ಗ್ವಾಲಿಯರ್: ಶಿಕ್ಷಕಿಯಾಗಬೇಕೆಂದು ಕನಸು ಹೊತ್ತಿದ್ದ ತನ್ನ ಗರ್ಭಿಣಿ ಪತ್ನಿಯನ್ನು ಡಿ.ಎಡ್ ಪರೀಕ್ಷಾ ಕೇಂದ್ರಕ್ಕೆ ತಲುಪಿಸಲು ಜಾರ್ಖಂಡ್‌ನ ವ್ಯಕ್ತಿಯೊಬ್ಬರು 1,200 ಕಿ.ಮೀ. ಸ್ಕೂಟರ್‌ನಲ್ಲಿ ಕ್ರಮಿಸಿದ್ದಾರೆ.
ಬುಡಕಟ್ಟು ದಂಪತಿ 27 ವರ್ಷದ ಧನಂಜಯ್ ಕುಮಾರ್ ಹಾಗೂ 22 ವರ್ಷದ ಸೋನಿ ಹೆಂಬ್ರಮ್ ಎಂಬುವವರು,ಲಾಕ್‌ಡೌನ್ ನಡುವೆ ಜಾರ್ಖಂಡ್‌ನ ಗೊಡ್ಡ ಜಿಲ್ಲೆಯ ಗಂಟಾತೊಲ ಹಳ್ಳಿಯಿಂದ, ಗ್ವಾಲಿಯರ್‌ನಲ್ಲಿ ಇದ್ದ ಡಿ.ಎಡ್ ಪರೀಕ್ಷಾ ಕೇಂದ್ರಕ್ಕೆದ್ವಿಚಕ್ರ ವಾಹನದಲ್ಲೇ ಪ್ರಯಾಣಿಸಿದ್ದಾರೆ. ತನ್ನ ಪತ್ನಿಯನ್ನು ಶಿಕ್ಷಕಿಯಾಗಿ ನೋಡುವ ಆಸೆಯೇ ಧನಂಜಯ್ ಅವರನ್ನು ಈ ಪ್ರಯಾಸಕರ ಪ್ರಯಾಣಕ್ಕೆ ಪ್ರೇರೇಪಿಸಿತ್ತು. ಮಳೆ, ಗುಂಡಿಗಳಿದ್ದ ರಸ್ತೆಗಳ ಮೂಲಕವೇ ನಾಲ್ಕು ರಾಜ್ಯಗಳ ಮೂಲಕ ಪ್ರಯಾಣಿಸಿ ಪತ್ನಿಯನ್ನು ಪರೀಕ್ಷಾ ಕೇಂದ್ರಕ್ಕೆ ಧನಂಜಯ್ ತಲುಪಿಸಿದ್ದರು.
‘ರೈಲು, ಬಸ್ ಹಾಗೂ ಇತರೆ ಯಾವುದೇ ಸಾರಿಗೆ ವ್ಯವಸ್ಥೆ ಇರದೇ ಇದ್ದ ಕಾರಣ, ದ್ವಿಚಕ್ರ ವಾಹನದಲ್ಲೇ ಪ್ರಯಾಣಿಸಲು ನಿರ್ಧರಿಸಿದೆವು. ಗರ್ಭಿಣಿಯಾಗಿದ್ದ ಕಾರಣ, ಮೊದಲು ಈ ರೀತಿಯ ಪ್ರಯಾಣಕ್ಕೆ ಪತ್ನಿ ನಿರಾಕರಿಸಿದ್ದಳು. ಆದರೆ ನನ್ನ ಇಚ್ಛೆಯನ್ನು ಮನಗಂಡು ಒಪ್ಪಿದಳು. ಟ್ಯಾಕ್ಸಿ ಬಾಡಿಗೆಗೆ ಪಡೆದು ಬಂದಿದ್ದರೆ, ಅಂದಾಜು ₹30 ಸಾವಿರ ಖರ್ಚಾಗುತ್ತಿತ್ತು. ಇಷ್ಟೊಂದು ಹಣ ಕೂಡಿಸುವುದು ನನಗೆ ಕಷ್ಟಸಾಧ್ಯ. ಹೀಗಾಗಿ ನಮ್ಮಲ್ಲಿದ್ದ ಆಭರಣಗಳನ್ನು ಅಡವಿಟ್ಟು, ₹10 ಸಾವಿರ ಸಾಲ ಪಡೆದಿದ್ದೆ. ಇದರಲ್ಲಿ ಇಲ್ಲಿಯವರೆಗೂ ₹5 ಸಾವಿರ ವೆಚ್ಚವಾಗಿದೆ’ ಎಂದು ಧನಂಜಯ್ ತಮ್ಮ ಅನುಭವ ಹಂಚಿಕೊಂಡರು.
‘ಆಗಸ್ಟ್ 28ರ ಬೆಳಗ್ಗೆ ಹೊರಟು ಆ.30ರಂದು ಗ್ವಾಲಿಯರ್ ತಲುಪಿದ್ದೇವೆ. ಈ ಬಾರಿ ಪರೀಕ್ಷೆ ಬರೆಯಲು ಸಾಧ್ಯವಿಲ್ಲ ಎಂದೆನಿಸಿತ್ತು. ಪ್ರಯಾಣದ ವೇಳೆ ಸಾಕಷ್ಟು ಸಮಸ್ಯೆ ಎದುರಾಗಿತ್ತು. ನಾನು ಜಾರ್ಖಂಡ್‌ನಲ್ಲೇ ಶಿಕ್ಷಕಿ ವೃತ್ತಿಗೆ ಅರ್ಜಿ ಸಲ್ಲಿಸುತ್ತೇನೆ. ಆ ಹುದ್ದೆ ದೊರೆಯಲಿದೆ ಎನ್ನುವ ನಂಬಿಕೆ ಇದೆ’ ಎಂದು ಸೋನಿ ಹೇಳಿದರು.
₹ 5 ಸಾವಿರ ನೆರವು: ದಂಪತಿಯ ಈ ಪ್ರಯಾಣದ ಸುದ್ದಿಯನ್ನು ಗಮನಿಸಿದ ಗ್ವಾಲಿಯರ್ ಕಲೆಕ್ಟರ್ ಕೌಶಲೇಂದ್ರ ವಿಕ್ರಮ್ ಸಿಂಗ್ ಅವರು, ದಂಪತಿಗೆ ಸೂಕ್ತ ವ್ಯವಸ್ಥೆ ಕಲ್ಪಿಸಲು ಜಿಲ್ಲಾ ಮಹಿಳಾ ಸಬಲೀಕರಣ ಅಧಿಕಾರಿ ಶಾಲೀನ್ ಶರ್ಮಾ ಅವರಿಗೆ ಸೂಚಿಸಿದ್ದು, ತಕ್ಷಣದಲ್ಲೇ ₹ 5ಸಾವಿರ ನೆರವು ನೀಡಿದ್ದಾರೆ. ಅವರ ವಸತಿ ಹಾಗೂ ಊಟದ ವೆಚ್ಚವನ್ನೂ ಭರಿಸುವುದಾಗಿ ಶರ್ಮಾ ತಿಳಿಸಿದ್ದಾರೆ. ಸೋನಿ ಗರ್ಭಿಣಿಯಾಗಿರುವುದರಿಂದ ಅವರಿಗೆ ಬೇಕಾದ ವೈದ್ಯಕೀಯ ಪರೀಕ್ಷೆಗಳನ್ನೂ ಮಾಡಿಸಲಾಗಿದೆ ಎಂದು ಹೇಳಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.