ಮಂಗಳವಾರ, ಫೆಬ್ರವರಿ 7, 2023
26 °C

ಕೇಜ್ರಿವಾಲ್‌ ‘ಛೋಟಾ ರಿಚಾರ್ಜ್‘, ಮೋದಿಯ ದಾಖಲೆ ಮುರಿಯಲು ಹೊರಟಿದ್ದಾರೆ: ಓವೈಸಿ

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರನ್ನು ‘ಛೋಟಾ ರೀಚಾರ್ಜ್‌‘ ಎಂದು ಹೈದರಾಬಾದ್ ಸಂಸದ ಹಾಗೂ ಎಐಎಂಐಎಂ ಅಧ್ಯಕ್ಷ ಅಸಾದುದ್ದೀನ್‌ ಓವೈಸಿ ಟೀಕೆ ಮಾಡಿದ್ದಾರೆ.

ಸಲೀಂಪುರದಲ್ಲಿ ನಡೆದ ದೆಹಲಿ ಪಾಲಿಕೆ ಚುನಾವಣೆಗೆ ತಮ್ಮ ಪಕ್ಷದ ಅಭ್ಯರ್ಥಿಗಳ ಪರ ನಡೆಸಿದ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ‘ದೆಹಲಿ ಮುಖ್ಯಮಂತ್ರಿ ಕೇಜ್ರಿವಾಲ್‌ ಮುಸ್ಲಿಮರನ್ನು ನಿಂದಿಸಿದರು. ಪ್ರಧಾನಿ ಮೋದಿಯವರ ಎಲ್ಲಾ ದಾಖಲೆಗಳನ್ನು ಕೇಜ್ರಿವಾಲ್ ಮುರಿಯಲು ಹೊರಟಿದ್ದಾರೆ‘ ಎಂದು ವಾಗ್ದಾಳಿ ನಡೆಸಿದ್ದಾರೆ.

‘ರಾಷ್ಟ್ರ ರಾಜಧಾನಿಯಲ್ಲಿ ಗಲಭೆ ನಡೆದಾಗ ಕೇಜ್ರಿವಾಲ್‌ ನಾಪತ್ತೆಯಾಗಿದ್ದರು. ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಶಹೀನ್‌ಬಾಗ್‌ನಲ್ಲಿ ‍‍‍ಪ್ರತಿಭಟನೆ ಮಾಡುತ್ತಿದ್ದವರ ವಿರುದ್ದ ಮಾತನಾಡಿದರು. ಕೋವಿಡ್‌ 19ನಿಂದ ಆಮ್ಲಜನಕ ಹಾಗೂ ಆಸ್ಪತ್ರೆಗಳಲ್ಲಿ ಬೆಡ್‌ ಸಿಗದೆ ಕಷ್ಟಪಡುತ್ತಿರುವಾಗ, ತಬ್ಲೀಘಿಗಳಿಂದ ಕೊರೊನಾವೈರಸ್‌ ಹರಡಿತು ಎಂದು ವಿಷ ಉಗುಳಿದರು‘ ಎಂದು ಓವೈಸಿ ಕಿಡಿಕಾರಿದ್ದಾರೆ.

‘ತಬ್ಲೀಘಿ ಜಮಾತ್‌ ಸದಸ್ಯರನ್ನು ಸೂಪರ್‌ ಸ್ಪ್ರೆಡರ್‌ ಎಂದು ಕರೆದರು. ಇಡೀ ದೇಶವೇ ಮುಸಲ್ಮಾನರನ್ನು ಸಂಶಯದಿಂದ ನೋಡಲು ಪ್ರಾರಂಭಿಸಿತು. ದ್ವೇಷ ಹೆಚ್ಚಾಗಿ, ಹಲವು ಮಂದಿಯ ಮೇಲೆ ದಾಳಿಯೂ ನಡೆಯಿತು. ದೆಹಲಿ ಮುಖ್ಯಮಂತ್ರಿ ಇದಕ್ಕೆ ಕಾರಣ‘ ಎಂದು ಅವರು ಆರೋಪಿಸಿದ್ದಾರೆ.

‘ಕೇಜ್ರಿವಾಲ್‌ ಅವರ ಪಕ್ಷದಲ್ಲಿ ಇದ್ದ ವ್ಯಕ್ತಿ, ಬಳಿಕ ಬಿಜೆಪಿ ಸೇರಿ ಜನರ ವಿರುದ್ಧ ಗುಂಡು ಹೊಡೆಯಿರಿ ಎಂದು ಘೋಷಣೆ ಕೂಗಿದ್ದರು. ತಬ್ಲೀಘಿ ಜಮಾತ್‌ ವಿರುದ್ಧ ಎಫ್‌ಐಆರ್‌ ದಾಖಲಿಸಿದರು. ಆದರೆ ಆ ವ್ಯಕ್ತಿ ವಿರುದ್ದ ದೂರು ದಾಖಲಿಸಲಿಲ್ಲ. ಇದು ಅವರ ನಿಜ ಮುಖ. ಅವರು 2013ರ ನರೇಂದ್ರ ಮೋದಿ. ಪ್ರಧಾನಿಯವರ ದಾಖಲೆಗಳನ್ನೆಲ್ಲಾ ಕೇಜ್ರಿವಾಲ್ ಮುರಿಯಲು ಹೊರಟಿದ್ದಾರೆ‘ ಎಂದು ಓವೈಸಿ ಹೇಳಿದ್ದಾರೆ.

‘2020ರ ಗಲಭೆಯಲ್ಲಿ ಮನೆಗಳಿಗೆ ಬೆಂಕಿ ಹಚ್ಚಲಾಯ್ತು. ಜನರನ್ನು ಕೊಲ್ಲಲಾಯ್ತು. ಆದರೆ ದೆಹಲಿ ಮುಖ್ಯಮಂತ್ರಿ ಎಲ್ಲೂ ಕಾಣಿಸಿಕೊಂಡಿಲ್ಲ. ಎಐಎಂಐಎಂ ಅಭ್ಯರ್ಥಿಗಳಿಗೆ ಮತ ನೀಡುವ ಮೂಲಕ ಮುಸ್ಲಿಂ ಸಮುದಾಯ ತಮ್ಮದೇ ನಾಯಕತ್ವವನ್ನು ಬೆಳೆಸಿಕೊಳ್ಳಬೇಕು‘ ಎಂದು ಅವರು ಕರೆಕೊಟ್ಟಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು