ಶನಿವಾರ, ಸೆಪ್ಟೆಂಬರ್ 18, 2021
21 °C
ಶಸ್ತ್ರಾಸ್ತ್ರ ಖರೀದಿಗೆ ಹಣಕಾಸು ಕೊರತೆ ಇಲ್ಲ: ಸೇನೆ ಮುಖ್ಯಸ್ಥ ಹೇಳಿಕೆ

ಸೇನೆ ಆಧುನೀಕರಣ ಪ್ರಕ್ರಿಯೆ ಅಬಾಧಿತ: ಸೇನೆ ಮುಖ್ಯಸ್ಥ ಜ.ನರವಣೆ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ‘ಸೇನೆಯ ಆಧುನೀಕರಣ ಪ್ರಕ್ರಿಯೆ ಯಾವುದೇ ಅಡ್ಡಿ–ಆತಂಕಗಳಲ್ಲಿದೆಯೇ ಮುಂದುವರಿದಿದೆ. ದೇಶದ ಗಡಿ ರಕ್ಷಣೆಗೆ ಬೇಕಾದ ಶಸ್ತ್ರಾಸ್ತ್ರಗಳ ಖರೀದಿಗೆ ಹಣಕಾಸಿನ ಕೊರತೆಯೂ ಇಲ್ಲ’ ಎಂದು ಸೇನಾಪಡೆ ಮುಖ್ಯಸ್ಥ ಜನರಲ್‌ ಎಂ.ಎಂ.ನರವಣೆ ಹೇಳಿದ್ದಾರೆ.

ಪೂರ್ವ ಲಡಾಖ್‌ನ ಗಡಿಯಲ್ಲಿ ವಾಸ್ತವ ನಿಯಂತ್ರಣ ರೇಖೆ (ಎಲ್‌ಎಸಿ) ಬಳಿ ಚೀನಾದೊಂದಿಗೆ ಸುದೀರ್ಘ ಸಂಘರ್ಷ ಏರ್ಪಟ್ಟ ಹಿನ್ನೆಲೆಯಲ್ಲಿ ಸೇನೆಯ ಆಧುನೀಕರಣಕ್ಕೆ ಹಿನ್ನಡೆಯಾಗಬಹುದು ಎಂಬ ಆತಂಕವನ್ನು ಅವರು ನಿರಾಕರಿಸಿದ್ದಾರೆ.

ಪಿಟಿಐ ಸುದ್ದಿಸಂಸ್ಥೆಗೆ ವಿಶೇಷ ಸಂದರ್ಶನ ನೀಡಿರುವ ಅವರು ,‘ಸೇನೆಯ ಆಧುನೀಕರಣಕ್ಕೆ ಅಗತ್ಯವಿರುವ ಅನುದಾನವನ್ನು ಸರ್ಕಾರ ಒದಗಿಸಿದೆ’ ಎಂದು ಹೇಳಿದರು.

‘ವಿವಿಧ ಯುದ್ಧೋಪಕರಣ ಸೇರಿದಂತೆ ಅಗತ್ಯ ಸಾಮಗ್ರಿಗಳ ಪೂರೈಕೆಗಾಗಿ ಕಳೆದ ಹಣಕಾಸು ವರ್ಷದಲ್ಲಿ ₹ 21,000 ಕೋಟಿ ಮೊತ್ತದ 59 ಗುತ್ತಿಗೆಗಳಿಗೆ ಅನುಮೋದನೆ ನೀಡಲಾಗಿದೆ. ಇತರ ಖರೀದಿ ಪ್ರಕ್ರಿಯೆಗೆ ಅನುದಾನ ಕೋರಿ ಪ್ರಸ್ತಾವಗಳನ್ನು ಸಲ್ಲಿಸಲಾಗಿದೆ’ ಎಂದರು.

‘ಕ್ವಾಡ್‌ ಎಂಬುದು ಮಿಲಿಟರಿ ಮೈತ್ರಿಯಲ್ಲ’:  ಕ್ವಾಡ್‌ ಕುರಿತ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ‘ಇದು ಮಿಲಿಟರಿ ಶಕ್ತಿ ಬಳಕೆಗಾಗಿ ಮಾಡಿಕೊಂಡಿರುವ ಮೈತ್ರಿ ಅಲ್ಲ. ಈ ಬಗ್ಗೆ ಕೆಲವು ರಾಷ್ಟ್ರಗಳು ಭಯ ಹುಟ್ಟಿಸುವ ಕಾರ್ಯದಲ್ಲಿ ತೊಡಗಿವೆ‘ ಎಂದು ಪ್ರತಿಕ್ರಿಯಿಸಿದರು.

‘ಇಂಡೊ–ಪೆಸಿಫಿಕ್‌ ಪ್ರದೇಶ ಎದುರಿಸುತ್ತಿರುವ ಸಮಸ್ಯೆಗಳಿಗೆ ಪರಿಹಾರ ಕಂಡುಕೊಂಡು, ಪ್ರಾದೇಶಿಕ ಸ್ಥಿರತೆ ಕಾಪಾಡುವ ನಿಟ್ಟಿನಲ್ಲಿ ರಚಿಸಿಕೊಂಡಿರುವ ಬಹುಪಕ್ಷೀಯ ಗುಂಪು ಇದು’ ಎಂದೂ ಸ್ಪಷ್ಟಪಡಿಸಿದರು.

ಭಾರತ, ಅಮೆರಿಕ, ಜಪಾನ್‌ ಹಾಗೂ ಆಸ್ಟ್ರೇಲಿಯಾ ‘ಕ್ವಾಡ್‌’ನ ಸದಸ್ಯ ರಾಷ್ಟ್ರಗಳಾಗಿವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು