ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಿಳೆ ಸಾವು ಪ್ರಕರಣ: ಮಹಾರಾಷ್ಟ್ರ ಸಚಿವ ಸಂಜಯ್ ರಾಥೋಡ್ ರಾಜೀನಾಮೆ

Last Updated 28 ಫೆಬ್ರುವರಿ 2021, 14:13 IST
ಅಕ್ಷರ ಗಾತ್ರ

ಮುಂಬೈ: ಮಹಿಳೆಯೊಬ್ಬರ ಸಾವಿಗೆ ಸಂಬಂಧಿಸಿ ಪ್ರತಿಪಕ್ಷ ಬಿಜೆಪಿಯಿಂದ ತೀವ್ರ ಟೀಕೆ ಎದುರಿಸುತ್ತಿರುವ ಮಹಾರಾಷ್ಟ್ರ ಅರಣ್ಯ ಸಚಿವ ಸಂಜಯ್ ರಾಥೋಡ್ ಭಾನುವಾರ ರಾಜೀನಾಮೆ ಸಲ್ಲಿಸಿದ್ದಾರೆ.

ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರಿಗೆ ರಾಜೀನಾಮೆ ಸಲ್ಲಿಸಿದ ಬಳಿಕ ರಾಥೋಡ್ ಈ ವಿಚಾರ ಬಹಿರಂಗಪಡಿಸಿದ್ದಾರೆ.

ಮುಖ್ಯಮಂತ್ರಿಗಳನ್ನು ಅವರ ಅಧಿಕೃತ ನಿವಾಸ ‘ವರ್ಷಾ’ದಲ್ಲಿ ಭೇಟಿಯಾದ ಬಳಿಕ ಮಾಧ್ಯಮದವರನ್ನು ಉದ್ದೇಶಿಸಿ ಮಾತನಾಡಿದ ಅವರು, ‘ಮಹಿಳೆಯ ಸಾವಿಗೆ ಸಂಬಂಧಿಸಿ ಕೆಟ್ಟ ರಾಜಕೀಯ ನಡೆಯುತ್ತಿದೆ. ಸತ್ಯ ಹೊರಬರಲಿ ಎಂದು ರಾಜೀನಾಮೆ ನೀಡಿದ್ದೇನೆ’ ಎಂದು ಹೇಳಿದ್ದಾರೆ.

‘30 ವರ್ಷಗಳ ಸಾರ್ವಜನಿಕ ಜೀವನದಲ್ಲಿ ನಾನು ಗಳಿಸಿರುವ ವರ್ಚಸ್ಸು, ಘನತೆ ಹಾಗೂ ಪ್ರತಿಷ್ಠೆಯನ್ನು ನಾಶ ಮಾಡುವ ಯತ್ನ ನಡೆದಿದೆ. ಯಾವುದೇ ನಿರ್ಧಾರ ತೆಗೆದುಕೊಳ್ಳುವ ಮುನ್ನ ತನಿಖೆಯಾಗಲಿ ಎಂದು ನಾನು ಹೇಳುತ್ತಿದ್ದೆ. ಆದರೆ, ಪ್ರತಿಪಕ್ಷದವರು ಬಜೆಟ್ ಅಧಿವೇಶನಕ್ಕೆ ಅಡ್ಡಿಪಡಿಸುವ ಬೆದರಿಕೆಯೊಡ್ಡಿದ್ದಾರೆ’ ಎಂದು ಅವರು ಹೇಳಿದ್ದಾರೆ.

ಭೀಡ್ ಜಿಲ್ಲೆಯ ಪೂಜಾ ಚವಾಣ್ (23) ಮೃತದೇಹ ಫೆಬ್ರುವರಿ 8ರಂದು ಪುಣೆಯಲ್ಲಿ ಪತ್ತೆಯಾಗಿತ್ತು. ಅವರು ಕಟ್ಟಡದಿಂದ ಬಿದ್ದು ಮೃತಪಟ್ಟಿದ್ದಾರೆ ಎನ್ನಲಾಗಿತ್ತು. ಮಹಿಳೆ ಜತೆ ಸಚಿವರಿಗೆ ಸಂಬಂಧವಿದೆ ಎಂದು ಬಿಜೆಪಿ ಆರೋಪಿಸಿದೆ. ಸಚಿವರು ಆಕೆಯ ಜತೆಗಿದ್ದರು ಎನ್ನಲಾದ ಫೋಟೊ, ಮಾತನಾಡಿದ್ದರು ಎನ್ನಲಾಗಿರುವ ಆಡಿಯೊ ಕ್ಲಿಪ್, ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆದ ಬಳಿಕ ಬಿಜೆಪಿ ಈ ಆರೋಪ ಮಾಡಿತ್ತು.

ಈ ಮಧ್ಯೆ, ರಾಜೀನಾಮೆ ನೀಡಿದರಷ್ಟೇ ಸಾಲದು ಎಂದಿರುವ ವಿಧಾನಸಭೆ ಪ್ರತಿಪಕ್ಷ ನಾಯಕ ದೇವೇಂದ್ರ ಫಡಣವೀಸ್, ಸಚಿವರ ವಿರುದ್ಧ ಎಫ್‌ಐಆರ್ ದಾಖಲಿಸಬೇಕು ಎಂದು ಆಗ್ರಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT