ಶುಕ್ರವಾರ, ಡಿಸೆಂಬರ್ 9, 2022
21 °C

ಲಂಪಿ ವೈರಸ್ ರೋಗಕ್ಕೆ ಚೀತಾಗಳೇ ಕಾರಣ: ಮಹಾ ಕಾಂಗ್ರೆಸ್ ಅಧ್ಯಕ್ಷನ ಹೇಳಿಕೆ ಟ್ರೋಲ್ 

ಪಿಟಿಐ Updated:

ಅಕ್ಷರ ಗಾತ್ರ : | |

ಮುಂಬೈ:  ನಮೀಬಿಯಾದಿಂದ ತಂದು ಮಧ್ಯಪ್ರದೇಶದ ಕುನೋ ರಾಷ್ಟ್ರೀಯ ಉದ್ಯಾನವನದಲ್ಲಿ ಬಿಡಲಾದ ಚೀತಾಗಳೇ ದೇಶದಲ್ಲಿ ಜಾನುವಾರುಗಳಲ್ಲಿ ಕಾಣಿಸಿಕೊಂಡಿರುವ  ಲಂಪಿ ವೈರಸ್ (ಚರ್ಮ ಗಂಟು) ರೋಗಕ್ಕೆ ಕಾರಣ ಎಂದು ಮಹಾರಾಷ್ಟ್ರ ಕಾಂಗ್ರೆಸ್ ಅಧ್ಯಕ್ಷ ನಾನಾ ಪಟೋಲೆ ಅವರು ಸೋಮವಾರ ಹೇಳಿದ್ದಾರೆ. ಅವರ ಹೇಳಿಕೆ ಒಂದೆಡೆ ರಾಜಕೀಯ ನಾಯಕರ ಟೀಕೆಗೆ ಗುರಿಯಾಗಿದ್ದರೆ ಮತ್ತೊಂದೆಡೆ ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಂಗ್ಯಕ್ಕೀಡಾಗಿದೆ.

ಲಂಪಿ ವೈರಸ್ ರೋಗವು ಮಹಾರಾಷ್ಟ್ರ ಸೇರಿದಂತೆ ದೇಶದಾದ್ಯಂತ ಸಾವಿರಾರು ಜಾನುವಾರುಗಳ ಸಾವಿಗೆ ಕಾರಣವಾಗಿದೆ.

ಮಹಾರಾಷ್ಟ್ರದ ಭಂಡಾರಾದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಪಟೋಲೆ, 'ರೈತರನ್ನು ನಾಶಮಾಡಲು ಮೊಟ್ಟಮೊದಲ ಬಾರಿಗೆ ಲಂಪಿ ವೈರಸ್‌ನಂತಹ ರೋಗಗಳನ್ನು ಭಾರತಕ್ಕೆ ತರಲಾಯಿತು. ನೈಜೀರಿಯಾದಿಂದ ಲಂಪಿ ವೈರಸ್ ರೋಗ ಹರಡುತ್ತಿದೆ. ನಾವು ನೈಜೀರಿಯಾದಿಂದ ಚಿರತೆಗಳನ್ನು ತಂದಿದ್ದೇವೆ. ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮದಿನದಂದು (ಸೆಪ್ಟೆಂಬರ್ 17) ಇದಕ್ಕಾಗಿ ಕಾರ್ಯಕ್ರಮವನ್ನೇ ಆಯೋಜಿಸಲಾಗಿತ್ತು' ಎಂದು ಅವರು ಹೇಳಿದರು.

ಪಟೋಲೆ ಹೇಳಿಕೆಗೆ ಪ್ರತಿಕ್ರಿಯಿಸಿರುವ ಕೇಂದ್ರ ನಾಗರಿಕ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಅವರು 'ಚೀತಾಗಳನ್ನು ನಮೀಬಿಯಾದಿಂದ ತರಲಾಗಿದೆಯೇ ಹೊರತು ನೈಜೀರಿಯಾದಿಂದಲ್ಲ' ಎಂದು ಟ್ವೀಟ್ ಮಾಡಿದ್ದಾರೆ. ಪೋಸ್ಟ್‌ ಅನ್ನು ಪಟೋಲೆ ಅವರಿಗೆ  ಟ್ಯಾಗ್ ಮಾಡಿದ್ದಾರೆ.

 'ಚೀತಾಗಳನ್ನು ಭಾರತಕ್ಕೆ ತರುವುದರಿಂದ ಬಡತನ, ನಿರುದ್ಯೋಗ, ಹಣದುಬ್ಬರ ಕೊನೆಗೊಳ್ಳುತ್ತದೆಯೇ. ಚೀತಾಗಳನ್ನು ತರುವುದರಿಂದ ರೈತರು ಮತ್ತು ದೇಶದ ಗಡಿಗಳು ಸುರಕ್ಷಿತವಾಗಿರಬಹುದೇ? ಆದರೆ ಚೀತಾಗಳನ್ನು ಭಾರತಕ್ಕೆ ತರುವ ಮೂಲಕ ವಿದೇಶಿ ರೋಗವನ್ನು ತರಲಾಗಿದೆ. ಹಸುಗಳು ಮತ್ತು ಎತ್ತುಗಳು ಹಿಂದೆಂದೂ ಇಂತಹ ಕಾಯಿಲೆಯಿಂದ ಸತ್ತಿರಲಿಲ್ಲ. ರೈತರನ್ನು ನಾಶ ಮಾಡಲು ಮೊದಲ ಬಾರಿಗೆ ಇಂತಹ ರೋಗಗಳನ್ನು ಭಾರತಕ್ಕೆ ತರಲಾಯಿತು' ಎಂದು ಪಟೋಲೆ ಆರೋಪಿಸಿದ್ದಾರೆ.

ರೈತರಿಗೆ ಈಗ ಭಾರತೀಯ ಜನತಾ ಪಕ್ಷದ (ಬಿಜೆಪಿ) ನಿಜವಾದ ಮುಖ ಗೊತ್ತಾಗಿದೆ ಎಂದು ಅವರು ಹೇಳಿದರು. 

ಸೆಪ್ಟೆಂಬರ್ 17ರಂದು ನಮೀಬಿಯಾದಿಂದ ವಿಶೇಷ ವಿಮಾನದ ಮೂಲಕ ಎಂಟು ಚೀತಾಗಳನ್ನು ದೇಶಕ್ಕೆ ತರಲಾಯಿತು. ಕುನೊ ರಾಷ್ಟ್ರೀಯ ಉದ್ಯಾನವನದಲ್ಲಿ ಪ್ರಧಾನಿ ಮೋದಿ ಅವರು ಅವುಗಳನ್ನು ಬಿಡುಗಡೆ ಮಾಡಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು