ಗುರುವಾರ , ಮೇ 13, 2021
40 °C
ಕಾವಲುಗಾರರು ಇರುವ ಲೆವೆಲ್‌ ಕ್ರಾಸಿಂಗ್‌ನಲ್ಲೇ ಘಟನೆ

ಉತ್ತರ ಪ್ರದೇಶ ರೈಲ್ವೆ ಗೇಟ್‌ನಲ್ಲಿ ಅಪಘಾತ: ಐವರ ಸಾವು

ಪಿಟಿಐ‌ Updated:

ಅಕ್ಷರ ಗಾತ್ರ : | |

Prajavani

ಶಹಜಹಾನ್‌ಪುರ, ಉತ್ತರಪ್ರದೇಶ: ಗೇಟುಗಳು ತೆರೆದೇ ಇದ್ದ ಮಾನವಸಹಿತ ಲೆವೆಲ್‌ಕ್ರಾಸಿಂಗ್ ಒಂದರಲ್ಲಿ ರೈಲೊಂದು ಹಲವು ವಾಹನಗಳಿಗೆ ಡಿಕ್ಕಿ ಹೊಡೆದುದರಿಂದ ಕನಿಷ್ಠ ಐವರು ಮೃತಪಟ್ಟ ಘಟನೆ ಮೀರನ್‌ಪುರ ಕಟ್ರಾ ರೈಲು ನಿಲ್ದಾಣದ ಸಮೀಪ ಗುರುವಾರ ಬೆಳಿಗ್ಗೆ ಸಂಭವಿಸಿದೆ.

‘ಲಖನೌ-ಚಂಡೀಗಢ ಸೂಪರ್‌ಫಾಸ್ಟ್‌ ಎಕ್ಸ್‌ಪ್ರೆಸ್‌ ರೈಲು ಎರಡು ಟ್ರಕ್‌ಗಳು, ಒಂದು ಕಾರು ಮತ್ತು ಬೈಕೊಂದಕ್ಕೆ ಡಿಕ್ಕಿ ಹೊಡೆಯಿತು. ಬಳಿಕ ಅದರ ಎಂಜಿನ್‌ ಹಳಿತಪ್ಪಿತು. ಇದರಿಂದ ರೈಲು ಮಾರ್ಗದ ಎರಡೂ ದಿಕ್ಕುಗಳಲ್ಲಿ ರೈಲುಗಳ ಸಂಚಾರಕ್ಕೆ ಅಡ್ಡಿ ಉಂಟಾಗಿದೆ’ ಎಂದು ಗ್ರಾಮಾಂತರ ವಿಭಾಗದ ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಂಜೀವ್‌ ಬಾಜಪೇಯಿ ತಿಳಿಸಿದರು.

‘ಮೃತರಲ್ಲಿ ಮೂವರು ಒಂದೇ ಕುಟುಂಬಕ್ಕೆ ಸೇರಿದವರು. ಒಬ್ಬರು ಗಾಯಗೊಂಡಿದ್ದು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಪರಿಹಾರ ಕಾರ್ಯ ಮುಂದುವರಿದಿದೆ. ಸಾವಿನ ಸಂಖ್ಯೆ ಏರುವ ಸಾಧ್ಯತೆ ಇದೆ’ ಎಂದು ಬಾಜಪೇಯಿ ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.

‘ಇದೊಂದು ಕಾವಲಗಾರರು ಇರುವ ಲೆವೆಲ್‌ ಕ್ರಾಸಿಂಗ್‌. ರೈಲುಗಳು ಬರುತ್ತಿದ್ದ ವೇಳೆಯೂ ಗೇಟ್‌ಗಳನ್ನು ಏಕೆ ಮುಚ್ಚಿರಲಿಲ್ಲ ಎಂಬ ಬಗ್ಗೆ ತನಿಖೆ ನಡೆಯುತ್ತಿದೆ’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಮೃತರ ಕುಟುಂಬಗಳಿಗೆ ತಲಾ ₹ 2 ಲಕ್ಷ ಪರಿಹಾರ ಘೋಷಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು