ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಂಬೈ ಯಾರಪ್ಪನ ಸ್ವತ್ತೂ ಅಲ್ಲ; ಅದು ಮಹಾರಾಷ್ಟ್ರದ್ದು: ಶಿಂದೆ, ಫಡಣವೀಸ್‌

ಗಡಿ ವಿವಾದ: ಮಹಾರಾಷ್ಟ್ರ ಮುಖ್ಯಮಂತ್ರಿ ಶಿಂದೆ, ಉಪ ಮುಖ್ಯಮಂತ್ರಿ ಫಡಣವೀಸ್‌ ಹೇಳಿಕೆ
Last Updated 29 ಡಿಸೆಂಬರ್ 2022, 3:16 IST
ಅಕ್ಷರ ಗಾತ್ರ

ಮುಂಬೈ: ‘ಮುಂಬೈ ಯಾರ ಅಪ್ಪನ ಸ್ವತ್ತೂ ಅಲ್ಲ; ಅದು ಮಹಾರಾಷ್ಟ್ರಕ್ಕೆ ಸೇರಿದ್ದು’ ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ ಶಿಂದೆ ಹಾಗೂ ಉಪ ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್‌ ಬುಧವಾರ ಹೇಳಿದ್ದಾರೆ.

ಮುಂಬೈಯನ್ನು ಕೇಂದ್ರಾಡಳಿತ‍ಪ್ರದೇಶವನ್ನಾಗಿ ಘೋಷಿಸುವುದು ಸೂಕ್ತ ಎಂದು ಕರ್ನಾಟಕದ ಕೆಲ ರಾಜಕಾರಣಿಗಳು ಹೇಳಿಕೆ ನೀಡಿದ್ದರು. ಈ ಕುರಿತು ಮಹಾರಾಷ್ಟ್ರ ವಿಧಾನಸಭೆ ಅಧಿವೇಶನದಲ್ಲಿ ಪ್ರತಿಕ್ರಿಯೆ ನೀಡಿರುವ ಶಿಂದೆ, ‘ಗಡಿ ಬಿಕ್ಕಟ್ಟು ಸುಮಾರು 66 ವರ್ಷಗಳಷ್ಟು ಹಳೆಯದು. ಶಿವಸೇನಾ ವರಿಷ್ಠರಾಗಿದ್ದ ಬಾಳಾಸಾಹೇಬ್‌ ಠಾಕ್ರೆ ಮತ್ತು ಆನಂದ್‌ ದಿಘೆ ಅವರ ಜೊತೆ ಕೆಲಸ ಮಾಡಿದ್ದೇನೆ. ಬಾಳಾಸಾಹೇಬ್‌ ಅವರ ಸೂಚನೆ ಮೇರೆಗೆ ನಾವು ಬೆಳಗಾವಿಗೆ ಹೋಗಿ ಪ್ರತಿಭಟನೆ ನಡೆಸಿದ್ದವು. ಆಗ ನಮ್ಮನ್ನು ಬಂಧಿಸಿ ಬಳ್ಳಾರಿ ಜೈಲಿನಲ್ಲಿ ಇರಿಸಲಾಗಿತ್ತು. ಪೊಲೀಸ್‌ ಪ್ರಕರಣಗಳಿಗೆಲ್ಲಾ ನಾವು ಹೆದರುವುದಿಲ್ಲ’ ಎಂದಿದ್ದಾರೆ.

‘66 ವರ್ಷಗಳ ಅವಧಿಯಲ್ಲಿ ಕಾಂಗ್ರೆಸ್‌ ಹಲವು ವರ್ಷ ಆಡಳಿತ ನಡೆಸಿದೆ. ಎನ್‌ಸಿಪಿ ಮತ್ತು ಕಾಂಗ್ರೆಸ್‌ ನೇತೃತ್ವದ ಸರ್ಕಾರವು 14 ವರ್ಷ ಅಧಿಕಾರದಲ್ಲಿತ್ತು. ಈ ಅವಧಿಯಲ್ಲಿ ಅವರು ಮಹಾರಾಷ್ಟ್ರ ಏಕೀಕರಣ ಸಮಿತಿ ಮತ್ತು ಕೇಂದ್ರದ ಜೊತೆ ಎಷ್ಟು ಬಾರಿ ಸಭೆ ನಡೆಸಿದ್ದಾರೆ. ನಾವು ಅಧಿಕಾರಕ್ಕೆ ಬಂದ ಆರೇ ತಿಂಗಳಲ್ಲಿ ಈ ಸಮಸ್ಯೆ ಬಗೆಹರಿಸಬೇಕೆಂದರೆ ಹೇಗೆ’ ಎಂದು ಪ್ರಶ್ನಿಸಿದ್ದಾರೆ.

ಮರಾಠಿ ಭಾಷಿಕರನ್ನು ಹೊಂದಿರುವಬೆಳಗಾವಿ, ಕಾರವಾರ, ನಿಪ್ಪಾಣಿ, ಬೀದರ್‌ ಮತ್ತು ಭಾಲ್ಕಿಯ 865 ಹಳ್ಳಿಗಳು ತನಗೆ ಸೇರಿದ್ದೆಂದು ಸರ್ಕಾರ ಪ್ರತಿಪಾದಿಸಿದ್ದು, ಈ ನಿಲುವಿಗೆ ಬದ್ಧವಾಗಿರಲಿದೆ ಎಂದು ಅವರು ಮತ್ತೊಮ್ಮೆ ಪುನರುಚ್ಚರಿಸಿದ್ದಾರೆ.

ಕಲಾಪದ ವೇಳೆಕರ್ನಾಟಕದ ರಾಜಕಾರಣಿಗಳ ಹೇಳಿಕೆಯನ್ನು ಪ್ರಸ್ತಾಪಿಸಿದವಿಧಾನಸಭೆ ವಿರೋಧ ಪಕ್ಷದ ನಾಯಕ ಅಜಿತ್‌ ಪವಾರ್‌ ‘ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರ ಮಧ್ಯಸ್ಥಿಕೆಯಲ್ಲಿ ನಡೆದ ಸಭೆಯ ಬಳಿಕವೂ ಕರ್ನಾಟಕದ ರಾಜಕಾರಣಿಗಳು ವಿವಾದಾತ್ಮಕ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಮುಖ್ಯಮಂತ್ರಿ ಶಿಂದೆ ಹಾಗೂ ಉಪ ಮುಖ್ಯಮಂತ್ರಿ ಫಡಣವೀಸ್‌ ಅವುಗಳತ್ತ ಗಮನಹರಿಸಬೇಕು’ ಎಂದು ಒತ್ತಾಯಿಸಿದರು.

‘ಕರ್ನಾಟಕದ ಮುಖ್ಯಮಂತ್ರಿ ಹಾಗೂ ಅಲ್ಲಿನ ಸಚಿವರು ತಮ್ಮ ಹೇಳಿಕೆಗಳ ಮೂಲಕ ಮಹಾರಾಷ್ಟ್ರದ ಘನತೆಗೆ ಧಕ್ಕೆ ಉಂಟು ಮಾಡುತ್ತಿದ್ದಾರೆ. ಆದರೆ ಮಹಾರಾಷ್ಟ್ರ ಸರ್ಕಾರ ಇದಕ್ಕೆ ದಿಟ್ಟ ಪ್ರತ್ಯುತ್ತರ ನೀಡುತ್ತಿಲ್ಲ’ ಎಂದರು.

ಇದಕ್ಕೆ ಪ‍್ರತಿಕ್ರಿಯಿಸಿದ ಫಡಣವೀಸ್‌, ‘ಮುಂಬೈ ತಮಗೆ ಸೇರಿದ್ದೆಂದು ಯಾರೇ ಹೇಳಿದರೂ ಅದನ್ನು ನಾವು ಸಹಿಸುವುದಿಲ್ಲ. ಈ ವಿಚಾರವಾಗಿ ಪ್ರತಿಭಟನೆ ವ್ಯಕ್ತಪಡಿಸಿ ಕರ್ನಾಟಕ ಸರ್ಕಾರಕ್ಕೆ ಪತ್ರ ರವಾನಿಸುತ್ತೇವೆ’ ಎಂದಿದ್ದಾರೆ.

‘ಕರ್ನಾಟಕದ ರಾಜಕಾರಣಿಗಳ ಹೇಳಿಕೆಗಳು ಅಮಿತ್‌ ಶಾ ಅವರ ನೇತೃತ್ವದಲ್ಲಿ ನಡೆದಿದ್ದ ಸಭೆಯಲ್ಲಿ ಕೈಗೊಂಡಿದ್ದ ನಿಲುವುಗಳಿಗೆ ವಿರುದ್ಧವಾಗಿವೆ. ಅದನ್ನು ನಾವು ಖಂಡಿಸುತ್ತೇವೆ.ಅಮಿತ್‌ ಶಾ ಅವರಿಗೂ ಈ ಕುರಿತು ಮಾಹಿತಿ ನೀಡುತ್ತೇವೆ’ ಎಂದು ತಿಳಿಸಿದ್ದಾರೆ.

***

‘ವಿವಾದಿತ ಪ್ರದೇಶಗಳನ್ನು ಕೇಂದ್ರಾಡಳಿತ ಪ್ರದೇಶವನ್ನಾಗಿ ಘೋಷಿಸಲಿ’

ನಾಗ್ಪುರ (ಪಿಟಿಐ): ‘ಕರ್ನಾಟಕ ಮತ್ತು ಮಹಾರಾಷ್ಟ್ರ ನಡುವಣ ಗಡಿ ಬಿಕ್ಕಟ್ಟಿನ ವಿಚಾರಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಕೂಡಲೇ ಮಧ್ಯಪ್ರವೇಶಿಸಬೇಕು. ವಿವಾದಿತ ಪ್ರದೇಶಗಳನ್ನು ಕೇಂದ್ರಾಡಳಿತ ಪ್ರದೇಶಗಳನ್ನಾಗಿ ಘೋಷಿಸಬೇಕು’ ಎಂದು ಶಾಸಕ ಜಯಂತ್‌ ಪಾಟೀಲ್‌ ಹೇಳಿದ್ದಾರೆ.

ವಿಧಾನಸಭೆಯಲ್ಲಿ ಬುಧವಾರ ಮಾತನಾಡಿದ ಅವರು, ‘ಕೇಂದ್ರವು ಜಮ್ಮು ಮತ್ತು ಕಾಶ್ಮೀರವನ್ನು ಕೇಂದ್ರಾಡಳಿತ ಪ್ರದೇಶವನ್ನಾಗಿ ಘೋಷಿಸಿದೆ. ಅದೇ ರೀತಿ ಪ್ರಧಾನಿ ಮೋದಿ ಅವರು ಕರ್ನಾಟಕ ಮತ್ತು ಮಹಾರಾಷ್ಟ್ರದ ಗಡಿ ಪ್ರದೇಶಗಳಲ್ಲಿರುವ ವಿವಾದಿತ ಸ್ಥಳಗಳನ್ನು ಕೇಂದ್ರಾಡಳಿತ ಪ್ರದೇಶವನ್ನು ಘೋಷಿಸಬೇಕು. ಬಿಜೆಪಿ ನಾಯಕರು ಈ ಬೇಡಿಕೆಯನ್ನು ಕೇಂದ್ರದ ಎದುರು ಇಡಬೇಕು’ ಎಂದು ಆಗ್ರಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT