ಮಂಗಳವಾರ, ಅಕ್ಟೋಬರ್ 26, 2021
24 °C
ಎನ್‌ಸಿಬಿಯಿಂದ ಆರ್ಯನ್ ಖಾನ್ ವಿಚಾರಣೆ

ಮುಂಬೈ ಹಡಗಿನಲ್ಲಿ ಡ್ರಗ್ಸ್ ಪಾರ್ಟಿ: ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ವಿಚಾರಣೆ

ಪ್ರಜಾವಾಣಿ ವೆಬ್‌ಡೆಸ್ಕ್‌‌ Updated:

ಅಕ್ಷರ ಗಾತ್ರ : | |

ಮುಂಬೈ: ಮುಂಬೈನ ತೀರ ಪ್ರದೇಶದ ಐಷಾರಾಮಿ ಹಡಗಿನಲ್ಲಿ ನಡೆದಿದ್ದ ಡ್ರಗ್ಸ್‌ ಪಾರ್ಟಿ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಿವುಡ್ ನಟ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ಅವರನ್ನು ವಿಚಾರಣೆಗೆ ಒಳಪಡಿಸಲಾಗಿದೆ ಎಂದು ರಾಷ್ಟ್ರೀಯ ಮಾದಕ ವಸ್ತು ನಿಯಂತ್ರಣ ಘಟಕದ (ಎನ್‌ಸಿಬಿ) ಅಧಿಕಾರಿಗಳು ಮಾಧ್ಯಮಗಳಿಗೆ ಖಚಿತಪಡಿಸಿದ್ದಾರೆ.

ಎನ್‌ಸಿಬಿ ಅಧಿಕಾರಿಗಳ ವಶದಲ್ಲಿದ್ದ ಆರ್ಯನ್ ಖಾನ್ ವಿಡಿಯೊಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.

ಪಾರ್ಟಿಯಲ್ಲಿ ಡ್ರಗ್ಸ್‌ ಬಳಕೆ ಮಾಡುತ್ತಿರುವ ಮಾಹಿತಿಯನ್ನು ಆಧರಿಸಿ ಶನಿವಾರ ರಾತ್ರಿ ಮಹಾರಾಷ್ಟ್ರದ ಎನ್‌ಸಿಬಿ ಅಧಿಕಾರಿಗಳು ಪ್ರಯಾಣಿಕರ ‘ಕ್ರೂಸ್‌‘ ಹಡಗಿನ ಮೇಲೆ ದಾಳಿ ನಡೆಸಿದ್ದರು.

ನೂರಾರು ಮಂದಿ ಪ್ರಯಾಣಿಕರಿದ್ದ ಹಡಗು ಗೋವಾ ಕಡೆಗೆ ಸಾಗುವುದಿತ್ತು. ಹಡಗಿನಲ್ಲಿ ಪಾರ್ಟಿ ನಡೆಯುತ್ತಿರುವ ಮಾಹಿತಿಯನ್ನು ಆಧರಿಸಿ ಎನ್‌ಸಿಬಿ ಅಧಿಕಾರಿ ಸಮೀರ್‌ ವಾಂಖೆಡೆ ನೇತೃತ್ವದ ಎನ್‌ಸಿಬಿ ತಂಡವು ಹಡಗಿನಲ್ಲಿ ಶೋಧ ಕಾರ್ಯ ನಡೆಸಿದ್ದರು. ಈ ವೇಳೆ ಹಡಗಿನಲ್ಲಿ ಆರ್ಯನ್ ಖಾನ್ ಕೂಡ ಪತ್ತೆಯಾಗಿದ್ದರು.

ಕೆಲವು ಪ್ರಯಾಣಿಕರಿಂದ ನಿಷೇಧಿತ ಮಾದಕ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಹಾಗೂ ಯಾವುದೇ ಪ್ರಯಾಣಿಕರಿಗೆ ಹಡಗಿನಿಂದ ಹೊರಹೋಗಲು ಅವಕಾಶ ನೀಡಿಲ್ಲ, ಹಾಗೇ ಆರ್ಯನ್ ಖಾನ್ ಅವರನ್ನು ಕೂಡ ವಿಚಾರಣೆ ನಡೆಸಲಾಗಿದೆ. ಆದರೆ, ಅವರು ಡ್ರಗ್ಸ್ ಬಳಕೆ ಮಾಡಿದ್ದರೇ ಎಂಬುದು ಇನ್ನೂ ಖಚಿತವಾಗಿಲ್ಲ ಎಂದು ಎನ್‌ಸಿಬಿ ಅಧಿಕಾರಿಗಳು ತಿಳಿಸಿದ್ದಾರೆ.

'ಡ್ರಗ್ಸ್‌ ವಶಕ್ಕೆ ಪಡೆಯಲಾಗಿದ್ದು, 8–10 ಜನರನ್ನು ವಿಚಾರಣೆಗೆ ಒಳಪಡಿಸಿದ್ದೇವೆ' ಎಂದು ಸಮೀರ್‌ ವಾಂಖೆಡೆ ಹೇಳಿರುವುದಾಗಿ ಎಎನ್‌ಐ ಟ್ವೀಟಿಸಿದೆ.

 

ಸಮುದ್ರ ಮಧ್ಯದಲ್ಲಿ ಪಾರ್ಟಿ

ಕಾರ್ಡೆಲಿಯಾ ಎಂಪ್ರೆಸ್‌ ಹಡಗಿನಲ್ಲಿ ಅಕ್ಟೋಬರ್‌ 2ರಿಂದ ಅಕ್ಟೋಬರ್‌ 4ರ ವರೆಗೂ ಪಾರ್ಟಿ ಆಯೋಜನೆಯಾಗಿತ್ತು. 'ಸಂಗೀತದ ಯಾನ' ಎಂಬರ್ಥದಲ್ಲಿ ಪಾರ್ಟಿಗೆ ನೂರು ಟಿಕೆಟ್‌ಗಳನ್ನು ಮಾರಾಟ ಮಾಡಲಾಗಿತ್ತು ಹಾಗೂ ಆಯೋಜಕರ ಮೂಲಕ ಪಾಸ್‌ಗಳು ವಿತರಣೆಯಾಗಿದ್ದವು ಎಂದು ಇಂಡಿಯಾ ಟುಡೇ ವರದಿ ಮಾಡಿದೆ.

ಮೂಲಗಳ ಪ್ರಕಾರ, ಕಾರ್ಯಕ್ರಮವನ್ನು ಫ್ಯಾಷನ್‌ ಟಿವಿ ಇಂಡಿಯಾ ಮತ್ತು ದೆಹಲಿ ಮೂಲದ ನಮಸ್ಕ್ರೇ ಎಕ್ಸ್‌ಪೀರಿಯನ್ಸ್‌ (Namascray Experience) ಆಯೋಜಿಸಿತ್ತು. ಇರುವ ಸ್ಥಳಾವಕಾಶಕ್ಕಿಂತಲೂ ಹೆಚ್ಚುವರಿ ಬುಕ್ಕಿಂಗ್‌ ಆಗಿ ಹಲವು ಮಂದಿ ಹಡಗಿನ ಒಳಗೆ ಪ್ರವೇಶಿಸಲು ಸಾಧ್ಯವಾಗದೆ ನಿಂತಿದ್ದರು. ವ್ಯಕ್ತಿಯೊಬ್ಬರು '₹82,000 ಕೊಟ್ಟು ಪಾಸ್‌ ಖರೀದಿಸಿದ್ದೇನೆ, ಒಳಗೆ ಪ್ರವೇಶ ಸಿಕ್ಕಿಲ್ಲ' ಎಂದು ಹೇಳಿರುವುದಾಗಿ ವರದಿಯಾಗಿದೆ.

ಇದನ್ನೂ ಓದಿ: ಕಡೆಗೂ ಬೇರೆ ಬೇರೆಯಾದ ನಾಗ ಚೈತನ್ಯ ಹಾಗೂ ಸಮಂತಾ: ಡಿವೋರ್ಸ್ ಘೋಷಣೆ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು