ಶನಿವಾರ, ಜುಲೈ 2, 2022
26 °C
ಲೋಕಸಭೆಯಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಹೇಳಿಕೆ

5 ವರ್ಷದ ಬಳಿಕವೂ ಜಿಎಸ್‌ಟಿ ಪರಿಹಾರ ವಿಸ್ತರಿಸಲು ಹಲವು ರಾಜ್ಯಗಳಿಂದ ವಿನಂತಿ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: 2022ರ ಜೂನ್‌ ಬಳಿಕವೂ ಜಿಎಸ್‌ಟಿ ಪರಿಹಾರವನ್ನು ವಿಸ್ತರಿಸಲು ಹಲವು ರಾಜ್ಯಗಳು ವಿನಂತಿಸಿವೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಸೋಮವಾರ ತಿಳಿಸಿದರು.

ಲೋಕಸಭೆಯಲ್ಲಿ ಕೇಳಲಾದ ಪ್ರಶ್ನೆಗೆ ಲಿಖಿತ ಉತ್ತರ ನೀಡಿದ ಅವರು, ಸಾಂವಿಧಾನಿಕ ನಿಬಂಧನೆಗಳ ಪ್ರಕಾರ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಐದು ವರ್ಷಗಳವರೆಗೆ ಜಿಎಸ್‌ಟಿ ಪರಿಹಾರವನ್ನು ನೀಡಲು ಕೇಂದ್ರ ಸರ್ಕಾರ ಬದ್ಧವಾಗಿದೆ ಎಂದರು. ಆದರೆ, ಮುಂದಿನ ಐದು ವರ್ಷಗಳಿಗೂ ಅದನ್ನು ವಿಸ್ತರಿಸುವ ಬಗ್ಗೆ ಯಾವುದೇ ಭರವಸೆ ನೀಡಲಿಲ್ಲ.

ಕೋವಿಡ್‌ ಪಿಡುಗಿನಿಂದ ಉಂಟಾದ ತೊಂದರೆಗಳ ದೃಷ್ಟಿಯಿಂದ ಪರಿಹಾರ ಕಾರ್ಯವಿಧಾನವನ್ನು ಇನ್ನೂ ಐದು ವರ್ಷಗಳವರೆಗೆ ವಿಸ್ತರಿಸಲು ವಿನಂತಿಸಿದ ರಾಜ್ಯ ಸರ್ಕಾರಗಳಿಂದ ಸರ್ಕಾರವು ಪ್ರಸ್ತಾವನೆಗಳನ್ನು ಸ್ವೀಕರಿಸಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ‘ಜಿಎಸ್‌ಟಿ ಮಂಡಳಿ ಮತ್ತು ಕೇಂದ್ರ ಸರ್ಕಾರಕ್ಕೆ ಬರೆದ ಪತ್ರಗಳಲ್ಲಿ ಅನೇಕ ರಾಜ್ಯಗಳು ಪರಿಹಾರದ ಅವಧಿಯನ್ನು ವಿಸ್ತರಿಸಲು ವಿನಂತಿಸಿವೆ’ ಎಂದಷ್ಟೇ ಅವರು ತಿಳಿಸಿದರು.

2017-18, 2018-19 ಮತ್ತು 2019-20 ರ ಹಣಕಾಸು ವರ್ಷಗಳ ಜಿಎಸ್‌ಟಿ ಪರಿಹಾರವನ್ನು ಈಗಾಗಲೇ ರಾಜ್ಯಗಳಿಗೆ ಪಾವತಿಸಲಾಗಿದೆ. ಪರಿಹಾರ ನಿಧಿಯಲ್ಲಿ ಸಂಗ್ರಹಣೆಯು ಅಗತ್ಯಕ್ಕಿಂತ ಕಡಿಮೆಯಿರುವುದರಿಂದ, 2020-21 ಮತ್ತು 2021-22ಕ್ಕೆ, ಕೇಂದ್ರವು ಕ್ರಮವಾಗಿ ₹1.10 ಲಕ್ಷ ಕೋಟಿ ಮತ್ತು ₹ 1.59 ಲಕ್ಷ ಕೋಟಿ ಹಣವನ್ನು ಸಾಲವಾಗಿ ಪಡೆದಿದೆ ಮತ್ತು ಅದನ್ನು ರಾಜ್ಯಗಳಿಗೆ ನೀಡಿದೆ ಎಂದು ನಿರ್ಮಲಾ ತಿಳಿಸಿದರು.

ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಕಾನೂನಿನಡಿಯಲ್ಲಿ 2017ರ ಜುಲೈ 1ರಿಂದ ಜಿಎಸ್‌ಟಿ ಅನುಷ್ಠಾನಗೊಂಡಿದೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು