ಶನಿವಾರ, ಅಕ್ಟೋಬರ್ 23, 2021
20 °C

ಹಬ್ಬಗಳಲ್ಲಿ ಕೋವಿಡ್‌ ನಿಯಂತ್ರಣ ಹಳಿತಪ್ಪಬಹುದು, ಎಚ್ಚರಿಕೆ ಅಗತ್ಯ: ಸಚಿವ ಮಾಂಡವೀಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಕೋವಿಡ್‌ ಮಾರ್ಗಸೂಚಿಗಳನ್ನು ಅನುಸರಿಸಿ ಹಬ್ಬಗಳನ್ನು ಆಚರಿಸದಿದ್ದರೆ ಈಗಿನ ಸೋಂಕಿನ ನಿಯಂತ್ರಣವು ಹಳಿ ತಪ್ಪಬಹುದು ಎಂದು ಕೇಂದ್ರ ಆರೋಗ್ಯ ಸಚಿವ ಮನಸುಖ್‌ ಮಾಂಡವೀಯ ಶನಿವಾರ ಎಚ್ಚರಿಸಿದ್ದಾರೆ.

ಹಂಚಿಕೆಯಲ್ಲಿ ಹಿಂದಿರುವ 19 ರಾಜ್ಯಗಳು ತಮ್ಮ ಲಸಿಕೆ ನೀಡುವ ವೇಗವನ್ನು ಹೆಚ್ಚಿಸಬೇಕಿದೆ. ಇದರಿಂದ ಮುಂದಿನ ದಿನಗಳಲ್ಲಿ ಭಾರತವು 100 ಕೋಟಿ ಲಸಿಕೆ ಡೋಸ್‌ಗಳ ಗುರಿ ತಲುಪಲಿದೆ ಎಂದೂ ಅವರು ಹೇಳಿದರು. 

ಭಾರತವು ಈವರೆಗೆ ಸುಮಾರು 94 ಕೋಟಿ ಕೋವಿಡ್‌ ಲಸಿಕೆಯ ಡೋಸ್‌ಗಳನ್ನು ಹಂಚಿಕೆ ಮಾಡಿದೆ. 

ಎಲ್ಲಾ ಪ್ರಮುಖ ರಾಜ್ಯಗಳ ರಾಷ್ಟ್ರೀಯ ಆರೋಗ್ಯ ಮಿಷನ್‌ನ ಪ್ರಧಾನ ಕಾರ್ಯದರ್ಶಿಗಳು ಮತ್ತು ನಿರ್ದೇಶಕರೊಂದಿಗಿನ ಸಭೆಯಲ್ಲಿ ಸಚಿವ ಮಾಂಡವೀಯ ಅವರು ಕೋವಿಡ್‌ ಲಸಿಕೆಯ ಪ್ರಗತಿಯನ್ನು ಪರಿಶೀಲಿಸಿ ಮಾತನಾಡಿದರು.

ಲಸಿಕಾ ಅಭಿಯಾನದ ಮೂಲಕ ಭಾರತದಲ್ಲಿ 100 ಕೋಟಿ ಲಸಿಕೆಯ ಡೋಸ್‌ಗಳನ್ನು ನೀಡುವುದು ತಕ್ಷಣದ ಗುರಿಯಾಗಿದೆ ಎಂದು ಹೇಳಿದರು.  

ಕೋವಿಡ್‌ ಮಾರ್ಗಸೂಚಿಗಳನ್ನು ಮೀರಿ ದೊಡ್ಡ ಮಟ್ಟದ ಜನಸಮೂಹ ಕೂಡುವಿಕೆಯ ಮೂಲಕ ಹಬ್ಬಗಳನ್ನು ಆಚರಿಸಿದರೆ ಈಗಿನ ಕೋವಿಡ್‌ ನಿಯಂತ್ರಣವು ಹಳಿತಪ್ಪಬಹುದು ಎಂದು ಸಚಿವ ಮಾಂಡವೀಯ ಅವರು ಎಚ್ಚರಿಸಿರುವುದಾಗಿ ಆರೋಗ್ಯ ಸಚಿವಾಲಯ ಹೇಳಿಕೆ ನೀಡಿದೆ.  

‘ಕೋವಿಡ್‌ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಅನುಸರಿಸುವುದು ಮತ್ತು ಲಸಿಕೆಯ ವೇಗವನ್ನು ಹೆಚ್ಚಿಸುವುದು ಸೋಂಕಿನ ನಿಯಂತ್ರಣಕ್ಕೆ ಪ್ರಮುಖವಾಗಿವೆ’ ಎಂದು ಸಚಿವರು ಹೇಳಿದರು.   

ಆಂಧ್ರಪ್ರದೇಶ, ಅಸ್ಸಾಂ, ಬಿಹಾರ, ಛತ್ತೀಸ್‌ಗಡ, ಗುಜರಾತ್, ಹರಿಯಾಣ, ಜಾರ್ಖಂಡ್, ಕರ್ನಾಟಕ, ಕೇರಳ, ಮಧ್ಯಪ್ರದೇಶ, ಮಹಾರಾಷ್ಟ್ರ, ಒಡಿಶಾ, ಪಂಜಾಬ್, ರಾಜಸ್ಥಾನ, ತಮಿಳುನಾಡು, ತೆಲಂಗಾಣ, ಉತ್ತರಾಖಂಡ, ಉತ್ತರ ಪ್ರದೇಶ ಮತ್ತು ಪಶ್ಚಿಮ ಬಂಗಾಳದ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.

ರಾಜ್ಯಗಳಲ್ಲಿ ಎಂಟು ಕೋಟಿಗೂ ಹೆಚ್ಚು ಲಸಿಕೆಯ ಡೋಸ್‌ಗಳು ಬಾಕಿ ಇರುವುದನ್ನು ಸಚಿವರ ಗಮನಕ್ಕೆ ತರಲಾಯಿತು ಎಂದು ಆರೋಗ್ಯ ಸಚಿವಾಲಯ ಹೇಳಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು