ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಈ ಬಾರಿ ಮುಂಗಾರು ಉತ್ತಮ: ಹವಾಮಾನ ಇಲಾಖೆ ಮುನ್ಸೂಚನೆ

Last Updated 1 ಜೂನ್ 2021, 23:00 IST
ಅಕ್ಷರ ಗಾತ್ರ

ನವದೆಹಲಿ : ಈ ಭಾರಿ ದೇಶದಾದ್ಯಂತ ಮುಂಗಾರು ಮಳೆಯು ವಾಡಿಕೆಯಷ್ಟು ಸುರಿಯಲಿದೆ. ಕೆಲವೆಡೆ ಮಾತ್ರ ವಾಡಿಕೆಗಿಂತ ಕಡಿಮೆ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತನ್ನ ಮುಂಗಾರು ಮುನ್ಸೂಚನೆಯಲ್ಲಿ ಹೇಳಿದೆ. ಆದರೆ, ಕರ್ನಾಟಕ ಮತ್ತು ಕೇರಳದ ಕೆಲವು ಪ್ರದೇಶಗಳಲ್ಲಿ ವಾಡಿಕೆಗಿಂತ ಕಡಿಮೆ ಮಳೆಯಾಗುವ ಸಾಧ್ಯತೆ ಶೇ 35-45ರಷ್ಟಿದೆ ಎಂದು ಹವಾಮಾನ ಇಲಾಖೆ ಹೇಳಿದೆ.

50 ವರ್ಷಗಳ ದೀರ್ಘಾವಧಿ ಸರಾಸರಿಗೆ ಹೋಲಿಸಿದರೆ ಈ ಬಾರಿ ದಕ್ಷಿಣ, ಉತ್ತರ ಮತ್ತು ವಾಯವ್ಯ ಭಾರತದಲ್ಲಿ ವಾಡಿಕೆಯಷ್ಟು ಮಳೆಯಾಗಲಿದೆ. ಮಧ್ಯ ಭಾರತದಲ್ಲಿ ವಾಡಿಕೆಗಿಂತಲೂ ಹೆಚ್ಚು ಮಳೆಯಾಗಲಿದೆ. ಈಶಾನ್ಯ ಭಾರತದಲ್ಲಿ ವಾಡಿಕೆಗಿಂತ ಸ್ವಲ್ಪ ಕಡಿಮೆ ಮಳೆಯಾಗಲಿದೆ. ಆದರೆ ಎಲ್ಲಿಯೂ ಮಳೆಯ ತೀವ್ರ ಕೊರತೆ ಇರುವುದಿಲ್ಲ ಎಂದು ಹವಾಮಾನ ಇಲಾಖೆ ಹೇಳಿದೆ. ಹವಾಮಾನ ಇಲಾಖೆ ಬಿಡುಗಡೆ ಮಾಡಿರುವ 2021ರ ದೀರ್ಘಾವಧಿ ಮುಂಗಾರು ಮುನ್ಸೂಚನೆಯಲ್ಲಿ ಈ ಮಾಹಿತಿ ಇದೆ.

‘ಜೂನ್‌ನಿಂದ ಸೆಪ್ಟೆಂಬರ್‌ವರೆಗೆ ದೀರ್ಘಾವಧಿ ಸರಾಸರಿಯ ಶೇ 101ರಷ್ಟು ಮಳೆಯಾಗಲಿದೆ ಎಂದು ನಿರೀಕ್ಷಿಸಲಾಗಿದೆ. ಇದರಲ್ಲಿ ಶೇ 4ರಷ್ಟು ವ್ಯತ್ಯಾಸವಾಗುವ ಸಾಧ್ಯತೆ ಇದೆ. ಒಟ್ಟಾರೆ ಮುಂಗಾರಿನಲ್ಲಿ ದೇಶದಾದ್ಯಂತ ವಾಡಿಕೆಯಷ್ಟು ಮಳೆಯಾಗುವ ಕಾರಣ ಕೃಷಿ ಕ್ಷೇತ್ರಕ್ಕೆ ಅನುಕೂಲವಾಗಲಿದೆ ಎಂದು ನಿರೀಕ್ಷಿಸಲಾಗಿದೆ’ ಎಂದು ಹವಾಮಾನ ಇಲಾಖೆ ಮಹಾ ನಿರ್ದೇಶಕ ಮೃತ್ಯುಂಜಯ ಮಹಾಪಾತ್ರ ಅವರು ಹೇಳಿದ್ದಾರೆ.

‘ವಾಡಿಕೆಗಿಂತ ಹೆಚ್ಚು ಮಳೆಯಾಗುವ ಸಾಧ್ಯತೆ ಶೇ 22ರಷ್ಟಿದ್ದರೆ, ವಾಡಿಕೆಗಿಂತ ಅತಿಹೆಚ್ಚು ಮಳೆಯಾಗುವ ಸಾಧ್ಯತೆ ಶೇ 12ರಷ್ಟಿದೆ. ವಾಡಿಕೆಗಿಂತ ಕಡಿಮೆ ಮಳೆಯಾಗುವ ಸಾಧ್ಯತೆ ಶೇ 18ರಷ್ಟಿದ್ದರೆ, ವಾಡಿಕೆಯಷ್ಟು ಮಳೆಯಾಗುವ ಸಾಧ್ಯತೆಯ ಪ್ರಮಾಣ ಶೇ 40ರಷ್ಟಿದೆ’ ಎಂದು ಮಹಾಪಾತ್ರ ಅವರು ಹೇಳಿದ್ದಾರೆ.

‘ಉತ್ತರ, ವಾಯವ್ಯ, ಮಧ್ಯ ಭಾರತ ಮತ್ತು ದಕ್ಷಿಣ ಭಾರತದ ಪೂರ್ವದ ರಾಜ್ಯಗಳ ಆಯ್ದ ಪ್ರದೇಶಗಳಲ್ಲಿ ವಾಡಿಕೆಯಷ್ಟು ಮಳೆಯಾಗಲಿದೆ. ಉಳಿಕೆ ಪ್ರದೇಶಗಳಲ್ಲಿ ವಾಡಿಕೆಗಿಂತ ಹೆಚ್ಚು ಮಳೆಯಾಗಲಿದೆ. ಈಶಾನ್ಯ ಭಾರತದ ಎಲ್ಲೆಡೆ, ಉತ್ತರ ಭಾರತದ ಕೆಲವೆಡೆ ಮತ್ತು ದಕ್ಷಿಣ ಭಾರತದ ಪಶ್ಚಿಮದ ರಾಜ್ಯಗಳಲ್ಲಿ ವಾಡಿಕೆಗಿಂತ ಕಡಿಮೆ ಮಳೆಯಾಗಲಿದೆ’ ಎಂದು ಅವರು ಮಾಹಿತಿ ನೀಡಿದ್ದಾರೆ.

ದೇಶದಾದ್ಯಂತ ಮುಂಗಾರಿನಲ್ಲಿ ಉತ್ತಮ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆಯು ತನ್ನ ಈ ಹಿಂದಿನ ಮುನ್ಸೂಚನೆಯಲ್ಲಿ ಮಾಹಿತಿ ನೀಡಿತ್ತು. ಹೀಗಾಗಿ ದೇಶದ ಹಲವು ರಾಜ್ಯಗಳಲ್ಲಿ ಮುಂಗಾರು ಬೇಸಾಯದ ಚಟುವಟಿಕೆಗಳು ಆರಂಭವಾಗಿವೆ. ಉತ್ತಮ ಮಳೆಯ ಮುನ್ಸೂಚನೆ ಇರುವ ಕಾರಣ, ಈ ಭಾರಿ ಕೃಷಿ ಉತ್ಪನ್ನಗಳ ಆವಕ ಏರಿಕೆ
ಯಾಗುವ ನಿರೀಕ್ಷೆ ಇದೆ ಎಂದು ತಜ್ಞರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT