂಡ ದೃಶ್ಯದಲ್ಲಿ ಅವರು ಬಾಂಬ್ ಅನ್ನು ಇಡಲು ಕುಳಿತಿದ್ದದ್ದು ಕಂಡುಬಂದಿದೆ. ಈ ವೇಳೆ ಅವರೊಬ್ಬರೇ ಅಲ್ಲಿದ್ದರು' ಎಂದಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು