ಸೋಮವಾರ, ಆಗಸ್ಟ್ 8, 2022
21 °C

ಕೇಂದ್ರ ಸಂಪುಟ ಪುನಾರಚನೆ: ನೂತನ ಮಂತ್ರಿಗಳಾಗಿ ಮೋದಿ ಟೀಂ ಸೇರುವವರಾರು?

Deccan Herald Updated:

ಅಕ್ಷರ ಗಾತ್ರ : | |

PTI Photo

ನವದೆಹಲಿ: ಚುನಾವಣೆ ಮತ್ತು ಸಾಮರ್ಥ್ಯವನ್ನು ಒರೆ ಹಚ್ಚುವ ಮೂಲಕ ನರೇಂದ್ರ ಮೋದಿ ಸರ್ಕಾರದ ಸಂಪುಟಕ್ಕೆ ಶೀಘ್ರದಲ್ಲೇ ಸರ್ಜರಿ ಮಾಡುವ ಸಾಧ್ಯತೆಗಳು ಕಂಡುಬಂದಿವೆ. ಎರಡನೇ ಬಾರಿಗೆ ಬಿಜೆಪಿ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ಎರಡು ವರ್ಷಗಳ ಬಳಿಕ ಮೊದಲ ಬಾರಿಗೆ ಸಂಪುಟ ಮರುರಚನೆಯಾಗುತ್ತಿದೆ.

ಜೂನ್‌ ತಿಂಗಳಲ್ಲೇ ಪುನಾರಚನೆಗಲಿದ್ದು, ಮೋದಿ 2.0 ಸರ್ಕಾರವು ತಮ್ಮನ್ನು ಬೆಂಬಲಿಸಿದ ಯುವ ಜನತೆಗೆ ಉತ್ತಮ ಸಂದೇಶ ನೀಡುವ ನಿಟ್ಟಿನಲ್ಲಿ ಸಂಪುಟಕ್ಕೆ ಹೊಸ ಯುವ ಮಂತ್ರಿಗಳನ್ನು ಸೇರ್ಪಡೆಗೊಳಿಸುವ ಸಾಧ್ಯತೆ ಹೆಚ್ಚು ಎನ್ನಲಾಗಿದೆ.

ಕೋವಿಡ್‌ ನಿರ್ವಹಣೆಯಲ್ಲಿ ಮಂತ್ರಿಗಳು ತೋರಿದ ಕಾರ್ಯಕ್ಷಮತೆ ಮತ್ತು 2022ರ ಚುನಾವಣೆಯಲ್ಲಿ ಪಕ್ಷವನ್ನು ಗೆಲ್ಲಿಸುವ ಸಾಮರ್ಥ್ಯ ಹೊಂದಿರುವ ಮಾನದಂಡಗಳನ್ನು ಗಮನದಲ್ಲಿಟ್ಟುಕೊಂಡು ಸಂಪುಟ ಪುನಾರಚನೆಗೆ ಬಿಜೆಪಿ ಸರ್ಕಾರ ಮುಂದಾಗಿದೆ.

ಯಾವೆಲ್ಲ ಹೊಸ ಮುಖಗಳು:
ಮೋದಿ 2.0 ಸಂಪುಟದಲ್ಲಿ ಹೊಸ ಮುಖಗಳಾಗಿ ಅಸ್ಸಾಂನ ಮಾಜಿ ಸಿಎಂ ಸರ್ಬಾನಂದ ಸೋನೊವಾಲ್‌, ಉತ್ತರಾಖಂಡದ ಮಾಜಿ ಸಿಎಂ ತ್ರಿವೇಂದ್ರ ಸಿಂಗ್‌ ರಾವತ್‌, ಉತ್ತರ ಪ್ರದೇಶದಿಂದ ಮಾಜಿ ಕೇಂದ್ರ ಸಚಿವ ಮತ್ತು ಅಪ್ನಾ ದಲ್‌ ನಾಯಕಿ ಅನುಪ್ರಿಯಾ ಪಟೇಲ್‌, ಇತ್ತೀಚೆಗೆ ಕಾಂಗ್ರೆಸ್‌ನಿಂದ ಆಗಮಿಸಿದ ಕೇಂದ್ರ ಮಾಜಿ ಸಚಿವ ಜಿತಿನ್‌ ಪ್ರಸಾದ್‌ ಹೆಸರುಗಳು ಮುಂಚೂಣಿಯಲ್ಲಿವೆ.

ಸರ್ಬಾನಂದ ಸೋನೊವಾಲ್‌ ಅಸ್ಸಾಂನ ಸೋನೊವಾಲ್‌-ಕಚರಿ ಬುಡಕಟ್ಟು ಸಮುದಾಯಕ್ಕೆ ಸೇರಿದವರಾಗಿದ್ದು, 2016ರಲ್ಲಿ ಅಸ್ಸಾಂನ ಮುಖ್ಯಮಂತ್ರಿಯಾಗಿದ್ದರು. ಅಸ್ಸಾಂನಲ್ಲಿ ಬಿಜೆಪಿ ಮೊದಲ ಬಾರಿಗೆ ಸರ್ಕಾರ ರಚಿಸಲು ಸರ್ಬಾನಂದ ಪ್ರಮುಖ ಪಾತ್ರವಹಿಸಿದ್ದರು. 2021ರಲ್ಲಿ ಎರಡನೇ ಬಾರಿಗೆ ಅಸ್ಸಾಂನಲ್ಲಿ ಬಿಜೆಪಿ ಸರ್ಕಾರ ರಚನೆಯಾದಾಗ ಹಿಮಂತ ಬಿಸ್ವಾ ಶರ್ಮಾ ಅವರನ್ನು ಸಿಎಂ ಆಗಿ ಆಯ್ಕೆ ಮಾಡಲಾಗಿತ್ತು.

ಸೋನೊವಾಲ್‌ ಈಗಾಗಲೇ ದೆಹಲಿಯಲ್ಲಿ ಬೀಡುಬಿಟ್ಟಿದ್ದು ಬಿಜೆಪಿಯ ಪ್ರಮುಖರನ್ನು ಭೇಟಿಯಾಗಲಿದ್ದಾರೆ. ಅಮಿತ್‌ ಶಾ ಅವರು ಅನುಪ್ರಿಯಾ ಪಟೇಲ್‌ ಮತ್ತು ನಿಶಾದ್‌ ಪಾರ್ಟಿ ನಾಯಕ ಸಂಜಯ್‌ ನಿಶಾದ್‌ ಅವರನ್ನು ಭೇಟಿಯಾಗಿದ್ದಾರೆ. ಉತ್ತರ ಪ್ರದೇಶದಲ್ಲಿನ ಪೂರ್ವತಯಾರಿ, ಹಾಗೆಯೇ ದಿಲ್ಲಿ ಚುನಾವಣೆ ಮತ್ತು ಕೊರೊನಾ ಸಂಕಷ್ಟ ಎದುರಿಸುವ ನಿಟ್ಟಿನಲ್ಲಿ ಬಿಜೆಪಿ ಮತ್ತು ಆರ್‌ಎಸ್‌ಎಸ್‌ ನಡುವೆ ಹಲವು ಸುತ್ತಿನ ಮಾತುಕತೆ ನಡೆದಿದೆ ಎನ್ನಲಾಗಿದೆ.

ಕಳೆದ ವರ್ಷ ಮಾರ್ಚ್‌ನಲ್ಲಿ ಕಾಂಗ್ರೆಸ್‌ನಿಂದ ಬಿಜೆಪಿಗೆ ಆಗಮಿಸಿದ ಜ್ಯೋತಿರಾದಿತ್ಯ ಸಿಂಧಿಯಾ ಅವರಿಗೆ ಮಂತ್ರಿ ಸ್ಥಾನ ಕಾಯ್ದಿರಿಸಲಾಗಿದೆ ಎನ್ನಲಾಗಿದೆ. ಮಧ್ಯ ಪ್ರದೇಶದಲ್ಲಿ ಕಾಂಗ್ರೆಸ್‌ಗೆ ಸಿಂಧಿಯಾ ಪಕ್ಷದಿಂದ ಹೊರನಡೆದಿದ್ದು ಬಲವಾದ ಹೊಡೆತವಾಗಿ ಪರಿಣಮಿಸಿತ್ತು. ಸಿಎಂ ಶಿವರಾಜ್‌ ಸಿಂಗ್‌ ಚೌಹಾಣ್‌ ಅವರ ಸ್ಥಾನಕ್ಕೆ ಜ್ಯೋತಿರಾದಿತ್ಯ ಸಿಂಧಿಯಾ ಆಯ್ಕೆಯಾಗಲಿದ್ದಾರೆ ಎಂಬ ಸುದ್ದಿಗಳು ಸಾಕಷ್ಟು ಹರಿದಾಡಿತ್ತು. ಸಿಂಧಿಯಾ ಹೆಸರು ಮಧ್ಯಪ್ರದೇಶದಲ್ಲಿ ಮುಂಚೂಣಿಯಲ್ಲಿರುವುದರಿಂದ ಕೇಂದ್ರದ ಸಂಪುಣದಲ್ಲಿ ಪ್ರಮುಖ ಖಾತೆ ಸಿಗುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ.

ಮುಖುಲ್‌ ರಾಯ್‌ ತೃಣಮೂಲ ಕಾಂಗ್ರೆಸ್‌ಗೆ ವಾಪಸ್‌ ಆದ ಬಳಿಕ ವಿಚಲಿತಗೊಂಡಿರುವ ಬಿಜೆಪಿ ನಾಯಕರು 2017ರಿಂದ ಬಿಜೆಪಿಗೆ ಆಗಮಿಸಿರುವ ಟಿಎಂಸಿ ನಾಯಕರಿಗೆ ವಿಶ್ವಾಸ ಮೂಡಿಸುವ ನಿಟ್ಟಿನಲ್ಲಿ ಸಂಪುಟದಲ್ಲೊಂದು ಸ್ಥಾನ ಒದಗಿಸುವ ಸಾಧ್ಯತೆ ಇದೆ. ಕಳೆದ ವರ್ಷ ಬಿಜೆಪಿ ಸೇರ್ಪಡೆಗೊಂಡ ಮಾಜಿ ರೈಲ್ವೆ ಮಂತ್ರಿ ದಿನೇಶ್‌ ತ್ರಿವೇದಿಗೆ ಮೋದಿ ಸಂಪುಟದಲ್ಲಿ ಸ್ಥಾನ ಲಭಿಸುವ ಸೂಚನೆ ಸಿಕ್ಕಿದೆ.

ಬಿಹಾರದಿಂದ ಪ್ರಮುಖವಾಗಿ ಮೂವರು ಹೆಸರು ಮುನ್ನೆಲೆಗೆ ಬಂದಿದೆ. ಎನ್‌ಡಿಎ ಮೈತ್ರಿಕೂಟ ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ಬಳಿಕ ಮಾಜಿ ಸಿಎಂ ಸುಶೀಲ್‌ ಮೋದಿ ಅವರಿಗೆ ಯಾವುದೇ ಪ್ರಮುಖ ಸ್ಥಾನ ನೀಡಲಾಗಿರಲಿಲ್ಲ. ಜೆಡಿಯುನ ಆರ್‌ಸಿಪಿ ಸಿಂಗ್‌ ಮತ್ತು ಎಲ್‌ಜೆಪಿಯ ಪಶುಪತಿ ಕುಮಾರ್‌ ಪರಾಸ್‌ ಅವರಿಗೆ ಮಂತ್ರಿಮಂಡಲದಲ್ಲಿ ಸ್ಥಾನ ಸಿಗುವ ಸಾಧ್ಯತೆ ಇದೆ. ರಾಮ್‌ ವಿಲಾಸ್‌ ಪಾಸ್ವಾನ್ ಮರಣದ ಬಳಿಕ ಮಗ ಚಿರಾಗ್‌ ಪಾಸ್ವಾನ್‌ ಪಕ್ಷದಲ್ಲಿ ಮುಂಚೂಣಿಗೆ ಬಂದಿದ್ದಾರೆ.

ಗುಜರಾತ್‌ ಮತ್ತು ಕರ್ನಾಟಕದಿಂದ ಹೊಸದಾಗಿ ಮೋದಿ ಸಂಪುಟಕ್ಕೆ ಸೇರ್ಪಡೆಗೊಳ್ಳುವ ಹೆಸರುಗಳು ಕಾಣಸಿಗುತ್ತಿಲ್ಲ. ರಾಜ್ಯದಲ್ಲಿ ಸದ್ಯಕ್ಕೆ ನಾಯಕತ್ವ ಬದಲಾವಣೆ, ಒಳರಾಜಕೀಯ ಮತ್ತಿತರ ಭಿನ್ನ ಚಟುವಟಿಕೆಗಳು ಶಮನಗೊಂಡರೆ ಸಾಕು ಎಂಬಂತಿದೆ.

ತೆರವಾಗಿರುವ ಮಂತ್ರಿ ಸ್ಥಾನಗಳು:
ಕಳೆದ ವರ್ಷ ಅಕ್ಟೋಬರ್‌ನಲ್ಲಿ ರಾಮ್‌ ವಿಲಾಸ್‌ ಪಾಸ್ವಾನ್‌(ಬಿಹಾರ), ಸೆಪ್ಟಂಬರ್‌ನಲ್ಲಿ ಸುರೇಶ್‌ ಅಂಗಡಿ(ಕರ್ನಾಟಕ) ಸಾವಿಗೀಡಾದ ಬಳಿಕ ಎರಡು ಮಂತ್ರಿ ಸ್ಥಾನಗಳು ತೆರವಾಗಿವೆ. ಎನ್‌ಡಿಎ ಮೈತ್ರಿಕೂಟದಿಂದ ಕೆಲವು ಪಕ್ಷಗಳು ಹೊರನಡೆದ ಪರಿಣಾಮ ಖಾಲಿಯಾಗಿರುವ ಸ್ಥಾನಗಳ ಭರ್ತಿ ಆಗಬೇಕಿದೆ. ನೂತನ ಕೃಷಿ ನೀತಿ ವಿರೋಧಿಸಿ ಶಿರೋಮಣಿ ಅಕಾಲಿ ದಳದ ಹರ್‌ಸಿಮ್ರತ್‌ ಕೌರ್‌ ಬಾದಲ್‌ ಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. 2019ರಲ್ಲಿ ಶಿವಸೇನಾದ ಅರವಿಂದ ಸಮಂತ್‌ ಮಂತ್ರಿಮಂಡಲದಿಂದ ಹೊರ ನಡೆದಿದ್ದರು.

ಪ್ರಧಾನಿ ನರೇಂದ್ರ ಮೋದಿ ಹಲವು ಕೇಂದ್ರ ಸಚಿವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಗೃಹ ಸಚಿವ ಅಮಿತ್‌ ಶಾ, ಜೆಪಿ ನಡ್ಡಾ ಅವರು ಹಲವು ಮಂತ್ರಿಗಳು, ಪಕ್ಷದ ಮುಖಂಡರು ಮತ್ತು ಅಧಿಕಾರಿಗಳ ಜೊತೆ ವಾರಂತ್ಯದಲ್ಲಿ ಹಲವು ಸುತ್ತಿನ ಮಾತುಕತೆ ಬಳಿಕ ಜೂನ್‌ 11ರಂದು ಪ್ರಧಾನಿ ನರೇಂದ್ರ ಮೋದಿ ಅವರ ಬಳಿ ಚರ್ಚಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು