ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಾರಾಷ್ಟ್ರದಲ್ಲಿ ಲಾಕ್‌ಡೌನ್‌ ಇಲ್ಲ, 6 ತಿಂಗಳು ಮಾಸ್ಕ್‌ ಕಡ್ಡಾಯ: ಸಿಎಂ

Last Updated 20 ಡಿಸೆಂಬರ್ 2020, 10:29 IST
ಅಕ್ಷರ ಗಾತ್ರ

ಮುಂಬೈ: ಮಹಾರಾಷ್ಟ್ರದಲ್ಲಿ ಮುಂಬರುವ ಆರು ತಿಂಗಳ ತನಕ ಮಾಸ್ಕ್‌ ಧರಿಸುವುದು ಕಡ್ಡಾಯ ಎಂದು ಮುಖ್ಯಮಂತ್ರಿ ಉದ್ಧವ್‌ ಠಾಕ್ರೆ ಅವರು ಭಾನುವಾರ ಹೇಳಿದರು.

ಸಾಮಾಜಿಕ ಜಾಲತಾಣದ ಮೂಲಕ ರಾಜ್ಯದ ಜನರನ್ನುದ್ಧೇಶಿಸಿ ಮಾತನಾಡಿದ ಅವರು, ‘ಮಹಾರಾಷ್ಟ್ರದಲ್ಲಿ ಮತ್ತೊಂದು ಲಾಕ್‌ಡೌನ್‌ ಮತ್ತುರಾತ್ರಿ ಕರ್ಫ್ಯೂ ಹೇರುವಂತೆ ತಜ್ಞರು ಸಲಹೆ ನೀಡಿದ್ದಾರೆ. ಆದರೆ ನನಗೆ ಆ ರೀತಿಯ ಕ್ರಮಕೈಗೊಳ್ಳಲು ಇಷ್ಟವಿಲ್ಲ’ ಎಂದು ಹೇಳಿದರು.

‘ರಾಜ್ಯದಲ್ಲಿ ಕೊರೊನಾ ವೈರಸ್‌ ಪರಿಸ್ಥಿತಿಯು ಸ್ವಲ್ಪಮಟ್ಟಿಗೆ ನಿಯಂತ್ರಣದಲ್ಲಿದೆ. ರೋಗ ನಿವಾರಣೆ ಮಾಡುವುದಕ್ಕಿಂತ ರೋಗ ಬರದಂತೆ ಮುಂಜಾಗೂರಕತೆ ವಹಿಸುವುದು ಉತ್ತಮ. ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್‌ ಧರಿಸಬೇಕು. ಇದನ್ನು ಮುಂದಿನ ಆರು ತಿಂಗಳಿನವರೆಗೆ ರೂಢಿ ಮಾಡಿಕೊಳ್ಳಬೇಕು’ ಎಂದು ಅವರು ತಿಳಿಸಿದರು.

ಮಹಾರಾಷ್ಟ್ರದಲ್ಲಿ ಶನಿವಾರ 3,940 ಹೊಸ ಪ್ರಕರಣಗಳು ವರದಿಯಾಗಿವೆ. ಈ ಮೂಲಕ ಒಟ್ಟು ಪ್ರಕರಣಗಳ ಸಂಖ್ಯೆ 18.92 ಲಕ್ಷ ದಾಟಿದೆ. ಅಲ್ಲದೆ ಶನಿವಾರ 74 ಮಂದಿ ಸೋಂಕಿನಿಂದ ಮೃತಪಟ್ಟಿದ್ದಾರೆ. ಇಲ್ಲಿ ಒಟ್ಟು 48,648 ಮಂದಿ ಕೋವಿಡ್‌ಗೆ ಬಲಿಯಾಗಿದ್ದಾರೆ.

ಮೆಟ್ರೊ ಕಾರು ಶೆಡ್‌ ವಿವಾದ: ಕಾಂಜೂರ್‌ಮಾರ್ಗ ಮೆಟ್ರೊ ಕಾರು ಶೆಡ್‌ ಭೂ ವಿವಾದವನ್ನು ಮಾತುಕತೆಯ ಮೂಲಕ ಬಗೆಹರಿಸಲು ಸಿದ್ಧ ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರು ಹೇಳಿದ್ದಾರೆ.

‘ಈ ವಿವಾದ ಸಂಬಂಧ ಕೇಂದ್ರ ಸರ್ಕಾರವು ಮಹಾರಾಷ್ಟ್ರ ಸರ್ಕಾರದ ವಿರುದ್ಧ ನ್ಯಾಯಾಲಯದ ಮೊರೆ ಹೋಗಿದೆ. ಈ ಭೂಮಿ ರಾಜ್ಯ ಸರ್ಕಾರಕ್ಕೆ ಸೇರಿರುವುದು ಎಂಬುದಕ್ಕೆ ನಮ್ಮ ಬಳಿ ದಾಖಲೆಗಳಿವೆ. ಒಂದು ವೇಳೆ ಭೂ ಮಾಲೀಕನ ಕುರಿತಾಗಿ ವಿವಾದಗಳಿದ್ದರೆ ಅದನ್ನು ಮಾತುಕತೆ ಮೂಲಕ ಬಗೆಹರಿಸಲು ನಾವು ಸಿದ್ಧ’ ಅವರು ಅಭಿಪ್ರಾಯಪಟ್ಟರು.

ಕಾಂಜೂರ್‌ಮಾರ್ಗ ಪ್ರದೇಶದಲ್ಲಿ ಮೆಟ್ರೊ ಕಾರ್‌ ಶೆಡ್‌ ನಿರ್ಮಿಸಲು 102 ಎಕರೆ ಭೂಮಿಯನ್ನು ಮುಂಬೈ ಸಬ್‌ಅರ್ಬನ್ ಜಿಲ್ಲಾಧಿಕಾರಿ ಮಂಜೂರ್‌ ಮಾಡಿದ್ದರು. ಇದಕ್ಕೆ ಬಾಂಬೆ ಹೈಕೋರ್ಟ್‌ ಬುಧವಾರ ತಡೆಯಾಜ್ಞೆ ನೀಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT