ಶನಿವಾರ, ಜೂನ್ 25, 2022
25 °C

ಪಿಎಂ ಕೇರ್‌ಗೆ ಇದೇ ಶಿಯೋಮಿಯಿಂದ ₹10 ಕೋಟಿ ಪಡೆದಿದ್ದರು: ಮಹುವಾ ಮೋಯಿತ್ರಾ

ಪ್ರಜಾವಾಣಿ ವೆಬ್‌ಡೆಸ್ಕ್‌‌ Updated:

ಅಕ್ಷರ ಗಾತ್ರ : | |

ನವದೆಹಲಿ: ವಿದೇಶಿ ವಿನಿಮಯ ನಿಯಮ ಉಲ್ಲಂಘನೆ ಹಾಗೂ ಕಾನೂನುಬಾಹಿರ ಹಣ ವರ್ಗಾವಣೆಯಲ್ಲಿ ತೊಡಗಿದ ಆರೋಪದಡಿ ಜಾರಿ ನಿರ್ದೇಶನಾಲಯವು ಚೀನಾ ಮೂಲದ ಶಿಯೋಮಿ ಇಂಡಿಯಾ ಕಂಪನಿಯ ಸುಮಾರು ₹5,551 ಕೋಟಿ ಹಣವನ್ನು ಶನಿವಾರ ಜಪ್ತಿ ಮಾಡಿದೆ.

ಈ ಬಗ್ಗೆ ಗಮನ ಸೆಳೆದು ಟ್ವೀಟ್ ಮಾಡಿರುವ ಟಿಎಂಸಿ ಸಂಸದೆ ಮಹುವಾ ಮೋಯಿತ್ರಾ ಅವರು, ಶಿಯೋಮಿ ಇಂಡಿಯಾದ ಸುಮಾರು ₹5,500 ಕೋಟಿ ಹಣ ಜಪ್ತಿ ಮಾಡಿದೆ. ಆದರೆ, ಇದೇ ಕೇಂದ್ರ ಸರ್ಕಾರ ತನ್ನ ಪ್ರಧಾನ ಮಂತ್ರಿ ಕಲ್ಯಾಣ ನಿಧಿ (ಪಿಎಂ ಕೇರ್ಸ್) ಗೆ ಕಳೆದ ವರ್ಷ ₹10 ಕೋಟಿ ದೇಣಿಗೆ ಸ್ವೀಕರಿಸಿದೆ ಎಂದು ಹೇಳಿದ್ದಾರೆ.

ಕಾನೂನು ಉಲ್ಲಂಘಿಸಿದ ಕಂಪನಿಯಿಂದ ಹೇಗೆ ದೇಣಿಗೆ ಸ್ವೀಕರಿಸಿದರು ಎಂದು ಮಹುವಾ ಮೋಯಿತ್ರಾ ಪ್ರಶ್ನಿಸಿದ್ದಾರೆ. ಈ ಮೂಲಕ ಸಂಸತ್ತಿನಲ್ಲಿ ನಾವು ಕೇಳಲಾದ ಎಲ್ಲಾ ಪ್ರಶ್ನೆಗಳಿಗೆ ಕಲ್ಲೆಸೆಯಲಾಯಿತು ಎಂದಿದ್ದಾರೆ.

ಸಂಸತ್ತಿನಲ್ಲಿ ಟಿಎಂಸಿ ಸಂಸದರು ಚೀನಾ ಮೂಲದ ಕಂಪನಿಗಳು ಭಾರತದಲ್ಲಿ ಅಕ್ರಮ ವಹಿವಾಟು ನಡೆಸುತ್ತಿವೆ. ಈ ಬಗ್ಗೆ ಕೇಂದ್ರ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಆರೋಪಿಸಿದ್ದರು

 

ಏತನ್ಮಧ್ಯೆ ಜಪ್ತಿ ಬಗ್ಗೆ ಶಿಯೋಮಿ ಇಂಡಿಯಾ ಪ್ರತಿಕ್ರಿಯೆ ನೀಡಿದ್ದು, ಭಾರತದಲ್ಲಿ ತನ್ನೆಲ್ಲ ವಹಿವಾಟುಗಳು ನೂರಕ್ಕೆ ನೂರರಷ್ಟು ಪಾರದರ್ಶಕವಾಗಿವೆ. ಕಾನೂನು ಹೋರಾಟ ನಡೆಸಲಾಗುವುದು ಎಂದು ಹೇಳಿದೆ.

ದೆಹಲಿ ಸೇರಿದಂತೆ ಶಿಯೋಮಿ ಕಂಪನಿಯ ವಿವಿಧ ಬ್ಯಾಂಕಿಂಗ್ ವಹಿವಾಟುಗಳನ್ನು ಪರಿಶೀಲನೆ ನಡೆಸಿ ಇ.ಡಿ ಈ ಕ್ರಮ ಕೈಗೊಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಶಿಯೋಮಿ ಭಾರತದಲ್ಲಿ ಎಂಐ ಬ್ರಾಂಡ್ ಹೆಸರಲ್ಲಿ ಮೊಬೈಲ್, ಸ್ಮಾರ್ಟ್‌ ಫೋನ್‌ ಸೇರಿದಂತೆ ವಿವಿಧ ರೀತಿಯ ಎಲೆಕ್ಟ್ರಾನಿಕ್ ಉಪಕರಣಗಳು ಹಾಗೂ ಬಿಡಿ ವಸ್ತುಗಳ ಉತ್ಪಾದನೆ ಮತ್ತು ಮಾರಾಟದಲ್ಲಿ ಮುಂಚೂಣಿಯಲ್ಲಿದೆ.

ಶಿಯೋಮಿ ಪ್ರತಿಕ್ರಿಯೆ

ಭಾರತೀಯ ವಿದೇಶಿ ವಿನಿಮಯ ಕಾನೂನನ್ನು ಉಲ್ಲಂಘಿಸಿದ್ದಕ್ಕಾಗಿ ಶಿಯೋಮಿ ಇಂಡಿಯಾ ಕಂಪನೊ=ಇಗೆ ಸೇರಿದ ₹ 5551.27 ಕೋಟಿ ಹಣವನ್ನು ಜಾರಿ ನಿರ್ದೇಶನಾಲಯ (ಇಡಿ) ಮುಟ್ಟುಗೋಲು ಹಾಕಿಕೊಂಡಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಚೀನಾದ ಮೊಬೈಲ್ ಉತ್ಪಾದನಾ ಕಂಪನಿಯು, ತಪ್ಪುಗ್ರಹಿಕೆಯನ್ನು ಹೋಗಲಾಡಿಸಲು ಭಾರತೀಯ ಅಧಿಕಾರಿಗಳ ಜೊತೆ ಕೆಲಸ ಮಾಡುವುದಾಗಿ ಹೇಳಿದೆ.

'ಭಾರತದ ಎಲ್ಲ ನಿಯಮಗಳಿಗೆ ಬದ್ಧವಾಗಿರುವ ಬ್ರ್ಯಾಂಡ್ ಆಗಿ, ನಮ್ಮ ಎಲ್ಲಾ ಕಾರ್ಯಾಚರಣೆಗಳು ಸ್ಥಳೀಯ ಕಾನೂನುಗಳು ಮತ್ತು ನಿಬಂಧನೆಗಳ ಅನುಸಾರವಾಗಿ ನಡೆಸಲಾಗಿದೆ’ಎಂದು ಶಿಯೋಮಿ ಹೇಳಿದರು.

‘ನಾವು ಸರ್ಕಾರಿ ಅಧಿಕಾರಿಗಳ ಆದೇಶಗಳನ್ನು ಅತ್ಯಂತ ಎಚ್ಚರಿಕೆಯಿಂದ ಅಧ್ಯಯನ ಮಾಡಿದ್ದೇವೆ. ನಮ್ಮ ರಾಯಧನ ಪಾವತಿಗಳು ಮತ್ತು ಬ್ಯಾಂಕ್‌ಗೆ ಹೇಳಿಕೆಗಳು ಎಲ್ಲಾ ಅಸಲಿ ಮತ್ತು ಸತ್ಯವೆಂದು ನಾವು ಹೇಳುತ್ತೇವೆ’ ಎಂದು ಅವರು ಹೇಳಿದ್ದಾರೆ. ನಮ್ಮ ರಾಯಧನ ಪಾವತಿಗಳು ಕಾನೂನುಬದ್ಧವಾಗಿದೆ. ಆದರೂ, ಯಾವುದೇ ತಪ್ಪು ತಿಳುವಳಿಕೆಯನ್ನು ಸ್ಪಷ್ಟಪಡಿಸಲು ಸರ್ಕಾರಿ ಅಧಿಕಾರಿಗಳೊಂದಿಗೆ ನಿಕಟವಾಗಿ ಕೆಲಸ ಮಾಡಲು ನಾವು ಬದ್ಧರಾಗಿದ್ದೇವೆ’ಎಂದು ವಕ್ತಾರರು ಸೇರಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು