ಪರಮ್ ಬಿರ್ ಸಿಂಗ್ ವಿರುದ್ಧ ಎಸಿಬಿ ತನಿಖೆ: ಮಹರಾಷ್ಟ್ರ ಸರ್ಕಾರ ಒಪ್ಪಿಗೆ

ಮುಂಬೈ (ಪಿಟಿಐ): ಮುಂಬೈನ ಮಾಜಿ ಪೊಲೀಸ್ ಆಯುಕ್ತ ಪರಮ್ ಬಿರ್ ಸಿಂಗ್ ವಿರುದ್ಧದ ಭ್ರಷ್ಟಾಚಾರ ಆರೋಪದ ಬಗ್ಗೆ ಮುಕ್ತ ತನಿಖೆ ನಡೆಸಲು ಮಹಾರಾಷ್ಟ್ರ ಸರ್ಕಾರ ಭ್ರಷ್ಟಾಚಾರ ನಿಗ್ರಹ ದಳಕ್ಕೆ (ಎಸಿಬಿ) ಗುರುವಾರ ಅನುಮತಿ ನೀಡಿದೆ.
ಸಿಂಗ್ ವಿರುದ್ಧ ಪೊಲೀಸ್ ಇನ್ಸ್ಪೆಕ್ಟರ್ ಅನೂಪ್ ಡಾಂಗೆ ಅವರು ಮಾಡಿದ್ದ ಆರೋಪಗಳ ಬಗ್ಗೆ ಮುಕ್ತ ವಿಚಾರಣೆ ಆರಂಭಿಸಲು ಎಸಿಬಿ ಅನುಮತಿ ಕೋರಿತ್ತು. ಸರ್ಕಾರ ಬುಧವಾರ ಅನುಮೋದನೆ ನೀಡಿದೆ ಎಂದು ಎಸಿಬಿಯ ಅಧಿಕಾರಿಗಳು ತಿಳಿಸಿದ್ದಾರೆ.
ಕಳೆದ ವರ್ಷ ಅಮಾನತುಗೊಂಡಿದ್ದ ಅನೂಪ್ ಡಾಂಗೆ ಅವರು ‘ನನ್ನನ್ನು ಮತ್ತೆ ಪೊಲೀಸ್ ಕರ್ತವ್ಯಕ್ಕೆ ನಿಯೋಜಿಸಲು, ಪರಮ್ ಬಿರ್ ಸಿಂಗ್ ಅವರ ಸಂಬಂಧಿಕ ವ್ಯಕ್ತಿಯೊಬ್ಬ ₹2 ಕೋಟಿ ಲಂಚಕ್ಕೆ ಒತ್ತಾಯಿಸಿದ್ದ. ಸಿಂಗ್ ಅವರು ಭ್ರಷ್ಟಾಚಾರ ನಿಗ್ರಹ ದಳದ ಡಿಜಿಯಾಗಿದ್ದಾಗ ಭೂಗತಲೋಕದ ಸಂಪರ್ಕ ಹೊಂದಿರುವ ಕೆಲವು ಜನರನ್ನು ಕಾನೂನಿನಿಂದ ರಕ್ಷಿಸಲು ಪ್ರಯತ್ನಿಸಿದ್ದರು’ ಎಂದು ಆರೋಪಿಸಿದ್ದರು.
ಈ ಸಂಬಂಧ ಇದೇ ವರ್ಷದ ಫೆಬ್ರುವರಿ 2ರಂದು ಸಿಂಗ್ ವಿರುದ್ಧ ಮಹಾರಾಷ್ಟ್ರ ಗೃಹ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗೂ ಡಾಂಗೆ ಪತ್ರವನ್ನು ಬರೆದಿದ್ದರು.
2020ರ ಜುಲೈನಲ್ಲಿ ಅಮಾನತುಗೊಳ್ಳುವ ಮೊದಲು ಪೊಲೀಸ್ ಇನ್ಸ್ಪೆಕ್ಟರ್ ಅನೂಪ್ ಡಾಂಗೆ, ಗಾಂದೇವಿ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.