ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚರಂಡಿ ಸ್ವಚ್ಛತೆ: ರಾಜ್ಯಗಳ ಮಾತು ಸತ್ಯಕ್ಕೆ ದೂರ–ಎನ್‌ಎಚ್‌ಆರ್‌ಸಿ ವರದಿ

ಸರ್ಕಾರಕ್ಕೆ ಎನ್‌ಎಚ್‌ಆರ್‌ಸಿ ವರದಿ
Last Updated 4 ಜನವರಿ 2021, 21:04 IST
ಅಕ್ಷರ ಗಾತ್ರ

ನವದೆಹಲಿ: ಕಾರ್ಮಿಕರೇ ಚರಂಡಿಗೆ ಇಳಿದು ಸ್ವಚ್ಛತೆ ಕೆಲಸ ಕೈಗೊಳ್ಳುವುದಕ್ಕೆ ಸಂಬಂಧಿಸಿ ಹಲವು ರಾಜ್ಯಗಳು ಹೇಳುತ್ತಿರುವುದು ಸತ್ಯಕ್ಕೆ ದೂರವಾದ ಮಾತು ಎಂದು ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗವು (ಎನ್‌ಎಚ್‌ಆರ್‌ಸಿ) ಹೇಳಿದೆ. ದೇಶದ ಯಾವುದೇ ಪ್ರದೇಶದಲ್ಲಿ ಇರುವ ಜಾಡಮಾಲಿಗಳ ಸಂಖ್ಯೆಯ ಬಗ್ಗೆ ತಪ್ಪು ವರದಿ ಕೊಟ್ಟರೆ, ಸಂಬಂಧಪ‍ಟ್ಟ ಪ್ರಾಧಿಕಾರವನ್ನೇ ಅದಕ್ಕೆ ಹೊಣೆ ಮಾಡಬೇಕು ಎಂದು ಆಯೋಗ ಸೂಚಿಸಿದೆ.

ಅಪಾಯಕಾರಿಯಾದ ಇತರ ಕೆಲಸಗಳನ್ನು ಕೂಡ ಈ ವ್ಯಾಪ್ತಿಯೊಳಗೆ ತರುವುದಕ್ಕಾಗಿ ಜಾಡಮಾಲಿ ಕೆಲಸದ ವ್ಯಾಖ್ಯಾನವನ್ನು ವಿಸ್ತರಿಸಬೇಕು ಅಥವಾ ಹೊಸ ಕಾಯ್ದೆ ರೂಪಿಸಬೇಕು ಎಂದು ಎನ್‌ಎಚ್‌ಆರ್‌ಸಿ ಶಿಫಾರಸು ಮಾಡಿದೆ. ಜಾಡಮಾಲಿಗಳ ಮಕ್ಕಳು ಮತ್ತು ಜಾಡಮಾಲಿ ಮಹಿಳೆಯರು ತಾರತಮ್ಯ ಮತ್ತು ಕಿರುಕುಳಕ್ಕೆ ಒಳಗಾಗುವುದನ್ನು ತಪ್ಪಿಸುವುದಕ್ಕಾಗಿ ಇಂತಹ ಅಪರಾಧಕ್ಕೆ ಶಿಕ್ಷೆಯನ್ನೂ ನಿಗದಿ ಮಾಡಿ ಕಾಯ್ದೆಗೆ ಸೇರಿಸಬೇಕು ಎಂದು ಹೇಳಿದೆ.

ಕೇಂದ್ರ ಮತ್ತು ರಾಜ್ಯಗಳಿಗೆ ಈ ಶಿಫಾರಸುಗಳನ್ನು ಎನ್‌ಎಚ್‌ಆರ್‌ಸಿ ಕಳುಹಿಸಿಕೊಡಲಿದೆ. ಜಾಡಮಾಲಿಗಳ ಪುನರ್ವಸತಿ ಪ್ರಕ್ರಿಯೆ ಯನ್ನು ನರೇಗಾದಂತಹ ಯೋಜನೆಯ ಜತೆ ಜೋಡಿಸಬಹುದು. ಇದರಿಂದ ಅವರು ತಕ್ಷಣವೇ ಆದಾಯ ಪಡೆದುಕೊಳ್ಳುವುದು ಸಾಧ್ಯವಾಗುತ್ತದೆ. ಜಾಡಮಾಲಿಗಳು ಮತ್ತು ಅವರ ಮಕ್ಕಳು ಹೇಗೆ ಜೀವಿಸುತ್ತಿದ್ದಾರೆ ಎಂಬುದನ್ನು ತಿಳಿದುಕೊಳ್ಳಲು ಅವರನ್ನು ಭೇಟಿಯಾಗಬೇಕು ಎಂದೂ ಶಿಫಾರಸಿನಲ್ಲಿ ಹೇಳಲಾಗಿದೆ.

ಚರಂಡಿ ಸ್ವಚ್ಛಗೊಳಿಸುವ ಕೆಲಸಕ್ಕೆ ಜಾಡಮಾಲಿಗಳನ್ನು ನೇಮಿಸಿಕೊಂಡಿರುವ ಸ್ಥಳೀಯಾಡಳಿತ ಸಂಸ್ಥೆಗಳ ವಿರುದ್ಧ ಕಠಿಣ ಕ್ರಮಗಳನ್ನು ಕೈಗೊಳ್ಳಬೇಕು. ಜಾಡಮಾಲಿಗಳು ದೂರು ಸಲ್ಲಿಸುವುದಕ್ಕಾಗಿ ಒಂದು ಆ್ಯಪ್‌ ಮತ್ತು ಉಚಿತ ಸಹಾಯವಾಣಿಯನ್ನು ಆರಂಭಿಸಬೇಕು. ಚರಂಡಿ ಸ್ವಚ್ಛಗೊಳಿಸುವಾಗ ಉಂಟಾಗುವ ಸಾವಿನ ಮೇಲೆ ರಾಷ್ಟ್ರೀಯ ಅಪರಾಧ ಸಂಶೋಧನಾ ಬ್ಯೂರೊವು (ಎನ್‌ಸಿಆರ್‌ಬಿ) ನಿಗಾ ಇರಿಸಬೇಕು ಎಂದು ಎನ್‌ಎಚ್‌ಆರ್‌ಸಿ ಸಲಹೆ ಕೊಟ್ಟಿದೆ.

ಜಾಡಮಾಲಿಗಳಿಗೆ ವೈಯಕ್ತಿಕ ಅಥವಾ ಗುಂಪು ವಿಮೆ ಸೌಲಭ್ಯ ಒದಗಿಸಬೇಕು. ಇದರ ಕಂತು ಮೊತ್ತವನ್ನು ಸ್ಥಳೀಯಾಡಳಿತ ಸಂಸ್ಥೆಯೇ ಭರಿಸಬೇಕು. ನೈರ್ಮಲ್ಯ ಕ್ಷೇತ್ರದಲ್ಲಿಯೇ ಅವರು ಕೆಲಸ ಮುಂದುವರಿಸುವುದಕ್ಕಾಗಿ ರಾಷ್ಟ್ರೀಯ ಸಫಾಯಿ ಕರ್ಮಚಾರಿ ಹಣಕಾಸು ಮತ್ತು ಅಭಿವೃದ್ಧಿ ನಿಗಮವು ಆರ್ಥಿಕ ನೆರವು ಮತ್ತು ತರಬೇತಿ ನೀಡಬಹುದು. ಸ್ವಚ್ಛತೆಯ ಕೆಲಸದಲ್ಲಿ ತಂತ್ರಜ್ಞಾನ ಬಳಕೆ, ಅದರ ನಿರ್ವಹಣೆ ಮತ್ತು ಕಾರ್ಮಿಕರ ತರಬೇತಿಗೆ ಅಗತ್ಯವಾದ ಮೊತ್ತವನ್ನು ಒದಗಿಸಲು ಸಾಧ್ಯವಾಗುವಂತೆ ಯೋಜನೆ ರೂಪಿಸಬೇಕು ಎಂದು ಎನ್‌ಎಚ್‌ಆರ್‌ಸಿ ಹೇಳಿದೆ.

ಎಸ್‌ಸಿ/ಎಸ್‌ಟಿಗಳ ಮೇಲಿನ ದೌರ್ಜನ್ಯ ಕಾಯ್ದೆ 1989, ಜಾಡಮಾಲಿಗಳ ನೇಮಕ ನಿಷೇಧ ಮತ್ತು ಅವರ ಪುನರ್ವಸತಿ ಕಾಯ್ದೆ 2013 ಮತ್ತು 2014ರಲ್ಲಿ ಸುಪ್ರೀಂ ಕೋರ್ಟ್‌ ನೀಡಿದ ತೀರ್ಪಿನ ಬಗ್ಗೆ ತರಬೇತಿ ಪಡೆದ ಪೊಲೀಸ್‌ ಅಧಿಕಾರಿಗಳೇ ಜಾಡಮಾಲಿ ಕೆಲಸಕ್ಕೆ ಸಂಬಂಧಿಸಿದ ಪ್ರಕರಣಗಳ ತನಿಖೆ ನಡೆಸಬೇಕು ಎಂದೂ ಶಿಫಾರಸಿನಲ್ಲಿ ವಿವರಿಸಲಾಗಿದೆ.

ಜಾಡಮಾಲಿ ಕೆಲಸದ ಸಮಸ್ಯೆಗಳು ಮತ್ತು ಸವಾಲುಗಳು ಹಾಗೂ ಮಾನವ ಹಕ್ಕುಗಳು ಎಂಬ ವಿಷಯದಲ್ಲಿ ಆನ್‌ಲೈನ್‌ ಮೂಲಕ ನಡೆದ ಪ್ರಾದೇಶಿಕ ಕಾರ್ಯಾಗಾರದಲ್ಲಿ ವ್ಯಕ್ತವಾದ ಅಭಿಪ್ರಾಯಗಳ ಆಧಾರದಲ್ಲಿ ಈ ಶಿಫಾರಸುಗಳನ್ನು ಸಿದ್ಧಪಡಿಸಲಾಗಿದೆ. ಎನ್‌ಎಚ್‌ಆರ್‌ಸಿ ಸದಸ್ಯ ಪಿ.ಸಿ.ಪಂತ್‌ ಅಧ್ಯಕ್ಷತೆಯಲ್ಲಿ ಕಳೆದ ಡಿ. 18ರಂದು ಈ ಕಾರ್ಯಾಗಾರ ನಡೆದಿತ್ತು.

ಶಿಫಾರಸುಗಳೇನು?

*ಪುನರ್ವಸತಿಗಾಗಿ ಒಂದು ಬಾರಿಯ ನಗದು ನೆರವನ್ನು ಈಗಿನ ₹40 ಸಾವಿರದಿಂದ ₹1 ಲಕ್ಷಕ್ಕೆ ಹೆಚ್ಚಿಸಬೇಕು

*ಈ ಪರಿಹಾರಧನ ವಿತರಣೆಯ ವೆಚ್ಚವನ್ನು ಯಾವ ಸಂಸ್ಥೆಯು ಭರಿಸಬೇಕು ಎಂಬುದನ್ನು ಸ್ಪಷ್ಟಪಡಿಸಬೇಕು

*ನೇರ ನಗದು ವರ್ಗಾವಣೆಯಂತಹ ಸೌಲಭ್ಯದ ಮೂಲಕ ಹಣ ಪಾವತಿಸಿ, ಮಧ್ಯವರ್ತಿ ಹಾವಳಿ ತಪ್ಪಿಸಬೇಕು

*ಜಾಡಮಾಲಿಗಳಿಗೆ ಹಣ ವಿತರಿಸಲು ಸರ್ಕಾರೇತರ ಸಂಸ್ಥೆಗಳನ್ನೂ ಬಳಸಿಕೊಳ್ಳಬಹುದು

*ಜಾಡಮಾಲಿಗಳಿಗೆ ಸಾಲ ನೀಡಲು ರಾಜ್ಯಗಳಿಗೆ ಒಂದೊಂದು ರಾಷ್ಟ್ರೀಕೃತ ಬ್ಯಾಂಕ್‌ ಅನ್ನು ಹಣಕಾಸು ಸಚಿವಾಲಯವು ನಿಯೋಜಿಸಬೇಕು

*ಜಾಡಮಾಲಿಗಳು ಮತ್ತು ಅವರ ಅವಲಂಬಿತರು ವ್ಯಾಪಾರ ಚಟುವಟಿಕೆಗಳನ್ನು ಆರಂಭಿಸಲು ₹10 ಲಕ್ಷದವರೆಗೆ ಸಾಲ ನೀಡಬೇಕು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT