ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪತ್ನಿಗಾಗಿ ಚುನಾವಣೆ ಅಕ್ರಮ: ಮಧ್ಯಪ್ರದೇಶ ಸ್ಪೀಕರ್ ಕಾರ್ಯದರ್ಶಿ ವಿರುದ್ಧ ಆರೋಪ

Last Updated 5 ಜುಲೈ 2022, 7:36 IST
ಅಕ್ಷರ ಗಾತ್ರ

ಭೋಪಾಲ್‌: ಮಧ್ಯಪ್ರದೇಶ ವಿಧಾನಸಭೆ ಸ್ಪೀಕರ್‌ ಅವರ ಆಪ್ತ ಕಾರ್ಯದರ್ಶಿ ಅವದೇಶ್‌ ತಿವಾರಿ ಅವರು, ಪಂಚಾಯಿತಿ ಚುನಾವಣೆಗೆ ಸ್ಪರ್ಧಿಸಿದ್ದ ತಮ್ಮ ಹೆಂಡತಿಯ ಪರ ಫಲಿತಾಂಶ ಬರುವಂತೆ ಪ್ರಭಾವ ಬೀರಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಹೀಗಾಗಿ ಅವರನ್ನು ಸ್ಥಾನದಿಂದ ತೆಗೆದುಹಾಕಲಾಗಿದೆ.

ತಿವಾರಿ ಅವರ ಪತ್ನಿ ಕೃಷ್ಣಾವತಿ, ರೇವಾ ಜಿಲ್ಲೆಯ ಸುರ ಗ್ರಾಮ ಪಂಚಾಯಿತಿಯ ಸರಪಂಚ್‌ ಸ್ಥಾನಕ್ಕೆ ಸ್ಪರ್ಧಿಸಿದ್ದರು.

ಕೃಷ್ಣಾವತಿ ಅವರು ಎದುರಾಳಿ ಅಭ್ಯರ್ಥಿ ದೀಪ್ತಿ ದ್ವಿವೇದಿ ವಿರುದ್ಧ 20 ಮತಗಳ ಅಂತರದಿಂದ ಸೋಲು ಕಂಡಿದ್ದರು. ಆದಾಗ್ಯೂ, ರಾಜಕೀಯ ಪ್ರಭಾವ ಬಳಸಿದ್ದಅವದೇಶ್‌, ಮರು ಎಣಿಕೆ ನಡೆಸುವಂತೆ ಅಧಿಕಾರಿಗಳ ಮೇಲೆ ಒತ್ತಡ ಹೇರಿದ್ದರು.

ಮರುಎಣಿಕೆ ಬಳಿಕ ಸೋಲಿನ ಅಂತರ 12 ಮತಗಳಿಗೆ ಇಳಿದಿತ್ತು. ಮತ್ತೆ ಮತ ಎಣಿಕೆ ನಡೆಸುವಂತೆ ತಿವಾರಿ ಒತ್ತಾಯಿಸಿದ್ದರು. ಮೂರನೇ ಬಾರಿ ಎಣಿಕೆ ಕಾರ್ಯ ನಡೆಸಿದ ಅಧಿಕಾರಿಗಳು, ಕೃಷ್ಣಾವತಿ ಅವರು ಮೂರು ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ ಎಂದು ಘೋಷಿಸಿದ್ದರು.

ಎರಡು ಹಾಗೂ ಮೂರನೇ ಸ್ಥಾನ ಪಡೆದಿದ್ದ ಸ್ಪರ್ಧಿಗಳು, ಚುನಾವಣಾಧಿಕಾರಿಗಳು ಕೃಷ್ಣಾವತಿ ಪರ ಕೆಲಸ ಮಾಡಿದ್ದಾರೆ ಎಂದು ಆರೋಪಿಸಿದ್ದರು. ನಿಷ್ಪಕ್ಷಪಾತವಾಗಿ ಚುನಾವಣೆ ನಡೆದಿಲ್ಲ ಎಂದು ಗ್ರಾಮಸ್ಥರೂ ಆಕ್ರೋಶ ವ್ಯಕ್ತಪಡಿಸಿದ್ದರು.

ಚುನಾವಣೆ ಅಕ್ರಮದ ಬಗ್ಗೆ ಪ್ರತಿಸ್ಪರ್ಧಿಗಳು ಉಪ ವಿಭಾಗೀಯ ಮ್ಯಾಜಿಸ್ಟ್ರೇಟ್‌ (ಎಸ್‌ಡಿಎಂ) ಮತ್ತು ಇತರ ಚುನಾವಣಾಧಿಕಾರಿಗಳಿಗೆ ಮನವರಿಕೆ ಮಾಡುವ ಪ್ರಯತ್ನ ನಡೆಸಿದ್ದರು. ಆದರೆ, 'ಈಗ ಏನೂ ಮಾಡಲಾಗದು' ಎಂದು ಅಧಿಕಾರಿಗಳು ಪ್ರತಿಕ್ರಿಯಿಸಿದ್ದರು.

ಇದರಿಂದಮನನೊಂದ ಅಭ್ಯರ್ಥಿಯೊಬ್ಬರು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದರು. ಅವರನ್ನು ರೆವಾದಲ್ಲಿರುವ ಸಂಜಯ್‌ ಗಾಂಧಿ ಮೆಮೊರಿಯಲ್‌ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಬಳಿಕ ಅವರು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.

'ಕಳೆದ ಮೂರು ದಿನಗಳಿಂದ ಜಿಲ್ಲಾಧಿಕಾರಿ ಮತ್ತು ಎಸ್‌ಡಿಎಂ ಅವರನ್ನು ಭೇಟಿ ಮಾಡಲು ಪ್ರಯತ್ತಿಸುತ್ತಿದ್ದೇವೆ. ಆದರೆ, ಅವದೇಶ್‌ ತಿವಾರಿಯವರ ಪ್ರಭಾವ ಇರುವುದರಿಂದ ಯಾರೊಬ್ಬರೂ ನಮ್ಮನ್ನು ಭೇಟಿ ಮಾಡಲು ಸಿದ್ಧರಿಲ್ಲ. ಚುನಾವಣೆಯಲ್ಲಿ ಪಕ್ಷಪಾತವಾಗಿರುವುದಕ್ಕೆ ನಮ್ಮ ಬಳಿ ಎಲ್ಲ ಸಾಕ್ಷ್ಯಗಳಿವೆ. ಅಗತ್ಯಬಿದ್ದರೆ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸುತ್ತೇವೆ. ರಾಜ್ಯ ಚುನಾವಣಾ ಆಯೋಗಕ್ಕೆ ಮನವಿ ಮಾಡುತ್ತೇವೆ. ಸೋತ ಅಭ್ಯರ್ಥಿಯನ್ನು ವಿಜೇತೆ ಎಂದು ಘೋಷಿಸಲಾಗಿದೆ. ಇದನ್ನು ಸಹಿಸಲಾಗದು' ಎಂದು ದೀಪ್ತಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಬಗ್ಗೆ ಚುನಾವಣಾ ಆಯೋಗ ಗಮನಹರಿಸುತ್ತದೆಯೇ ಎಂಬುದನ್ನು ಕಾದುನೋಡಬೇಕಿದೆ. ಆದರೆ,ವಿವಾದ ಭುಗಿಲೇಳುತ್ತಿದ್ದಂತೆ ಮಧ್ಯಪ್ರದೇಶ ವಿಧಾನಸಭೆ ಸ್ಪೀಕರ್ ಗಿರೀಶ್‌ ಗೌತಮ್‌ ಅವರು ಅವದೇಶ್‌ ತಿವಾರಿ ಅವರಿಂದ ರಾಜೀನಾಮೆ ಪಡೆದಿದ್ದಾರೆ. ತಿವಾರಿ ಅವರನ್ನು ಸ್ಥಾನದಿಂದ ತಕ್ಷಣವೇ (ಭಾನುವಾರ) ತೆಗೆದುಹಾಕಿದ್ದಾರೆ.

ಜುಲೈ 1ರಂದು ಪಂಚಾಯಿತಿ ಚುನಾವಣೆ ನಡೆದಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT