ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಮಿಳುನಾಡಿನಲ್ಲಿ ನಾರಿಶಕ್ತಿಗೆ ಮೋದಿ ತಾರೀಫು

Last Updated 2 ಏಪ್ರಿಲ್ 2021, 19:31 IST
ಅಕ್ಷರ ಗಾತ್ರ

ಮಧುರೈ/ಕೊಣ್ಣಿ (ಪಿಟಿಐ): ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರ ದಕ್ಷಿಣದ ರಾಜ್ಯಗಳಾದ ಕೇರಳ ಹಾಗೂ ತಮಿಳುನಾಡಿನಲ್ಲಿ ಬಿಜೆಪಿ ಅಭ್ಯರ್ಥಿಗಳ ಪರ ಪ್ರಚಾರ ನಡೆಸಿದರು. ತಮಿಳುನಾಡಿನಲ್ಲಿ ಡಿಎಂಕೆ–ಕಾಂಗ್ರೆಸ್‌ ಮೈತ್ರಿಕೂಟ ಹಾಗೂ ಕೇರಳದಲ್ಲಿ ಎಲ್‌ಡಿಎಫ್‌ ಹಾಗೂ ಯುಡಿಎಫ್ ಮೈತ್ರಿಕೂಟಗಳ ವಿರುದ್ಧ ವಾಗ್ದಾಳಿ ನಡೆಸಿದರು.

ತಮಿಳುನಾಡಿನ ಮಧುರೈಯಲ್ಲಿ ನಡೆದ ರ್‍ಯಾಲಿಯಲ್ಲಿ ಮಾತನಾಡುತ್ತಾ, ‘ಡಿಎಂಕೆ ಹಾಗೂ ಕಾಂಗ್ರೆಸ್‌ ಮುಖಂಡರು ಮಹಿಳೆಯರನ್ನು ಅಪಮಾನಿಸುತ್ತಾ ಬಂದಿದ್ದಾರೆ. ಆದರೆ, ಎನ್‌ಡಿಎ ಮಾತ್ರ ಮಹಿಳೆಯರ ಸಬಲೀಕರಣಕ್ಕಾಗಿ ಶ್ರಮಿಸುತ್ತದೆ. ಎಲ್ಲರನ್ನೂ ಒಳಗೊಂಡಂಥ ಅಭಿವೃದ್ಧಿ ಹಾಗೂ ಸಮೃದ್ಧವಾದ ಸಮಾಜ ನಿರ್ಮಿಸಬೇಕು ಎಂಬ ಎಂ.ಜಿ. ರಾಮಚಂದ್ರನ್‌ ಅವರ ಕನಸೇ ನಮಗೆ ಪ್ರೇರಣೆ’ ಎಂದರು.

‘ಮಹಿಳಾ ಸಬಲೀಕರಣ ಎಂದರೇನು ಎಂಬುದನ್ನು ಮಧುರೈ ನಗರ ಕಲಿಸುತ್ತದೆ. ಇಲ್ಲಿನ ‘ಮೀನಾಕ್ಷಿ ಅಮ್ಮ’ನನ್ನು ಎಲ್ಲರೂ ಗೌರವಿಸುತ್ತಾರೆ. ಇದಲ್ಲದೆ, ಇಲ್ಲಿನ ಕಣ್ಣಗಿ ಅಮ್ಮನ್‌, ರಾಣಿ ಮಂಗಮ್ಮಾಳ್‌ ಹಾಗೂ ವೇಲು ನಾಚಯ್ಯಾರ್‌ ಅವರು ನಾರಿ ಶಕ್ತಿಗೆ ಶ್ರೇಷ್ಠ ಉದಾಹರಣೆಗಳಾಗಿದ್ದಾರೆ. ಕಾಂಗ್ರೆಸ್‌ ಹಾಗೂ ಡಿಎಂಕೆ ಮಧುರೈಯ ಅಂತರಂಗವನ್ನೇ ಅರ್ಥ ಮಾಡಿಕೊಂಡಿಲ್ಲ. ಆದ್ದರಿಂದ ಅವರ ನಾಯಕರು ಆಗಾಗ ಮಹಿಳೆಯರನ್ನು ಅಪಮಾನಿಸುವುದರಲ್ಲಿ ಅಚ್ಚರಿ ಇಲ್ಲ’ ಎಂದರು.

ಡಿಎಂಕೆ ನಾಯಕ ಎ. ರಾಜಾ ಅವರು ಕೆಲವು ದಿನಗಳ ಹಿಂದೆ ಮುಖ್ಯಮಂತ್ರಿ ಪಳನಿಸ್ವಾಮಿ ಅವರ ತಾಯಿಯ ಬಗ್ಗೆ ಅಪಮಾನಕಾರಿ ಹೇಳಿಕೆ ನೀಡಿದ್ದರು. ಆ ನಂತರ ಅದಕ್ಕಾಗಿ ಕ್ಷಮೆಯನ್ನೂ ಯಾಚಿಸಿದ್ದರು. ಎಐಎಡಿಎಂಕೆ ನೀಡಿದ ದೂರನ್ನು ಪರಿಗಣಿಸಿದ ಚುನಾವಣಾ ಆಯೋಗವು ಗುರುವಾರ 48 ಗಂಟೆಗಳ ಕಾಲ ಪ್ರಚಾರದಲ್ಲಿ ಪಾಲ್ಗೊಳ್ಳುವುದರಿಂದ ರಾಜಾ ಅವರಿಗೆ ನಿಷೇಧ ಹೇರಿತ್ತು.

ಡಿಎಂಕೆಯನ್ನೇ ತನ್ನ ಟೀಕೆಯ ಮುಖ್ಯ ಗುರಿಯಾಗಿಸಿದ ಮೋದಿ, ‘ಡಿಎಂಕೆ ಮುಖ್ಯಸ್ಥರ ಕುಟುಂಬದಲ್ಲಿ (ಎಂ.ಕೆ. ಸ್ಟಾಲಿನ್‌ ಹಾಗೂ ಎಂ.ಕೆ. ಅಳಗಿರಿ ಮಧ್ಯೆ) ಜಗಳ ಉಂಟಾಗಿದ್ದ ಸಂದರ್ಭದಲ್ಲಿ, ಮಧುರೈಯನ್ನು ‘ಮಾಫಿಯಾ ಗುಹೆ’ಯಾಗಿಸಲು ಡಿಎಂಕೆ ಪ್ರಯತ್ನಿಸಿತ್ತು. ಕಾಂಗ್ರೆಸ್‌ ಆಗಲಿ, ಡಿಎಂಕೆಯಾಗಲಿ ನಿಮ್ಮ ರಕ್ಷಣೆ ಹಾಗೂ ಘನತೆ ಕಾಪಾಡುವ ಭರವಸೆ ನೀಡಲಾರವು. ಅವರ ಆಡಳಿತದಲ್ಲಿ ಕಾನೂನು ಸುವ್ಯವಸ್ಥೆ ಹದಗೆಡಲಿದೆ ಎಂದರು.

ಜಾತಿ ಧರ್ಮ ನೋಡುವುದಿಲ್ಲ: ಕನ್ಯಾಕುಮಾರಿ ಲೋಕಸಭಾ ಕ್ಷೇತ್ರದಲ್ಲಿ ಪ್ರಚಾರ ಭಾಷಣ ಮಾಡಿದ ಮೋದಿ, ‘ನಮ್ಮ ಪಕ್ಷವು ಜನರ ಸೇವೆ ಮಾಡುವುದಕ್ಕೂ ಮುನ್ನ ಅವರ ಜಾತಿ– ಧರ್ಮಗಳನ್ನು ನೋಡುವುದಿಲ್ಲ’ ಎಂದರು.

‘ತಮಿಳುನಾಡಿನಲ್ಲಿ ಡಿಎಂಕೆಯನ್ನು ಕಟ್ಟಲು ಕರುಣಾನಿಧಿ ಅವರ ಜತೆಗೆ ಹೆಗಲುಕೊಟ್ಟು ದುಡಿದಿದ್ದವರಿಗೆ ಈಗ ಹೊಸದಾಗಿ ಯುವರಾಜನಾಗಿ ಉದಯಿಸಿರುವ ವ್ಯಕ್ತಿಯಿಂದಾಗಿ (ಡಿಎಂಕೆ ಯುವ ಘಟಕದ ಕಾರ್ಯದರ್ಶಿ ಉದಯನಿಧಿ ಸ್ಟಾಲಿನ್‌) ಪಕ್ಷದೊಳಗೆ ಉಸಿರುಗಟ್ಟಿದ ಅನುಭವವಾಗುತ್ತಿದೆ. ರಾಜಕೀಯ ಹೀಗೆ ನಡೆಯುವುದಿಲ್ಲ. ದೇಶದ ಜನರು ಸ್ವಜನಪಕ್ಷಪಾತದ ವಿರುದ್ಧ ಇದ್ದಾರೆ. ಜನರನ್ನು ಪ್ರಜಾಪ್ರಭುತ್ವ ವಿರೋಧಿಗಳು ಎಂದು ನಿಂದಿಸುವ ವಿರೋಧಪಕ್ಷದವರು ಒಮ್ಮೆ ಕನ್ನಡಿಯಲ್ಲಿ ತಮ್ಮ ಮುಖ ನೋಡಿಕೊಳ್ಳಬೇಕು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT