ಕಾಶ್ಮೀರಿ ಪಂಡಿತ ಸಮುದಾಯದ ಇಂದಿನ ಪರಿಸ್ಥಿತಿಗೆ ಬಿಜೆಪಿಯೇ ಕಾರಣ: ಖರ್ಗೆ

ನವದೆಹಲಿ (ಪಿಟಿಐ): ಬಿಜೆಪಿಯ ‘ಬಳಸು, ಅಲಕ್ಷಿಸು ಮತ್ತು ವಂಚಿಸು’ ನೀತಿಯೇ ಕಾಶ್ಮೀರಿ ಪಂಡಿತ ಸಮುದಾಯದ ಉದ್ಯೋಗಿಗಳ ಇಂದಿನ ಪರಿಸ್ಥಿತಿಗೆ ಕಾರಣ’ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಜಮ್ಮು ಮತ್ತು ಕಾಶ್ಮೀರದಲ್ಲಿ ಈ ಸಮುದಾಯದ ಉದ್ಯೋಗಿಗಳು ನಡೆಸುತ್ತಿರುವ ಪ್ರತಿಭಟನೆ ಹಿನ್ನೆಲೆಯಲ್ಲಿ ಅವರು ಹೀಗೆ ಹೇಳಿದ್ದಾರೆ. ‘ಬದುಕುವ ಹಕ್ಕು ಮತ್ತು ಸ್ಥಳಾಂತರಕ್ಕೆ ಆಗ್ರಹಿಸಿ ಕಾಶ್ಮೀರಿ ಪಂಡಿತ ಸಮುದಾಯದ ಉದ್ಯೋಗಿಗಳು 245ಕ್ಕೂ ಹೆಚ್ಚು ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದಾರೆ. ಅವರ ವೇತನವನ್ನು ಹಲವಾರು ತಿಂಗಳಿಂದ ತಡೆಹಿಡಿಯಲಾಗಿದೆ ಮತ್ತು ಅವರ ಭದ್ರತೆ ಜೊತೆ ರಾಜಿ ಮಾಡಿಕೊಳ್ಳಲಾಗಿದೆ’ ಎಂದು ಖರ್ಗೆ ಅವರು ಟ್ವೀಟ್ ಮಾಡಿದ್ದಾರೆ.
ರಾಹುಲ್ ಭಟ್ ಎಂಬ ಕಾಶ್ಮೀರಿ ಪಂಡಿತ ಸಮುದಾಯದ ಉದ್ಯೋಗಿಯನ್ನು ರಾಜ್ಯದ ಬುಡ್ಗಾಮ್ ಜಿಲ್ಲೆಯ ಅವರ ಕಚೇರಿಯಲ್ಲಿ ಉಗ್ರರು ಗುಂಡಿಕ್ಕಿ ಹತ್ಯೆಗೈದಿದ್ದ ಘಟನೆ ಕಳೆದ ವರ್ಷ ಮೇನಲ್ಲಿ ನಡೆದಿತ್ತು. ಈ ಹತ್ಯೆ ಹಿನ್ನೆಲೆಯಲ್ಲಿ ಈ ಸಮುದಾಯದ ಉದ್ಯೋಗಿಗಳು ತಮ್ಮನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.