1 ಕೋಟಿ ವಿಮೆ ಹಣಕ್ಕಾಗಿ ಮೃತಪಟ್ಟಿರುವುದಾಗಿ ನಾಟಕ, ನಕಲಿ ದಾಖಲೆ ಸೃಷ್ಟಿ

ದೇವಾಸ್: 1 ಕೋಟಿ ವಿಮೆ ಹಣಕ್ಕಾಗಿ ತಾನು ಮೃತಪಟ್ಟಿರುವುದಾಗಿ ನಟಿಸಿ, ನಕಲಿ ದಾಖಲೆಗಳನ್ನು ಸೃಷ್ಟಿಸಿದ್ದಕ್ಕಾಗಿ ಮಧ್ಯಪ್ರದೇಶದ 46 ವರ್ಷದ ವ್ಯಕ್ತಿಯೊಬ್ಬನನ್ನು ಬಂಧಿಸಿರುವುದಾಗಿ ಪೊಲೀಸರು ಸೋಮವಾರ ತಿಳಿಸಿದ್ದಾರೆ.
ಅಬ್ದುಲ್ ಹನೀಫ್ ಎಂಬಾತನನ್ನು ಭಾನುವಾರ ಬಂಧಿಸಿದ್ದು, ಹನೀಫ್ ಸತ್ತಿದ್ದಾನೆ ಎಂದು ನಕಲಿ ದಾಖಲೆ ಸೃಷ್ಟಿಸಿದ್ದ ವೈದ್ಯರನ್ನು ಕೂಡ ಬಂಧಿಸಲಾಗಿದೆ ಎಂದು ತಿಳಿಸಿದ್ದಾರೆ. ವಿಮಾ ಕಂಪನಿಯು ನೀಡಿದ ದೂರಿನ ಆಧಾರದ ಮೇಲೆ ಹನೀಫ್ ಸತ್ತಿದ್ದಾನೆ ಎಂದು ದಾಖಲೆಗಳನ್ನು ಒದಗಿಸಿದ್ದ ಪತ್ನಿ ಮತ್ತು ಮಗನ ವಿರುದ್ಧವೂ ಪ್ರಕರಣ ದಾಖಲಾಗಿದೆ.
2019ರ ಸೆಪ್ಟೆಂಬರ್‌ನಲ್ಲಿ ವಿಮಾ ಕಂಪನಿಯಿಂದ 1 ಕೋಟಿ ಹಣವನ್ನು ಆನ್‌ಲೈನ್ ಮೂಲಕ ಹನೀಫ್ ವರ್ಗಾಯಿಸಿಕೊಂಡಿದ್ದ ಎಂದು ಕೋತ್ವಾಲಿ ಪೊಲೀಸ್ ಠಾಣೆಯ ಉಸ್ತುವಾರಿ ಉಮ್ರಾವ್ ಸಿಂಗ್ ತಿಳಿಸಿದ್ದಾರೆ.
ಡಾ.ಸಂಕೀರ್ ಮನ್ಸೂರಿ ಎಂಬ ವೈದ್ಯರ ಸಹಿ ಮೇರೆಗೆ ಸ್ಥಳೀಯ ಸಂಸ್ಥೆಯಿಂದ ಮರಣ ಪ್ರಮಾಣ ಪತ್ರವನ್ನು ಪಡೆದಿದ್ದ. ಮರಣ ಪ್ರಮಾಣ ಪತ್ರ ಲಭ್ಯವಾದ ಬಳಿಕ ಹನೀಫ್ ಪತ್ನಿ ರೆಹಾನಾ ಒಂದು ಕೋಟಿ ವಿಮೆಗಾಗಿ ಅರ್ಜಿ ಸಲ್ಲಿಸಿದ್ದರು. ಈ ವೇಳೆ ವಿಮಾ ಕಂಪನಿಯವರಿಗೆ ಶಂಕೆ ಉಂಟಾಗಿ ದಾಖಲೆಗಳನ್ನು ಪರಿಶೀಲಿಸಿದ್ದಾರೆ' ಎಂದು ಸಿಂಗ್ ತಿಳಿಸಿದ್ದಾರೆ.
ಈ ಸಂಬಂಧ ವಿಮಾ ಕಂಪನಿಯು ದೇವಾಸ್ ಪೊಲೀಸ್ ಠಾಣೆಯಲ್ಲಿ 2020ರಲ್ಲಿ ದೂರು ನೀಡಿದೆ. ತನಿಖೆ ಕೈಗೊಂಡ ಪೊಲೀಸರಿಗೆ ಹನೀಫ್ ಜೀವಂತವಾಗಿರುವುದು ತಿಳಿದುಬಂದಿದೆ.
ಯುನಾನಿಯಲ್ಲಿ ಪದವಿ ಪಡೆದಿರುವುದಾಗಿ ಹೇಳಿಕೊಂಡಿದ್ದ ವೈದ್ಯ ಮತ್ತು ಹನೀಫ್ ನನ್ನು ಭಾನುವಾರ ಬಂಧಿಸಲಾಗಿದೆ. ತಲೆ ಮರೆಸಿಕೊಂಡಿರುವ ಪತ್ನಿ ಮತ್ತು ಮಗನಿಗಾಗಿ ಶೋಧ ಕಾರ್ಯಕೈಗೊಳ್ಳಲಾಗಿದೆ. ಸುಳ್ಳು ದಾಖಲೆ ಸೃಷ್ಟಿಸಿರುವುದಕ್ಕಾಗಿ ನಾಲ್ವರು ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.