ಕೋಲ್ಕತ್ತ: ಪಶ್ಚಿಮ ಬಂಗಾಳ ವಿರುದ್ಧ ಕೇಂದ್ರದ ತಾರತಮ್ಯ ನೀತಿ ಖಂಡಿಸಿ ಅಹೋರಾತ್ರಿ ಧರಣಿ ನಡೆಸುತ್ತಿರುವ ಟಿಎಂಸಿ ಮುಖ್ಯಸ್ಥೆ, ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಬಿಜೆಪಿಯನ್ನು ಅಧಿಕಾರದಿಂದ ಕಿತ್ತೊಗೆಯಲು ‘ದೆಹಲಿಗೆ ಮತ್ತೊಂದು ಚಲೋ’ಗೆ ಕರೆ ನೀಡಿದ್ದಾರೆ.
ಧರಣಿ ಸ್ಥಳದಲ್ಲಿ ನೆರೆದಿದ್ದ ಬೆಂಬಲಿಗರ ಸಮ್ಮುಖದಲ್ಲಿ ಮುಖ್ಯಮಂತ್ರಿ ಅವರು ಇಲ್ಲಿನ ಡಾ.ಬಿ.ಆರ್.ಅಂಬೇಡ್ಕರ್ ಅವರ ಪ್ರತಿಮೆ ಸ್ಥಳದಲ್ಲಿ ಮತ್ತೊಮ್ಮೆ ದೆಹಲಿ ಚಲೋಗೆ ಕರೆ ನೀಡಿದರು. 80 ವರ್ಷಗಳ ಹಿಂದೆ ಸಿಂಗಪುರದಲ್ಲಿ ನೀಡಿದ ನೇತಾಜಿ ಸುಭಾಷ್‌ಚಂದ್ರ ಬೋಸ್ ಅವರ ಪ್ರಸಿದ್ಧ ‘ದೆಹಲಿ ಚಲೋ’ ಕರೆಯನ್ನು ಮಮತಾ ನೆನಪಿಸಿದರು.
ನರೇಗಾ, ವಸತಿ ಮತ್ತು ಲೋಕೋಪಯೋಗಿ ಇಲಾಖೆಗಳ ಇತರ ಯೋಜನೆಗಳಿಗೆ ಕೇಂದ್ರವು ರಾಜ್ಯಕ್ಕೆ ಅನುದಾನ ನಿಲ್ಲಿಸಿರುವುದನ್ನು ವಿರೋಧಿಸಿ ಮಮತಾ ಅವರು ಬುಧವಾರ ಮಧ್ಯಾಹ್ನದಿಂದ ಎರಡು ದಿನಗಳ ಧರಣಿ ಆರಂಭಿಸಿದ್ದಾರೆ.
‘ನಾವೆಲ್ಲರೂ ಒಗ್ಗೂಡಿ, ಬಿಜೆಪಿ ವಿರುದ್ಧ ಹೋರಾಡಬೇಕು ಮತ್ತು ಅದನ್ನು ಸೋಲಿಸಬೇಕು. ಅಗತ್ಯವಿದ್ದರೆ, ದೇಶದ ಒಕ್ಕೂಟ ವ್ಯವಸ್ಥೆ ನಾಶಪಡಿಸುವ ಮತ್ತು ಬಿಜೆಪಿಯೇತರ ಪಕ್ಷಗಳು ಆಡಳಿತ ನಡೆಸುತ್ತಿರುವ ರಾಜ್ಯಗಳನ್ನು ಹಣವಿಲ್ಲದೆ ಇರಿಸುವ ಕೇಂದ್ರದ ಪ್ರಯತ್ನಗಳ ವಿರುದ್ಧ ಪ್ರತಿಭಟಿಸಲು ದೆಹಲಿಗೆ ಮೆರವಣಿಗೆ ನಡೆಸಲಾಗುವುದು’ ಎಂದು ಎಚ್ಚರಿಸಿದರು.
‘ಕೇಂದ್ರ ಸರ್ಕಾರ ಬಾಕಿ ಪಾವತಿಸುತ್ತದೆ ಎಂದು ನಾನು ಭಾವಿಸಿದ್ದೆ. ಆದರೆ, ಅಂತಹದ್ದೇನೂ ನಡೆಯಲಿಲ್ಲ. ಎಲ್ಲಾ ವಿರೋಧ ಪಕ್ಷಗಳನ್ನು ಭ್ರಷ್ಟರು ಮತ್ತು ತನ್ನನ್ನು ಸಂತ ಎಂದು ಬಿಂಬಿಸಲು ಬಿಜೆಪಿ ಪ್ರಯತ್ನಿಸುತ್ತಿದೆ’ ಎಂದರು.
ಬಿಜೆಪಿಯನ್ನು ‘ದುಶ್ಯಾಸನ’ ಮತ್ತು ‘ದುರ್ಯೋಧನ’ ಎಂದು ಬಣ್ಣಿಸಿದ ಅವರು, ಈ ‘ದುಶ್ಯಾಸನ’ ಎಂಬ ಬಿಜೆಪಿ ಸರ್ಕಾರ ಕಿತ್ತೊಗೆಯಲು ದೇಶದ ರಾಜಕೀಯ ಪಕ್ಷಗಳು ಒಂದಾಗಬೇಕು. ಪ್ರಜಾಪ್ರಭುತ್ವ ಉಳಿಸಲು ‘ದುರ್ಯೋಧನ’ ಬಿಜೆಪಿಯನ್ನು ಅಧಿಕಾರದಿಂದ ತೆಗೆದುಹಾಕಬೇಕು ಎಂದು ಬ್ಯಾನರ್ಜಿ ಹೇಳಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.