ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೋದಿ–ಮಮತಾ ಸಂಘರ್ಷಕ್ಕೆ ಮತ್ತೊಂದು ತಿರುವು: ಅಲಪನ್‌ ಈಗ ಸಿಎಂ ಸಲಹೆಗಾರ

Last Updated 31 ಮೇ 2021, 22:07 IST
ಅಕ್ಷರ ಗಾತ್ರ

ಕೋಲ್ಕತ್ತ : ಪಶ್ಚಿಮ ಬಂಗಾಳದ ಮುಖ್ಯ ಕಾರ್ಯದರ್ಶಿಯಾಗಿದ್ದ ಅಲಪನ್‌ ಬಂದೋಪಾಧ್ಯಾಯ ಅವರನ್ನು ಕೇಂದ್ರ ಸೇವೆಗೆ ವಾಪಸ್ ಕರೆಸಿಕೊಳ್ಳುವ ಪ್ರಸಂಗವು ಸೋಮವಾರ ಹಲವು ಅನಿರೀಕ್ಷಿತ ಬೆಳವಣಿಗೆಗೆ ಸಾಕ್ಷಿಯಾಗಿದೆ.

‘ಅಲಪನ್‌ ಅವರನ್ನು ಮುಖ್ಯ ಕಾರ್ಯದರ್ಶಿ ಹುದ್ದೆಯಿಂದ ಬಿಡುಗಡೆ ಮಾಡುವುದಿಲ್ಲ’ ಎಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಸೋಮವಾರ ಬೆಳಿಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದರು. ಆ ಪತ್ರ ಬರೆದ ಕೆಲವೇ ಗಂಟೆಗಳಲ್ಲಿ, ‘ಕರ್ತವ್ಯಕ್ಕೆ ಹಾಜರಾಗದ ಬಗ್ಗೆ ವಿವರಣೆ ನೀಡಿ’ ಎಂದು ಅಲಪನ್‌ ಅವರಿಗೆ ಕೇಂದ್ರ ಸರ್ಕಾರವು ನೋಟಿಸ್ ನೀಡಿತ್ತು. ಆನಂತರ ಸಂಜೆ ಮಮತಾ ಬ್ಯಾನರ್ಜಿ ಅವರು, ‘ಅಲಪನ್‌ ಅವರು ಮುಖ್ಯ ಕಾರ್ಯದರ್ಶಿ ಹುದ್ದೆಯಿಂದ ನಿವೃತ್ತರಾಗಿದ್ದಾರೆ. ಅವರನ್ನು ಮುಖ್ಯಮಂತ್ರಿಯ ಮುಖ್ಯ ಸಲಹೆಗಾರನಾಗಿ ಮೂರು ವರ್ಷಗಳ ಅವಧಿಗೆ ನೇಮಕ ಮಾಡಲಾಗಿದೆ’ ಎಂದು ಆದೇಶ ಹೊರಡಿಸಿದ್ದಾರೆ.

‘ಪಶ್ಚಿಮ ಬಂಗಾಳದ ಮುಖ್ಯ ಕಾರ್ಯದರ್ಶಿ ಅಲಪನ್‌ ಅವರನ್ನು ಸೇವೆಯಿಂದ ಬಿಡುಗಡೆ ಮಾಡುವುದಿಲ್ಲ. ಅವರನ್ನು ಕೇಂದ್ರ ಸೇವೆಗೆ ಕರೆಸಿಕೊಳ್ಳುವ ಆದೇಶ ಹಿಂಪಡೆಯಿರಿ’ ಎಂದು ಮಮತಾ ಅವರು ಪ್ರಧಾನಿ ನರೇಂದ್ರ ಮೋದಿಗೆ ಸೋಮವಾರ ಬೆಳಿಗ್ಗೆ ಪತ್ರ ಬರೆದಿದ್ದರು.

ಪೂರ್ವನಿಗದಿಯಂತೆ ಅಲಪನ್‌ ಅವರು ಮೇ 31ರ ಸೋಮವಾರ ನಿವೃತ್ತರಾಗಬೇಕಿತ್ತು. ಕೋವಿಡ್‌ ತುರ್ತುಪರಿ
ಸ್ಥಿತಿ ಇರುವ ಕಾರಣ, ಅವರ ಸೇವೆಯನ್ನು ಮೂರು ತಿಂಗಳು ವಿಸ್ತರಿಸಿ ಮೇ 24ರಂದು ಕೇಂದ್ರ ಸರ್ಕಾರವು ಆದೇಶ ಹೊರಡಿಸಿತ್ತು. ಮೇ 28ರಂದು ಕೇಂದ್ರ ಸರ್ಕಾರವು ಹೊರಡಿಸಿದ್ದ ಆದೇಶದ ಪ್ರಕಾರ ಅಲಪನ್‌ ಅವರು ಸೋಮ
ವಾರ ಕೇಂದ್ರದ ಸೇವೆಗೆ ಹಾಜರಾಗಬೇಕಿತ್ತು. ಆದರೆ ಪಶ್ಚಿಮ ಬಂಗಾಳದ ಮುಖ್ಯ ಕಾರ್ಯದರ್ಶಿ ಹುದ್ದೆಯಿಂದ ಅವರನ್ನು ಬಿಡುಗಡೆ ಮಾಡದ ಕಾರಣ ಅವರು, ಕೇಂದ್ರ ಸೇವೆಗೆ ಹಾಜರಾಗಿಲ್ಲ.

ಅಲಪನ್‌ ಸೇವೆಯನ್ನು ವಿಸ್ತರಿಸಿ, ಮೇ 24ರಂದು ಹೊರಡಿಸಿದ್ದ ಆದೇಶವನ್ನು ಹಿಂಪಡೆಯಲಾಗಿದೆಯೇ ಎಂಬುದನ್ನು ಕೇಂದ್ರ ಸರ್ಕಾರವು ತನ್ನ ನೋಟಿಸ್‌ನಲ್ಲಿ ಸ್ಪಷ್ಟಪಡಿಸಿಲ್ಲ. ಆದರೆ ಅವರು ನಿವೃತ್ತರಾಗಿದ್ದಾರೆ ಎಂದು ಮಮತಾ ಘೋಷಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT