ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜ್ಞಾನಪೀಠ ಪುರಸ್ಕೃತ ಮಲಯಾಳಂ ಕವಿ ಅಕ್ಕಿತ್ತಂ ನಿಧನ

Last Updated 15 ಅಕ್ಟೋಬರ್ 2020, 4:56 IST
ಅಕ್ಷರ ಗಾತ್ರ
ADVERTISEMENT
""
""
""

ನವದೆಹಲಿ: ಜ್ಞಾನಪೀಠ ಪುರಸ್ಕೃತ ಮಲಯಾಳಂ ಕವಿ ಅಕ್ಕಿತ್ತಂ (94) ಗುರುವಾರ ಬೆಳಿಗ್ಗೆ 8.10ಕ್ಕೆ ತ್ರಿಶ್ಶೂರಿನ ಖಾಸಗಿ ಆಸ್ಪತ್ರೆಯಲ್ಲಿ ವಯೋಸಹಜ ಅನಾರೋಗ್ಯದಿಂದ ನಿಧನರಾದರು.

ಕೇರಳದ ಪಾಲಕ್ಕಾಡ್ ಜಿಲ್ಲೆಯಲ್ಲಿ 1926ರಲ್ಲಿ ಜನಿಸಿದ್ದ ಅಕ್ಕಿತ್ತಂ ಅವರ ಪೂರ್ಣ ಹೆಸರು ಅಕ್ಕಿತ್ತಂಅಚ್ಯುತನ್ ನಂಬೂದಿರಿ. ತಮ್ಮ 8ನೇ ವಯಸ್ಸಿನಲ್ಲಿ ಅವರು ಮೊದಲ ಪದ್ಯ ಬರೆದಿದ್ದರು.

1973ರಲ್ಲಿ ಸಾಹಿತ್ಯ ಅಕಾಡೆಮಿ ಪುರಸ್ಕಾರವೂ ಸೇರಿದಂತೆ ಹಲವು ಪ್ರಶಸ್ತಿ-ಪುರಸ್ಕಾರಗಳು ಅಕ್ಕಿತ್ತಂ ಅವರಿಗೆ ಸಂದಿತ್ತು. ಪದ್ಮಶ್ರೀ ಪುರಸ್ಕೃತ ಅಕ್ಕಿತ್ತಂ ಅವರುಸಾಹಿತ್ಯ ಜಗತ್ತಿನಲ್ಲಿ ಎತ್ತರಕ್ಕೆ ಬೆಳೆದಿದ್ದರು.

ವಿಮರ್ಶಾ ಪ್ರಬಂಧಗಳು, ಸಣ್ಣಕಥೆಗಳೂ ಸೇರಿದಂತೆ ಹಲವು ಸಾಹಿತ್ಯ ಪ್ರಕಾರಗಳಲ್ಲಿ ಕೊಡುಗೆ ನೀಡಿದ್ದಾರೆ. ಹಲವು ಭಾಷೆಗಳಿಗೆ ಇವರ ಕೃತಿಗಳು ಅನುವಾದವಾಗಿವೆ.

ಮಲಯಾಳಂ ಭಾಷೆಯ ವಿಶಿಷ್ಟ ಕವಿಅಕ್ಕಿತ್ತಂ ಅಚ್ಯುತನ್ ನಂಬೂದಿರಿ ಜ್ಞಾನಪೀಠ ಪ್ರಶಸ್ತಿಗೆ ಭಾಜನರಾದ ಹಿನ್ನೆಲೆಯಲ್ಲಿ 'ಮಯೂರ' ಮಾಸ ಪತ್ರಿಕೆಯ ಫೆಬ್ರುವರಿ 2020ರ ಸಂಚಿಕೆಯಲ್ಲಿಪ್ರಕಟವಾಗಿದ್ದ ಲೇಖನ ಇದು.ಗಾಂಧೀವಾದಿ ಲೇಖಕ ಅಚ್ಯುತನ್‌ ಬದುಕು–ಸಾಹಿತ್ಯ ಕುರಿತ ನುಡಿನೋಟ ಇಲ್ಲಿದೆ.

ಕಾಲಿನಡಿಯ ನಿಧಿಯ ಕಂಡ ಅಕ್ಕಿತ್ತಂ

ಸುಮಾರು ವರ್ಷಗಳ ಹಿಂದಿನ ಕತೆಯಿದು. ಉಣ್ಣಿಕೃಷ್ಣನ್ ನಾಯರ್ ಮಾಸ್ತರ್ ಎಂಬ ಶಿಕ್ಷಕರೊಬ್ಬರು ಕವಿತೆ ಬರೆಯುತ್ತಿದ್ದ ವಕೀಲರ ಗುಮಾಸ್ತನಾಗಿದ್ದ ಇಡಶ್ಶೇರಿ ಗೋವಿಂದನ್ ನಾಯರ್ ಬಳಿ ಬಂದು, ‘ಈ ಹುಡುಗ ಅಲ್ಪ ಸ್ವಲ್ಪ ಕವಿತೆ ಬರೆಯುತ್ತಿದ್ದಾನೆ. ಒಂಚೂರು ಗಮನಿಸಿ’ ಎಂದಿದ್ದರು. ಅವರು ತಂದಿದ್ದ ಕವಿತೆಯನ್ನು ಓದಿದ ಇಡಶ್ಶೇರಿ, ‘ಪರ್ವಾಗಿಲ್ಲ, ನಾನು ಗಮನಿಸುವೆ. ಇವನಿಗೆ ನಗುವುದಕ್ಕೆ ಗೊತ್ತಿದೆ’ ಎಂದಿದ್ದರು.

ನಗು ಮತ್ತು ಅಳು ಗೊತ್ತಿರುವವನು ಮನುಷ್ಯನಾಗುತ್ತಾನೆ. ಹಾಗಿರುವ ಮನುಷ್ಯನಿಗೆ ಕವಿತೆ ಬರೆಯಲು ಸಾಧ್ಯ ಎಂಬ ನಂಬಿಕೆ ಇದ್ದವರಾಗಿದ್ದರು ಇಡಶ್ಶೇರಿ. ನಂತರ ಆ ಹುಡುಗನನ್ನುದ್ದೇಶಿಸಿ, ‘ಕಾಲಿನಡಿಯಲ್ಲಿ ನಿಧಿಯಿದ್ದರೆ ಸಾಲದು ನಂಬೂದಿರಿ ಹುಡುಗಾ, ಅದನ್ನು ನೋಡುವ ಕಣ್ಣುಗಳೂ ಬೇಕು’ ಎಂದು ಹೇಳಿ ಆ ಕವಿತೆಯನ್ನು ತಿದ್ದಿದರು. ಕಾಲ ಕಳೆದಂತೆ ಆ ನಂಬೂದಿರಿ ಹುಡುಗ ಕಾಲಿನಡಿಯಲ್ಲಿದ್ದ ನಿಧಿಯನ್ನು ಕಂಡುಕೊಂಡ. ಆ ಹುಡುಗನೇ ‘ಅಕ್ಕಿತ್ತಂ’ ಎಂಬ ಮನೆ ಹೆಸರಿನಿಂದ ಖ್ಯಾತರಾದ ಅಕ್ಕಿತ್ತಂ ಅಚ್ಯುತನ್ ನಂಬೂದಿರಿ.

ಮಲಪ್ಪುರಂ ಜಿಲ್ಲೆಯ ಪೊನ್ನಾನಿಯಲ್ಲಿರುವ ಇಡಶ್ಶೇರಿ ಅವರಿಗೆ ತನ್ನ ಕವಿತೆಗಳನ್ನು ತೋರಿಸಲು ಅಕ್ಕಿತ್ತಂ ಕುಮರನೆಲ್ಲೂರಿನಿಂದ ಆಗಾಗ ಬರುತ್ತಿದ್ದರು. ಖ್ಯಾತ ಕವಿ ಉರೂಬ್ (ಪಿ.ಸಿ. ಕುಟ್ಟಿಕೃಷ್ಣನ್) ‘ಪೊನ್ನಾನಿ ಕಳರಿ’ ಎಂದು ಕರೆದ ಅದೇ ಸಾಹಿತ್ಯ ವಲಯದಲ್ಲಿ ಅಕ್ಕಿತ್ತಂ ಕವಿತೆ ಬರೆಯಲು ಕಲಿತಿದ್ದು.

‘ಇನ್ನೊಬ್ಬರಿಗಾಗಿ ನಾನು ಅಳುವಾಗ
ನನ್ನಾತ್ಮದಲ್ಲಿ ಬೆಳಕು ತುಂಬುತ್ತದೆ
ಇನ್ನೊಬ್ಬರಿಗಾಗಿ ನಾನು ಕಿರು ನಗುವಾಗ
ನನ್ನ ಹೃದಯ ಬೆಳದಿಂಗಳಂತೆ ಹೊಳೆಯುವುದು’

ಎಂದು ಅಕ್ಕಿತ್ತಂ ಬರೆದಿದ್ದು ಇಲ್ಲಿಯೇ. ‘ವೆಳಿಚ್ಚಂ ದುಃಖ ಮಾಣುಣ್ಣಿ ತಮಸಲ್ಲೋ ಸುಖಪ್ರದಂ’ (ಬೆಳಕು ದುಃಖ, ಕತ್ತಲೆಯೇ ಸುಖ) ಎಂದು ಸಾರಿದ ಕವಿ ಅಕ್ಕಿತ್ತಂ.

ಗಾಂಧಿ ಬೇಕೋ, ಕಾರ್ಲ್ ಮಾರ್ಕ್ಸ್ ಬೇಕೋ? ರಕ್ತ ಹರಿಸುವ ಕ್ರಾಂತಿ ಬೇಕೋ? ಮಾನವೀಯತೆಯನ್ನು ಸಾರುವ ಪ್ರೀತಿ ಬೇಕೋ ಎಂಬ ಪ್ರಶ್ನೆಗಳನ್ನಿಟ್ಟು ಕೊಂಡು ಅಕ್ಕಿತ್ತಂ ರಚಿಸಿದ ಕವನ ‘ಇರುಪತಾಂ ನೂಟ್ಟಾಂಡಿಂಡೆ ಇತಿಹಾಸಂ’. ಇದು ಕಮ್ಯೂನಿಸ್ಟ್ ವಿರೋಧಿ ಕವನ ಎಂದು ಹಲವರು ವಿಶ್ಲೇಷಿಸಿದ್ದಾರೆ. ಅದಕ್ಕೆ ಕಾರಣವೂ ಇದೆ. ಕಮ್ಯೂನಿಸಂ ಬಗ್ಗೆ ಹಲವಾರು ಭಿನ್ನಾಭಿಪ್ರಾಯಗಳಿದ್ದ ಕಾಲವಾಗಿತ್ತು ಅದು. ಆದರೆ ಮಲಯಾಳಂ ಸಾಹಿತ್ಯದಲ್ಲಿ ಮಾರ್ಕ್ಸಿಯನ್ ಎಲಿಯನೇಷನ್ (Marxian alienation) ಎಂಬ ಆಶಯ ಸರಳ ರೀತಿಯಲ್ಲಿ ವ್ಯಾಖ್ಯಾನಗೊಂಡಿದ್ದು ಅಕ್ಕಿತ್ತಂ ಅವರ ಮೂಲಕವೇ.

‘ಪಂಡತ್ತೆ ಮೇಲ್ಶಾಂತಿ’ ಎಂಬ ಕವಿತೆಯಲ್ಲಿ ಕವಿ ಹೀಗೆ ಹೇಳುತ್ತಾರೆ:

ನನ್ನದಲ್ಲ ಈ ಆನೆಗಳು
ನನ್ನದಲ್ಲ ಈ ಮಹಾಕ್ಷೇತ್ರ ಮಕ್ಕಳೇ

ದೇವಸ್ಥಾನದ ಆನೆಯ ಮೇಲೆ ಕುಳಿತಿರುವ ಮೇಲ್ಶಾಂತಿ ಅವರಲ್ಲಿ (ಪ್ರಧಾನ ಅರ್ಚಕರಲ್ಲಿ), ಅಲ್ಲಿರುವ ಪುಟ ಮಕ್ಕಳು ‘ನಮ್ಮನ್ನೂ ಆನೆ ಮೇಲೆ ಕೂರಿಸಿ’ ಎಂದು ಹೇಳುತ್ತಾರೆ. ಆಗ ಮೇಲ್ಶಾಂತಿ, ‘ಈ ದೇವಸ್ಥಾನ ನನ್ನದೋ, ಈ ಆನೆಗಳು ನನ್ನವೋ’ ಎಂದು ಯೋಚಿಸುತ್ತಾರೆ. ‘ಅಲ್ಲ’ ಎಂಬ ಉತ್ತರವನ್ನು ಕಂಡುಕೊಳ್ಳುತ್ತಾರೆ.

1926 ಮಾರ್ಚ್ 18ರಂದು ಪಾಲಕ್ಕಾಡ್ ಜಿಲ್ಲೆಯ ಕುಮರನೆಲ್ಲೂರ್ ಎಂಬಲ್ಲಿ ವಾಸುದೇವನ್ ನಂಬೂದಿರಿ ಮತ್ತು ಚೆಕ್ಕೂರ್ ಪಾರ್ವತಿ ಅಂತರ್ಜನಂ ಅನರ ಅವರ ಮಗನಾಗಿ ಅಕ್ಕಿತ್ತಂ ಅಚ್ಯುತನ್ ನಂಬೂದಿರಿ ಜನಿಸಿದರು. ಅವರ ಶಿಕ್ಷಣ ಆರಂಭವಾದುದು 8ನೇ ಕ್ಲಾಸಿಗೆ ಸೇರುವ ಮೂಲಕ! ಅದಕ್ಕೂ ಮೊದಲು ಉಪನಯನ ಆಗಿ ವೇದಾಭ್ಯಾಸ ಮಾಡುತ್ತಿದ್ದರು. ಜೊತೆಗೆ ಜೋತಿಷ್ಯ ಕಲಿತು ಪಿಶಾರಿಕ್ಕಲ್ ದೇವಾಲಯದಲ್ಲಿ ಅರ್ಚಕರಾದರು. ಅಲ್ಲಿದ್ದ ನಂಬೂದಿರಿಗಳು ಅಕ್ಷರ ಶ್ಲೋಕ ಮತ್ತು ಕವಿತೆಗಳನ್ನು ಬಲ್ಲವರಾಗಿದ್ದರು. ಅದು ಅಕ್ಕಿತ್ತಂ ಅವರ ಮೇಲೆ ಪ್ರಭಾವ ಬೀರಿತು. 14ನೇ ವರ್ಷದಲ್ಲಿ ತೃಕ್ಕಂಡಿಯೂರ್ ಕಳತ್ತೂಲ್ ಉಣ್ಣಿಕೃಷ್ಣನ್ ಎಂಬ ಶಿಕ್ಷಕರ ಮೂಲಕ ಗಣಿತ ಮತ್ತು ಇಂಗ್ಲಿಷ್ ಕಲಿತರು. ಕುಮರನಲ್ಲೂರ್ ಶಾಲೆಯಲ್ಲಿ ಪರೀಕ್ಷೆ ಬರೆದು 8ನೇ ತರಗತಿಗೆ ಸೇರ್ಪಡೆಯಾದರು. ಹೈಸ್ಕೂಲ್ ಶಿಕ್ಷಣದ ನಂತರ ಕೋಯಿಕ್ಕೋಡ್ ಸಾಮೂದಿರಿ ಕಾಲೇಜಿನಲ್ಲಿ ಇಂಟರ್ ‌ಮೀಡಿಯಟ್‌ಗೆ ಸೇರಿದರೂ ಅದನ್ನು ಪೂರ್ಣಗೊಳಿಸಲಿಲ್ಲ.

ಇಡಶ್ಶೇರಿ, ಬಾಲಮಣಿಯಮ್ಮ, ನಾಲಪ್ಪಾಡ್ ನಾರಾಯಣ ಮೆನನ್, ಕುಟ್ಟಿಕೃಷ್ಣ ಮಾರಾರ್ ಮೊದಲಾದವರೊಂದಿಗಿನ ಒಡನಾಟದಿಂದ ಕಾವ್ಯದ ಮೇಲಿನ ಅಕ್ಕಿತಂ ಅವರ ಆಸಕ್ತಿ ಹೆಚ್ಚುತ್ತಾ ಹೋಯಿತು. 1946ರಿಂದ 1949ರವರಗೆ ‘ಉಣ್ಣಿನಂಬೂದಿರಿ’ ಎಂಬ ಮಾಸಿಕದ ಸಂಪಾದಕರಾಗಿದ್ದರು. ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದ ಇವರು, ವಿ.ಟಿ. ಭಟ್ಟತ್ತಿರಿಪ್ಪಾಡ್, ಇಎಂಎಸ್, ಒಎಂಸಿ ನಾರಾಯಣನ್ ನಂಬೂದಿರಿಪ್ಪಾಡ್ ಮೊದಲಾದವರ ಪರ್ಸನಸ್ ಸೆಕ್ರಟರಿ ಆಗಿದ್ದವರು. ‘ಪೊನ್ನಾನಿ ಕೇಂದ್ರ ಕಲಾ ಸಮಿತಿ’ ಕಾರ್ಯದರ್ಶಿಯಾಗಿಯೂ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದಾರೆ. 1956 ಜುಲೈ 1ರಲ್ಲಿ ಕೋಯಿಕ್ಕೋಡ್ ಆಕಾಶವಾಣಿ ಕೇಂದ್ರ ಸೇರಿದ ಇವರು, ಆಮೇಲೆ ಆಕಾಶವಾಣಿ ಎಡಿಟರ್ ಆಗಿ 1985ರಲ್ಲಿ ನಿವೃತ್ತಿಹೊಂದಿದರು.

ಅಕ್ಕಿತ್ತಂ ಸಾಹಿತ್ಯ ಪಯಣ

ಮಲಯಾಳಂ ಸಾಹಿತ್ಯದಲ್ಲಿ ಆಧುನಿಕತೆಗೆ ತೆರೆದುಕೊಂಡ ಕವಿಗಳಲ್ಲಿ ಒಬ್ಬರಾಗಿದ್ದಾರೆ ಅಕ್ಕಿತ್ತಂ. ಪುರಾತನ ಕಾಲದ ಚೌಕಟ್ಟುಗಳಿಂದಾಚೆಗೆ ಬಂದು ಆಧುನಿಕತೆಗೆ ಪ್ರಸ್ತುತ ಕಾಲದ ಬದಲಾವಣೆಗಳನ್ನು ಮೈಗೂಡಿಸಿಕೊಂಡು ಕಾವ್ಯ ರಚಿಸಿದವರು ಅಕ್ಕಿತ್ತಂ.

‘ಇರುಪತಾಂ ನೂಟ್ಟಾಂಡಿಂಡೆ ಇತಿಹಾಸಂ’ ಎಂಬ ಅವರ ಮೊದಲ ಕವನಸಂಕಲನ ಚರ್ಚೆಗೆ ಕಾರಣವಾಗಿತ್ತು. ದೇಶೀಯ ಸಂಘಟನೆ ಮತ್ತು ನವೋತ್ಥಾನದ ಬೆಂಕಿಯಲ್ಲಿ ಉದಿಸಿದ ತಲೆಮಾರಿನ ಪ್ರತಿನಿಧಿಯಾಗಿದ್ದರು ಇವರು. ಸಮಾಜವಾದಿ ಆಶಯಗಳೊಂದಿಗೆ ನಂಬೂದಿರಿ ನವೋತ್ಥಾನ ಸಂಘಟನೆಗಳಲ್ಲಿಯೂ ಆಸಕ್ತಿಹೊಂದಿ ಸಾಮಾಜಿಕ ಕಾರ್ಯಕರ್ತದಲ್ಲಿ ತೊಡಗಿದ ಅವರು ಜನರ ನೋವಿಗೆ ಸ್ಪಂದಿಸುತ್ತಿದ್ದರು. ಮನುಷ್ಯನ ನೋವಿಗೆ ಮರುಗುವ ಅವರ ಕವನಗಳಲ್ಲಿ ಸ್ನೇಹದ ಲೇಪನವಿರುತ್ತಿತ್ತು. ಕಾವ್ಯದ ಮೂಲಕ ಅವರು ಜನರ ನೋವನ್ನು ಮರೆಸಲು ಯತ್ನಿಸುತ್ತಿದ್ದರು.

ಮನುಷ್ಯರ ಬಗ್ಗೆ ಮಾತ್ರವಲ್ಲ, ಭೂಮಿಯಲ್ಲಿರುವ ಸಕಲ ಜೀವಚರಾಚರಗಳ ಬಗ್ಗೆ ಅಕ್ಕಿತ್ತಂ ಅವರದು ಮಿಡಿಯುವ ಮನಸ್ಸು. ಜನರು ಪ್ರಕೃತಿಯ ಮೇಲೆಸಗುವ ದೌರ್ಜನ್ಯಗಳ ಬಗ್ಗೆ ಅವರಿಗೆ ಅಪಾರ ನೋವು. ಪ್ರಾಣಿ ಪಕ್ಷಿಗಳು ಅನುಭವಿಸುವ ನೋವು ತನ್ನದೇ ಎಂಬಂತೆ ಮರುಗುವ ಕವಿ ಇವರು.

ಗಾಢ ಚಿಂತನೆ ಮತ್ತು ಪ್ರಕೃತಿ–ಮಾನವೀಯತೆಗೆ ಸ್ಪಂದಿಸುವ ರೀತಿ ಅಕ್ಕಿತ್ತಂ ಅವರನ್ನು ಎಲ್ಲರೂ ಮೆಚ್ಚುವ ಕವಿಯನ್ನಾಗಿಸಿವೆ. ಕವಿತೆ, ಕತೆ, ನಾಟಕ, ಲೇಖನ ಮಾತ್ರವಲ್ಲದೆ ಅನುವಾದ ಕೃತಿಗಳ ಮೂಲಕವೂ ಅಕ್ಕಿತ್ತಂ ಸಾಹಿತ್ಯಲೋಕಕ್ಕೆ ಅಪಾರ ಕೊಡುಗೆಯನ್ನು ನೀಡಿದ್ದಾರೆ.

ಲಭಿಸಿದ ಪುರಸ್ಕಾರಗಳು

ಕೇಂದ್ರ ಸಾಹಿತ್ಯ ಅಕಾಡೆಮಿ ಪುರಸ್ಕಾರ, ಕೇರಳ ಸಾಹಿತ್ಯ ಅಕಾಡೆಮಿ ಪುರಸ್ಕಾರ, ಓಡಕ್ಕುಳಲ್, ಆಶಾನ್, ವಳ್ಳತ್ತೋಳ್ , ಜ್ಞಾನಪ್ಪಾನ ಪುರಸ್ಕಾರ, ಪದ್ಮಶ್ರೀ, ಎಳುತ್ತಚ್ಚನ್ ಪ್ರಶಸ್ತಿ, ಜ್ಞಾನಪೀಠ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT