ಬಾವಿ ಕುಸಿತ ಪ್ರಕರಣ, ಸತ್ತವರ ಸಂಖ್ಯೆ 11ಕ್ಕೆ ಏರಿಕೆ, ₹2 ಲಕ್ಷ ಪರಿಹಾರ

ಭೋಪಾಲ್: ಮಧ್ಯಪ್ರದೇಶದ ವಿದಿಶಾ ಜಿಲ್ಲೆಯ ಗಂಜಗ್ ಬಸೋಡಾ ಪ್ರದೇಶದಲ್ಲಿರುವ ಲಾಲ್‌ಪತ್ತರ್ ಹಳ್ಳಿಯಲ್ಲಿ ಬಾವಿಗೆ ಬಿದ್ದಿದ್ದ ಬಾಲಕನನ್ನು ರಕ್ಷಿಸುವಾಗ ಬಾವಿಯ ಗೋಡೆ ಕುಸಿದ ಪ್ರಕರಣದಲ್ಲಿ ಸತ್ತವರ ಸಂಖ್ಯೆ 11ಕ್ಕೆ ಏರಿದ್ದು, ಮಣ್ಣಿನ ಅಡಿಯಲ್ಲಿ ಸಿಲುಕಿದ್ದ 19 ಮಂದಿಯನ್ನು ರಕ್ಷಿಸಲಾಗಿದೆ.
ಗುರುವಾರ ರಾತ್ರಿ ಈ ಘಟನೆ ನಡೆದಿದೆ. ಶುಕ್ರವಾರ ತಡರಾತ್ರಿ ಕಾರ್ಯಾಚರಣೆ ಪೂರ್ಣಗೊಂಡಿದೆ. ಮಧ್ಯಪ್ರದೇಶ ಮುಖ್ಯಮಂತ್ರಿ ಶುಕ್ರವಾರ ಮೃತರ ಕುಟುಂಬಗಳಿಗೆ ತಲಾ ₹5 ಲಕ್ಷ ಮತ್ತು ಗಾಯಗೊಂಡವರಿಗೆ ₹50 ಸಾವಿರ ಪರಿಹಾರ ಪ್ರಕಟಿಸಿದ್ದಾರೆ.
ಘಟನೆ ಬಗ್ಗೆ ದಿಗ್ಭಮೆ ವ್ಯಕ್ತಪಡಿಸಿರುವ ಪ್ರಧಾನಿ ನರೇಂದ್ರ ಮೋದಿಯವರು, ’ಪ್ರಧಾನಮಂತ್ರಿ ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿ’ಯಿಂದ ಮೃತರ ಕುಟುಂಬಕ್ಕೆ ತಲಾ ₹2 ಲಕ್ಷ ಎಕ್ಸ್‌ಗ್ರೇಷಿಯಾ ಪರಿಹಾರ ನೀಡುವುದಾಗಿ ತಿಳಿಸಿದ್ದಾರೆ. ಪ್ರಧಾನಮಂತ್ರಿ ಕಾರ್ಯಾಲಯ ಶುಕ್ರವಾರ ರಾತ್ರಿ ಪ್ರಧಾನಿಯವರ ಈ ಹೇಳಿಕೆಯನ್ನು ಬಿಡುಗಡೆ ಮಾಡಿದೆ.
ರಾಷ್ಟ್ರಪತಿ ರಾಮನಾಥ್ ಕೋವಿಂದ್ ಘಟನೆ ಬಗ್ಗೆ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ.
ಗುರುವಾರ ಬಾವಿಯ ಪಕ್ಕ ಆಟವಾಡುತ್ತಿದ್ದ ಬಾಲಕ ಆಯ ತಪ್ಪಿ ಬಾವಿಗೆ ಬಿದ್ದಿದ್ದಾನೆ. ಈ ವಿಷಯವನ್ನು ಪೊಲೀಸರು, ಅಗ್ನಿಶಾಮಕ ಸಿಬ್ಬಂದಿಗೆ ವಿಷಯ ತಲುಪಿಸಿದರು. ತಕ್ಷಣ ಕಾರ್ಯಾಚರಣೆ ಆರಂಭವಾಯಿತು. ಶುಕ್ರವಾರ ಸಂಜೆ ಜನರು ಬಾವಿ ಪಕ್ಕದಲ್ಲಿ ನಿಂತು ರಕ್ಷಣಾ ಕಾರ್ಯವನ್ನು ವೀಕ್ಷಿಸುತ್ತಿದ್ದರು. ಇದ್ದಕ್ಕಿದ್ದಂತೆ ಬಾವಿಯ ದಡ (ತಡೆಗೋಡೆ) ಕುಸಿಯಿತು. ಸುತ್ತ ನಿಂತಿದ್ದ ಸುಮಾರು 50ಕ್ಕೂ ಹೆಚ್ಚು ಮಂದಿ ಬಾವಿಗೆ ಬಿದ್ದರು.
ಶುಕ್ರವಾರ ತಡರಾತ್ರಿ ವೇಳೆಗೆ ರಕ್ಷಣಾ ಕಾರ್ಯಚರಣೆ ಪೂರ್ಣಗೊಂಡಿತು. ಬಾವಿಯ ಮಣ್ಣಿನಡಿಯಲ್ಲಿ ಸಿಲುಕಿದ್ದ 19 ಮಂದಿಯನ್ನು ರಕ್ಷಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.