ಮಂಗಳವಾರ, ಮೇ 18, 2021
22 °C

ಮುಂಬೈ: 5–ಸ್ಟಾರ್ ಹೊಟೇಲ್‌ಗಳಲ್ಲಿ ಕೋವಿಡ್‌ ರೋಗಿಗಳ ಆರೈಕೆಗೆ ಬಿಎಂಸಿ ಸಮ್ಮತಿ

ಏಜೆನ್ಸೀಸ್‌ Updated:

ಅಕ್ಷರ ಗಾತ್ರ : | |

Prajavani

ಮುಂಬೈ: ಕೊರೊನಾ ವೈರಸ್‌ ಸೋಂಕಿತರನ್ನು ಪಂಚ ತಾರಾ ಹೊಟೇಲ್‌ಗಳಲ್ಲಿ ದಾಖಲಿಸಿಕೊಂಡು ಆರೈಕೆ ಮಾಡಲು ಬೃಹನ್‌ಮುಂಬೈ ಮುನ್ಸಿಪಲ್‌ ಕಾರ್ಪೊರೇಷನ್‌ (ಬಿಎಂಸಿ) ಗುರುವಾರ ಅನುಮತಿ ನೀಡಿದೆ.

ಸದ್ಯ ಎರಡು ಪಂಚ ತಾರಾ ಹೊಟೇಲ್‌ಗಳ ಬಳಕೆಗೆ ಬಿಎಂಸಿ ಸಮ್ಮತಿಸಿದೆ. ಮೆರೀನ್‌ ಡ್ರೈವ್‌ನ ಇಂಟರ್‌ಕಾಂಟಿನೆಂಟಲ್‌ ಹೊಟೇಲ್‌ನಲ್ಲಿ 22 ಹಾಸಿಗೆಗಳು ಹಾಗೂ ಬಾಂದ್ರಾ ಕರ್ಲ್‌ ಕಾಂಪ್ಲೆಕ್ಸ್‌ನ (ಬಿಕೆಸಿ) ಟ್ರೈಡೆಂಟ್‌ ಹೊಟೇಲ್‌ನಲ್ಲಿ 20 ಹಾಸಿಗೆಗಳು ಕೋವಿಡ್‌–19 ರೋಗಿಗಳಿಗಾಗಿ ಲಭ್ಯವಿರಲಿವೆ. ಅವಶ್ಯವಾದರೆ ಮುಂದಿನ ದಿನಗಳಲ್ಲಿ ಕೊರೊನಾ ಸೋಂಕಿತರ ದಾಖಲಾತಿಗೆ ಮತ್ತಷ್ಟು ಹೊಟೇಲ್‌ಗಳನ್ನು ಬಳಸಿಕೊಳ್ಳಬಹುದು ಎಂದು ಬಿಎಂಸಿ ಹೇಳಿರುವುದಾಗಿ ಹಿಂದುಸ್ತಾನ್‌ ಟೈಮ್ಸ್‌ ವರದಿ ಮಾಡಿದೆ.

'ಮುಂಬೈನ ಕೆಲವು 4–ಸ್ಟಾರ್‌ ಮತ್ತು 5–ಸ್ಟಾರ್‌ ಹೊಟೇಲ್‌ಗಳನ್ನು ಕೋವಿಡ್‌–19 ಆರೈಕೆ ಕೇಂದ್ರಗಳಾಗಿ ಮಾರ್ಪಡಿಸಲಾಗುತ್ತದೆ ಹಾಗೂ ಸರ್ಕಾರವು ಮೂರು ಜಂಬೊ ಆಸ್ಪತ್ರೆಗಳನ್ನು ರೂಪಿಸಲು ನಿರ್ಧರಿಸಿದೆ' ಎಂದು ಬಿಎಂಸಿ ಮುಖ್ಯಸ್ಥ ಇಕ್ಬಾಲ್‌ ಸಿಂಗ್‌ ಚಾಹಲ್‌ ಸೋಮವಾರ ತಿಳಿಸಿದ್ದರು.

ಮುಂಬೈನಲ್ಲಿ ಕೋವಿಡ್‌ ದೃಢಪಟ್ಟ ಪ್ರಕರಣಗಳ ಸಂಖ್ಯೆ ದಿನದಿಂದ ದಿನಕ್ಕೆ ಏರುಗತಿಯಲ್ಲಿ ಸಾಗುತ್ತಿದ್ದು, ಈಗಾಗಲೇ ಆಸ್ಪತ್ರೆಗಳ ಶೇ 80ಕ್ಕೂ ಹೆಚ್ಚು ಹಾಸಿಗೆಗಳು ಭರ್ತಿಯಾಗಿವೆ. ತೀವ್ರ ನಿಗಾ ಘಟಕಗಳು ಹಾಗೂ ವೆಂಟಿಲೇಟರ್‌ ವ್ಯವಸ್ಥೆಯಿರುವ ಹಾಸಿಗೆಗಳಲ್ಲಿ ಶೇ 98ರಷ್ಟು ಭರ್ತಿಯಾಗಿವೆ.

ಇದನ್ನೂ ಓದಿ: Covid-19 India Update: 24 ಗಂಟೆಗಳಲ್ಲಿ 2 ಲಕ್ಷಕ್ಕೂ ಅಧಿಕ ಕೋವಿಡ್‌ ಪ್ರಕರಣ

ಪ್ರಮುಖ ಖಾಸಗಿ ಆಸ್ಪತ್ರೆಗಳ ವೃತ್ತಿಪರರು ಹೊಟೇಲ್‌ ಕೋವಿಡ್‌ ಆರೈಕೆ ಕೇಂದ್ರಗಳ ಕಾರ್ಯಾಚರಣೆ ನಿರ್ವಹಿಸಲಿದ್ದಾರೆ. ಕೋವಿಡ್‌ನಿಂದ ಗುಣಮುಖರಾಗುತ್ತಿರುವ ರೋಗಿಗಳು ಹಾಗೂ ಗಂಭೀರ ಸಮಸ್ಯೆ ಇರದ ರೋಗಿಗಳನ್ನು ಹೊಟೇಲ್‌ಗಳ ಕೋವಿಡ್‌ ಕೇಂದ್ರಗಳಿಗೆ ಕಳುಹಿಸುವ ವ್ಯವಸ್ಥೆಯನ್ನು ವೈದ್ಯರು ನಿರ್ವಹಿಸಲಿದ್ದಾರೆ. ಇದರಿಂದಾಗಿ ಅಗತ್ಯವಿರುವವರಿಗೆ ಆಸ್ಪತ್ರೆಗಳಲ್ಲಿ ಹಾಸಿಗೆಗಳ ಲಭ್ಯತೆಗೆ ಅನುವಾಗಲಿದೆ ಎಂದು ಇಕ್ಬಾಲ್‌ ಸಿಂಗ್‌ ಹೇಳಿದ್ದಾರೆ.

ಬುಧವಾರ ಮುಂಬೈನಲ್ಲಿ 9,931 ಹೊಸ ಪ್ರಕರಣಗಳು ದಾಖಲಾಗಿದ್ದು, ಒಟ್ಟು ಪ್ರಕರಣಗಳ ಸಂಖ್ಯೆ 5,45,195ಕ್ಕೇ ಏರಿಕೆಯಾಗಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು