ಮಂಗಳವಾರ, ಮೇ 18, 2021
24 °C

ನೀತಿ ಸಂಹಿತೆ ಉಲ್ಲಂಘಿಸಿಲ್ಲ: ಚುನಾವಣಾ ಆಯೋಗದ ನೋಟಿಸ್‌ಗೆ ಮಮತಾ ಪ್ರತಿಕ್ರಿಯೆ

ಏಜೆನ್ಸೀಸ್ Updated:

ಅಕ್ಷರ ಗಾತ್ರ : | |

ಕೋಲ್ಕತ್ತ: ಪಶ್ಚಿಮ ಬಂಗಾಳದಲ್ಲಿ ಚುನಾವಣಾ ಕರ್ತವ್ಯಕ್ಕೆ ನಿಯೋಜನೆಗೊಂಡಿರುವ ಕೇಂದ್ರೀಯ ಸಶಸ್ತ್ರ ಪೊಲೀಸ್‌ ಪಡೆ (ಸಿಎಪಿಎಫ್‌) ವಿರುದ್ಧ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಪ್ರಚೋದನಕಾರಿ ಹೇಳಿಕೆ ನೀಡಿದ್ದಾರೆ ಎಂದು ಚುನಾವಣಾ ಆಯೋಗವು ನೋಟಿಸ್ ನೀಡಿತ್ತು. ಇದಕ್ಕೆ ಪ್ರತಿಕ್ರಿಯಿಸಿರುವ ಮಮತಾ, ತಾವು ಚುನಾವಣಾ ನೀತಿ ಸಂಹಿತೆಯನ್ನು ಉಲ್ಲಂಘಿಸಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಕೇಂದ್ರೀಯ ಪಡೆಗಳ ವಿರುದ್ಧ ಮಮತಾ ಬ್ಯಾನರ್ಜಿ ಅವರು ‘ಸಂಪೂರ್ಣ ಸುಳ್ಳು, ಪ್ರಚೋದನಕಾರಿ ಮತ್ತು ಅತಿರೇಕದ ಹೇಳಿಕೆ’ ನೀಡಿದ್ದಾರೆ ಎಂದು ಚುನಾವಣಾ ಆಯೋಗವು ಗುರುವಾರ ರಾತ್ರಿ ನೋಟಿಸ್‌ ನೀಡಿತ್ತು. ಮಾತ್ರವಲ್ಲದೆ ʼಸಿಎಪಿಎಫ್‌ ಕುರಿತಾಗಿ ಮಾರ್ಚ್‌ 28 ಮತ್ತು ಏಪ್ರಿಲ್‌ 7ರಂದು ನೀಡಿರುವ ಹೇಳಿಕೆಗಳ ಬಗ್ಗೆ ತಮ್ಮ ನಿಲುವು ಏನು ಎಂಬುದನ್ನು ಏಪ್ರಿಲ್‌ 10ರ ಒಳಗೆ ವಿವರಿಸಬೇಕು ಎಂದು ಸೂಚಿಸಿತ್ತು.

ಈ ಸಂಬಂಧ ಆಯೋಗಕ್ಕೆ ಪತ್ರ ಬರೆದಿರುವ ಮಮತಾ, ʼಸಿಎಪಿಎಫ್‌ ವಿರುದ್ಧ ಮತದಾರರನ್ನು ಪ್ರಚೋದಿಸುವ ಅಥವಾ ಪ್ರಭಾವಿಸುವ ಯಾವುದೇ ಪ್ರಯತ್ನಗಳು ನಡೆದಿಲ್ಲ. ನಾನು ಮಾದರಿ ನೀತಿ ಸಂಹಿತೆಯನ್ನು ಉಲ್ಲಂಘಿಸಿಲ್ಲ ಎಂಬುದು ಸ್ಪಷ್ಟವಾಗಿದೆʼ ಎಂದು ತಿಳಿಸಿದ್ದಾರೆ.

ವಿಧಾನಸಭೆಗೆ ನಡೆದ ಮೊದಲ ಮತ್ತು ಎರಡನೇ ಹಂತದ ಮತದಾನದ ವೇಳೆ ಕೇಂದ್ರ ಪಡೆಗಳು ಬಿಜೆಪಿ ಪರ ಕೆಲಸ ಮಾಡಿದ್ದವು ಎಂದು ಆರೋಪಿಸಿದ್ದರು.

ಮಮತಾ ಅವರು ಈ ಮೊದಲು ಚುನಾವಾಣಾ ಪ್ರಚಾರದ ವೇಳೆ ಮುಸ್ಲಿಂ ಮತದಾರರು ತಮ್ಮ ಮತಗಳು ವಿವಿಧ ರಾಜಕೀಯ ಪಕ್ಷಗಳಿಗೆ ವಿಭಜನೆಯಾಗದಂತೆ ನೋಡಿಕೊಳ್ಳಬೇಕು. ಕೋಮು ನೆಲೆಯಲ್ಲಿ ಎಲ್ಲ ಮತಗಳನ್ನು ತೃಣಮೂಲ ಕಾಂಗ್ರೆಸ್‌ಗೇ ನೀಡಬೇಕೆಂದು ಮನವಿ ಮಾಡಿದ್ದರು. ಈ ವಿಚಾರವಾಗಿಯೂ ಚುನಾವಣಾ ಆಯೋಗ‌ ಏಪ್ರಿಲ್‌ 3ರಂದು ನೋಟಿಸ್‌ ಜಾರಿ ಮಾಡಿತ್ತು.

ಇಂದು ಪಶ್ಚಿಮ ಬಂಗಾಳ 44 ವಿಧಾನಸಭೆ ಕ್ಷೇತ್ರಗಳಿಗೆ ನಾಲ್ಕನೇ ಹಂತದಲ್ಲಿ ಮತದಾನ ನಡೆಯಿತು. ಇನ್ನೂ ನಾಲ್ಕು ಹಂತಗಳ ಮತದಾನ ನಡೆಯಲಿದ್ದು, ಮೇ 2 ರಂದು ಫಲಿತಾಂಶ ಪ್ರಕಟವಾಗಲಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು