ಸೋಮವಾರ, ನವೆಂಬರ್ 29, 2021
20 °C
ಲಾತೂರ್‌: ಪ್ರವಾಹದಲ್ಲಿ ಸಿಲುಕಿದ್ದ ಮೂವರನ್ನು ರಕ್ಷಿಸಿದ ವಾಯಪಡೆ ಸಿಬ್ಬಂದಿ

ಮಹಾರಾಷ್ಟ್ರ: ಭಾರಿ ಮಳೆ– ರಕ್ಷಣಾ ಕಾರ್ಯ ಚುರುಕುಗೊಳಿಸಲು ಠಾಕ್ರೆ ಸೂಚನೆ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಮುಂಬೈ: ಕಳೆದ ಕೆಲ ದಿನಗಳಿಂದ ಮಹಾರಾಷ್ಟ್ರದಲ್ಲಿ ಭಾರಿ ಮಳೆಯಾಗುತ್ತಿದ್ದು, ಮರಾಠವಾಡ, ಉತ್ತರ ಮಹಾರಾಷ್ಟ್ರ ಹಾಗೂ ವಿದರ್ಭ ಭಾಗಗಳು ಹೆಚ್ಚು ಬಾಧಿತವಾಗಿವೆ.

ಮುಖ್ಯಮಂತ್ರಿ ಉದ್ಧವ್‌ ಠಾಕ್ರೆ ಅವರು ಬುಧವಾರ ಅಧಿಕಾರಿಗಳ ಸಭೆ ನಡೆಸಿ, ಜನರ ರಕ್ಷಣೆ ಹಾಗೂ ಪರಿಹಾರ ಕಾರ್ಯವನ್ನು ಚುರುಕುಗೊಳಿಸುವಂತೆ ಸೂಚಿಸಿದರು.

ಮಳೆಯಿಂದ ಆಗಿರುವ ಹಾನಿ ಕುರಿತು ತ್ವರಿತವಾಗಿ ಸಮೀಕ್ಷೆ ನಡೆಸಿ, ವರದಿ ಸಲ್ಲಿಸುವಂತೆ ಕಂದಾಯ, ಕೃಷಿ ಇಲಾಖೆಗಳಿಗೆ ನಿರ್ದೇಶನ ನೀಡಿದರು.

ಅಗ್ನಿ ಶಾಮಕ ದಳ ಹಾಗೂ ಪ್ರಾದೇಶಿಕ ವಿಪತ್ತು ನಿರ್ವಹಣಾ ಘಟಕದ (ಆರ್‌ಡಿಎಂಸಿ) ಸಿಬ್ಬಂದಿ ರಕ್ಷಣಾ ಕಾರ್ಯದಲ್ಲಿ ತೊಡಗಿದ್ದಾರೆ.

ಮಳೆ ಹಾಗೂ ಪ್ರವಾಹ ಕಾರಣದಿಂದ ಆಗಿರುವ ಅವಘಡಗಳಲ್ಲಿ ಕನಿಷ್ಠ 13 ಜನರು ಮೃತಪಟ್ಟಿದ್ದರೆ, ರಾಜ್ಯದ ವಿವಿಧ ಭಾಗಗಳಲ್ಲಿ ತೊಂದರೆಗೆ ಸಿಲುಕಿದ್ದ 100ಕ್ಕೂ ಅಧಿಕ ಜನರನ್ನು ರಕ್ಷಿಸಲಾಗಿದೆ ಎಂದು ಮೂಲಗಳು ಹೇಳಿವೆ.

17 ಜನರ ರಕ್ಷಣೆ: ನವಿ ಮುಂಬೈ ಬಳಿಯ ಪಾಂಡವಕಡಾ ಜಲಪಾತದ ಬಳಿ ಸಿಲುಕಿದ್ದ 17 ಜನ ಪ್ರವಾಸಿಗರನ್ನು ರಕ್ಷಿಸಲಾಗಿದೆ.

ಪಾಲ್ಘರ್ ಹಾಗೂ ಠಾಣೆ ಜಿಲ್ಲೆಯ ತಗ್ಗು ಪ್ರದೇಶಗಳಲ್ಲಿ ವಾಸಿಸುತ್ತಿದ್ದ ನೂರಾರು ಜನರನ್ನು ಸುರಕ್ಷಿತ ಸ್ಥಳಗಳಿಗೆ ಬುಧವಾರ ಸ್ಥಳಾಂತರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪಾಲ್ಘರ್‌, ಭಿವಂಡಿ, ಕಲ್ಯಾಣ್‌, ಉಲ್ಹಾಸ್‌ನಗರದಲ್ಲಿ ಭಾರಿ ಹಾನಿಯಾಗಿದೆ ಎಂದು ಮೂಲಗಳು ಹೇಳಿವೆ.

ಮರಾಠವಾಡದಲ್ಲಿ ಭಾರಿ ಮಳೆ ಬೀಳುತ್ತಿರುವ ಕಾರಣ ಗೋದಾವರಿ ನದಿಗೆ ನಿರ್ಮಿಸಿರುವ ಜಾಯಕವಾಡಿ ಅಣೆಕಟ್ಟೆಗೆ ಒಳಹರಿವು ಹೆಚ್ಚಿದೆ. ಬುಧವಾರ 18 ಗೇಟ್‌ಗಳ ಮೂಲಕ 66,000 ಕ್ಯುಸೆಕ್‌ನಷ್ಟು ನೀರನ್ನು ನದಿಗೆ ಬಿಡಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ವಾಯುಪಡೆ ತಂಡದಿಂದ ಮೂವರ ರಕ್ಷಣೆ: ಮಾಂಜರಾ ಅಣೆಕಟ್ಟೆಯಿಂದ ನದಿಗೆ ನೀರು ಬಿಟ್ಟ ಪರಿಣಾಮ ಪ್ರವಾಹ ಪರಿಸ್ಥಿತಿ ಉಂಟಾಗಿದೆ. ಲಾತೂರ್‌ ಜಿಲ್ಲೆಯ ರೇಣಾಪುರ ತಾಲ್ಲೂಕಿನ ಪೊಹರೆಗಾಂವ ಗ್ರಾಮದ ಮೂವರು ಪ್ರವಾಹದಲ್ಲಿ ಸಿಲುಕಿದ್ದರು. ವಾಯುಪಡೆಯ ಹೆಲಿಕಾಪ್ಟರ್‌ನ ನೆರವಿನಿಂದ ಈ ಮೂವರನ್ನು ರಕ್ಷಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು