ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೃಷಿ ಮಸೂದೆ ರೈತರ ರಕ್ಷಾ ಕವಚ: ಪ್ರಧಾನಿ ಮೋದಿ ಸಮರ್ಥನೆ

ಪಂಜಾಬ್‌ನಲ್ಲಿ ಮುಂದುವರಿದ ಪ್ರತಿಭಟನೆ
Last Updated 23 ಸೆಪ್ಟೆಂಬರ್ 2020, 7:28 IST
ಅಕ್ಷರ ಗಾತ್ರ

ನವದೆಹಲಿ/ಚಂಡೀಗಡ: ‘ಕೃಷಿ ಕ್ಷೇತ್ರದ ಸುಧಾರಣೆಗೆ ಸಂಬಂಧಿಸಿದಂತೆ ರೂಪಿಸಿರುವ ಮೂರು ಮಸೂದೆಗಳು ರೈತರ ರಕ್ಷಾ ಕವಚವಾಗಲಿವೆ’ ಎಂದು ಪ್ರಧಾನಿ ನರೇಂದ್ರ ಮೋದಿ ಸಮರ್ಥಿಸಿಕೊಂಡಿದ್ದಾರೆ.

‘ಈ ವಿಷಯದಲ್ಲಿ ವಿರೋಧ ಪಕ್ಷಗಳು ರೈತರ ದಾರಿ ತಪ್ಪಿಸುತ್ತಿವೆ. ಈ ಮಸೂದೆಯನ್ನು ವಿರೋಧಿಸುವವರು ಮಧ್ಯವರ್ತಿಗಳನ್ನು ಬೆಂಬಲಿಸುತ್ತಿದ್ದಾರೆ’ ಎಂದು ಟೀಕಿಸಿದ್ದಾರೆ.

ಬಿಹಾರದಲ್ಲಿ ಕೈಗೊಂಡಿರುವ ಹಲವು ರೈಲು ಯೋಜನೆಗಳಿಗೆ ವರ್ಚ್ಯುವಲ್‌ ಕಾರ್ಯಕ್ರಮದ ಮೂಲಕ ಚಾಲನೆ ನೀಡಿ ಮಾತನಾಡಿದ ಅವರು, ‘ಹೊಸ ಕಾನೂನುಗಳಿಂದ ಕೃಷಿ ಉತ್ಪನ್ನಗಳನ್ನು ಯಾವುದೇ ಸ್ಥಳಗಳಲ್ಲಿ ಉತ್ತಮ ಬೆಲೆಗೆ ಮಾರಾಟ ಮಾಡುವ ಅವಕಾಶ ಇನ್ನು ಮುಂದೆ ರೈತರಿಗೆ ದೊರೆಯಲಿದೆ’ ಎಂದು ಪ್ರತಿಪಾದಿಸಿದ್ದಾರೆ.

‘ಕೃಷಿ ಉತ್ಪನ್ನಗಳನ್ನು ಸರ್ಕಾರ ಖರೀದಿಸುವ ಪ್ರಕ್ರಿಯೆಯೂ ಮುಂದುವರಿಯಲಿದೆ. ಜತೆಗೆ, ಈಗಿರುವ ರೀತಿಯಲ್ಲಿ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ನೀಡುವ ವ್ಯವಸ್ಥೆಯೂ ಇರಲಿದೆ’ ಎಂದು ಹೇಳಿದ್ದಾರೆ.

ವಿರೋಧ ಪಕ್ಷಗಳು ಕೃಷಿ ಮಸೂದೆಗಳನ್ನು ರೈತ ವಿರೋಧಿ ಎಂದು ಟೀಕಿಸಿವೆ. ಬಿಜೆಪಿ ಮಿತ್ರ ಪಕ್ಷ ಶಿರೋಮಣಿ ಅಕಾಲಿ ದಳವು ಈ ಮಸೂದೆಯನ್ನು ವಿರೋಧಿಸಿ ಸರ್ಕಾರದಿಂದ ಹೊರಬಂದಿದೆ. ಕೇಂದ್ರ ಸಚಿವ ಸಂಪುಟಕ್ಕೆ ಹರ್‌ಸಿಮ್ರತ್ ಕೌರ್‌ ಬಾದಲ್‌ ಅವರು ಗುರುವಾರ ರಾಜೀನಾಮೆ ನೀಡಿದ್ದರು.

ಲೋಕಸಭೆ ಈ ಮಸೂದೆಗಳಿಗೆ ಅನುಮೋದನೆ ನೀಡಿದ್ದು, ರಾಜ್ಯಸಭೆಯಲ್ಲಿ ಇನ್ನೂ ಮಂಡಿಸಬೇಕಾಗಿದೆ.

ಪಂಜಾಬ್‌ನಲ್ಲಿ ವಿರೋಧ

ಕೃಷಿ ಮಸೂದೆ ವಿರೋಧಿಸಿ ಪಂಜಾಬ್‌ನಲ್ಲಿ ಹಲವು ರೈತ ಪರ ಸಂಘಟನೆಗಳು ಪ್ರತಿಭಟನೆ ನಡೆಸಿವೆ. ಕನಿಷ್ಠ ಬೆಂಬಲ ಬೆಲೆ ನಿಗದಿಪಡಿಸುವ ವ್ಯವಸ್ಥೆ ಇನ್ನು ಮುಂದೆ ರದ್ದಾಗಲಿದೆ ಎಂದು ರೈತರು ಆತಂಕ ವ್ಯಕ್ತಪಡಿಸಿದ್ದಾರೆ.

‘ಕೃಷಿ ಪಂಜಾಬ್‌ನ ಆತ್ಮ’ ಎಂದು ಬಣ್ಣಿಸಿರುವ ಪಂಜಾಬ್‌ ಶಾಸಕ ಹಾಗೂ ಮಾಜಿ ಕ್ರಿಕೆಟಿಗ ನವಜೋತ್‌ ಸಿಂಗ್‌ ಸಿಧು, ರೈತರ ಜತೆ ಸದಾ ನಿಲ್ಲುವುದಾಗಿ ತಿಳಿಸಿದ್ದಾರೆ.

‘ಪಂಜಾಬ್‌, ಪಂಜಾಬಿಯತ್‌ ಮತ್ತು ಪಂಜಾಬಿ’ ರೈತರ ಜಗಿದ್ದಾರೆ ಎಂದು ಟ್ವೀಟ್‌ ಮಾಡಿದ್ದಾರೆ.

ರಾಜಕೀಯ ನಿರ್ಧಾರ

‘ಕೇಂದ್ರ ಸಚಿವ ಸಂಪುಟಕ್ಕೆ ಹರ್‌ಸಿಮ್ರತ್ ಕೌರ್‌ ಬಾದಲ್‌ ರಾಜೀನಾಮೆ ನೀಡಿರುವುದು ಶಿರೋಮಣಿ ಅಕಾಲಿ ದಳದ ರಾಜಕೀಯ ನಿರ್ಧಾರ’ ಎಂದು ಪಂಜಾಬ್‌ ಬಿಜೆಪಿ ಘಟಕದ ಮುಖ್ಯಸ್ಥ ಅಶ್ವನಿ ಶರ್ಮಾ ಹೇಳಿದ್ದಾರೆ.

‘ಶಿರೋಮಣಿ ಅಕಾಲಿ ದಳ ಎನ್‌ಡಿಎ ಭಾಗವಾಗವಾಗಿದೆ. ಆದರೆ, ಅದು ಒಂದು ಪ್ರತ್ಯೇಕ ರಾಜಕೀಯ ಸಂಘಟನೆ. ಬಿಜೆಪಿ ಜತೆ ಮೈತ್ರಿ ಇದ್ದರೂ ರಾಜಕೀಯ ಕಾರಣಕ್ಕೆ ಸಚಿವ ಸ್ಥಾನಕ್ಕೆ ಕೌರ್‌ ರಾಜೀನಾಮೆ ನೀಡಿದ್ದಾರೆ’ ಎಂದು ಹೇಳಿದ್ದಾರೆ.

‘ರೈತರ ಹಿತಾಸಕ್ತಿ ಕಾಪಾಡಲು ಕೇಂದ್ರ ಸರ್ಕಾರ ಮೂರು ಮಸೂದೆಗಳನ್ನು ಮಂಡಿಸಿದೆ. ರೈತರ ಆದಾಯವನ್ನು ಹೆಚ್ಚಿಸುವಲ್ಲಿ ಈ ಮಸೂದೆಗಳು ಪ್ರಮುಖ ಪಾತ್ರ ವಹಿಸಲಿವೆ’ ಎಂದು ಪ್ರತಿಪಾದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT