ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಿರಾಜ್ ಬ್ಲ್ಯಾಕ್ ಬಾಕ್ಸ್, ಸುಖೋಯ್‌‌ ಡೇಟಾ ರೆಕಾರ್ಡರ್‌ನ ಒಂದು ಭಾಗ ಪತ್ತೆ

Last Updated 29 ಜನವರಿ 2023, 10:32 IST
ಅಕ್ಷರ ಗಾತ್ರ

ನವದೆಹಲಿ: ಶನಿವಾರ ಪತನಗೊಂಡಿದ್ದ ಭಾರತೀಯ ವಾಯುಪಡೆಯ (ಐಎಎಫ್) ಮಿರಾಜ್–2000 ಯುದ್ಧ ವಿಮಾನದ ಬ್ಲ್ಯಾಕ್ಸ್ ಬಾಕ್ಸ್ ಮತ್ತು ಸುಖೋಯ್‌–30ಎಂಕೆಐ ವಿಮಾನದ ಫ್ಲೈಟ್ ಡೇಟಾ ರೆಕಾರ್ಡರ್ ಉಪಕರಣದ ಒಂದು ಭಾಗವು ಪತ್ತೆಯಾಗಿದೆ.

ಮೊರೆನಾದ ಪಹಾಡ್‌ಗಢ್ ಪ್ರದೇಶದಲ್ಲಿ ಮಿರಾಜ್ ವಿಮಾನದ ಬ್ಲ್ಯಾಕ್ ಬಾಕ್ಸ್ ಪತ್ತೆಯಾಗಿದೆ. ಸುಖೋಯ್ ವಿಮಾನದ ಫ್ಲೈಟ್ ಡೇಟಾ ರೆಕಾರ್ಡರ್ ಒಂದು ಭಾಗವೂ ಪತ್ತೆಯಾಗಿದೆ. ರೆಕಾರ್ಡರ್‌ನ ಉಳಿದ ಭಾಗವು ರಾಜಸ್ಥಾನದ ಭರತ್‌ಪುರದಲ್ಲಿ ಬಿದ್ದಿರಬಹುದು ಎಂದು ಮೊರೆನಾ ಜಿಲ್ಲೆಯ ಪೊಲೀಸ್‌ ವರಿಷ್ಠಾಧಿಕಾರಿ ಅಶುತೋಷ್ ಬಗರಿ ಪಿಟಿಐಗೆ ತಿಳಿಸಿದ್ದಾರೆ.

ಐಎಎಫ್, ಪೊಲೀಸ್ ಮತ್ತು ಇತರೆ ಭದ್ರತಾ ಸಿಬ್ಬಂದಿ ಸುಖೋಯ್ ಯುದ್ಧ ವಿಮಾನದ ಉಳಿದ ಭಾಗದ ಹುಡುಕಾಟ ನಡೆಸುತ್ತಿವೆ ಎಂದು ಅವರು ತಿಳಿಸಿದ್ದಾರೆ.

ಗ್ವಾಲಿಯರ್‌ನಿಂದ ದಿನನಿತ್ಯದ ತರಬೇತಿ ಹಾರಾಟಕ್ಕೆ ತೆರಳಿದ್ದ ಯುದ್ಧ ವಿಮಾನಗಳು, ಮಧ್ಯಪ್ರದೇಶದ ಮೊರೆನಾ ಜಿಲ್ಲೆಯಲ್ಲಿ ಅವಘಡಕ್ಕೀಡಾಗಿತ್ತು. ಮಿರಾಜ್ ಯುದ್ಧವಿಮಾನದಲ್ಲಿದ್ದ ಪೈಲಟ್, ಬೆಳಗಾವಿಯ ವಿಂಗ್ ಕಮಾಂಡರ್ ಹನುಮಂತರಾವ್ ಸಾರಥಿ ಮೃತಪಟ್ಟಿದ್ದಾರೆ. ಸುಖೋಯ್ ಯುದ್ಧ ವಿಮಾನದಲ್ಲಿದ್ದ ಇಬ್ಬರು ಪೈಲಟ್‌ಗಳು ಹೊರಜಿಗಿದು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಹಾರಾಟದ ವೇಳೆ ವಿಮಾನಗಳ ನಡುವೆ ಡಿಕ್ಕಿ ಸಂಭವಿಸಿರಬಹುದು ಎಂದು ರಕ್ಷಣಾ ತಜ್ಞರು ಶಂಕೆ ವ್ಯಕ್ತಪಡಿಸಿದ್ದಾರೆ. ಆದರೆ ಈ ಕುರಿತು ಅಧಿಕೃತ ಪ್ರಕಟಣೆ ಬಂದಿಲ್ಲ.

ಈ ಎರಡೂ ಯುದ್ಧ ವಿಮಾನಗಳ ಅವಶೇಷಗಳು ಪಹಾಡ್‌ಗಢ್ ಪ್ರದೇಶದಲ್ಲಿ ಪತ್ತೆಯಾಗಿದೆ. ಮಧ್ಯ ಪ್ರದೇಶದ ಗಡಿಯಲ್ಲಿರುವ ರಾಜಸ್ಥಾನದ ಭರತ್‌ಪುರದಲ್ಲೂ ಉಳಿದ ಅವಶೇಷಗಳು ಬಿದ್ದಿವೆ ಎಂದು ಮೊರೆನಾ ಜಿಲ್ಲಾಧಿಕಾರಿ ಅಂಕಿತ್ ಅಸ್ಥಾನಾ ತಿಳಿಸಿದ್ದಾರೆ.

ಅಪಘಾತಕ್ಕೆ ನಿಖರ ಕಾರಣ ತಿಳಿಯಲು ಉನ್ನತಮಟ್ಟದ ತನಿಖೆಗೆ ಆದೇಶಿಸಲಾಗಿದೆ.

ಬ್ಲ್ಯಾಕ್ ಬಾಕ್ಸ್, ಫ್ಲೈಟ್ ಡೇಟಾ ರೆಕಾರ್ಡರ್ ವಿಮಾನದಲ್ಲಿ ಲಗತ್ತಿಸಲಾಗಿರುವ ಎಲೆಕ್ಟ್ರಾನಿಕ್ ರೆಕಾರ್ಡಿಂಗ್ ಉಪಕರಣವಾಗಿದ್ದು, ವಿಮಾನ ಅಪಘಾತಗಳ ಕಾರಣ ಪತ್ತೆ ಹಚ್ಚಲು ನೆರವಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT