ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡೋಪಿಂಗ್‌ ತಡೆ ಮಸೂದೆಗೆ ರಾಜ್ಯಸಭೆ ಅಸ್ತು

Last Updated 3 ಆಗಸ್ಟ್ 2022, 16:13 IST
ಅಕ್ಷರ ಗಾತ್ರ

ನವದೆಹಲಿ:ರಾಷ್ಟ್ರೀಯ ಉದ್ದೀಪನ ತಡೆ ಘಟಕ ಮತ್ತು ರಾಷ್ಟ್ರೀಯ ಉದ್ದೀಪನ ಮದ್ದು ಪರೀಕ್ಷಾ ಪ್ರಯೋಗಾಲಯ ಕಾರ್ಯವೈಖರಿಯ ರೂಪುರೇಷೆ ಸಿದ್ಧತೆಗೆ ಒತ್ತು ನೀಡುವ ಮಸೂದೆಯನ್ನು ಬುಧವಾರ ಸಂಸತ್‌ನಲ್ಲಿ ಅಂಗೀಕರಿಸಲಾಯಿತು.

ರಾಜ್ಯಸಭೆಯಲ್ಲಿ ಧ್ವನಿಮತದ ಮೂಲಕ ಈ ಮಸೂದೆಗೆ ಅನುಮೋದನೆ ನೀಡಲಾಯಿತು. ಹೋದ ವಾರ ಲೋಕಸಭೆಯಲ್ಲಿಯೂ ಅಂಗೀಕರಿಸಲಾಗಿತ್ತು.

‘ಸದ್ಯ ನಮ್ಮ ದೇಶದ ಪ್ರಯೋಗಾಲಯದಲ್ಲಿ ವರ್ಷಕ್ಕೆ ಆರು ಸಾವಿರ ಮಾದರಿಗಳನ್ನು ಪರೀಕ್ಷಿಸುವ ಅವಕಾಶ ಮಾತ್ರ ಇದೆ. ಈ ಮಸೂದೆಯಿಂದಾಗಿ ನಾಡಾ ಪ್ರಯೋಗಾಲಯವನ್ನು ಉನ್ನತೀಕರಿಸಲು ಅನುಕೂಲವಾಗಲಿದೆ. ದೇಶದಲ್ಲಿ ದೊಡ್ಡ ಮಟ್ಟದ ಅಂತರರಾಷ್ಟ್ರೀಯ ಕ್ರೀಡಾಕೂಟಗಳನ್ನು ಆಯೋಜಿಸಿದಾಗ ಮಾಸಿಕ 10 ಸಾವಿರ ಮಾದರಿಗಳ ಪರೀಕ್ಷಾ ಸಾಮರ್ಥ್ಯ ಅಭಿವೃದ್ದಿಸಬಹುದಾಗಿದೆ’ ಎಂದು ಕೇಂದ್ರ ಕ್ರೀಡಾ ಸಚಿವ ಅನುರಾಗ್ ಠಾಕೂರ್ ಮಸೂದೆಗೆ ಸಂಬಂಧಿಸಿದ ಚರ್ಚೆಯಲ್ಲಿ ಹೇಳಿದ್ದಾರೆ.

‘ಉದ್ದೀಪನ ಮದ್ದು ಪ್ರಕರಣ ತನಿಖೆ, ತಪ್ಪಿತಸ್ಥರಿಗೆ ಶಿಕ್ಷೆ ವಿಧಿಸುವುದು ಮತ್ತು ನಿಯಮ ಉಲ್ಲಂಘನೆ ಮಾಡುವವರ ವಿರುದ್ಧ ಶಿಸ್ತುಕ್ರಮ ಕೈಗೊಳ್ಳಲು ಈ ಮಸೂದೆಯಿಂದ ಸಾಧ್ಯವಾಗಲಿದೆ. ನಾಡಾ ಬಲವರ್ಧನೆಯಾಗಲಿದೆ’ ಎಂದೂ ಸಚಿವರು ಹೇಳಿದ್ದಾರೆ.

‘ಈ ಮಸೂದೆ ಅನುಮೋದನೆಯಿಂದಾಗಿ ಭಾರತವೂ ಈಗ ಅಮೆರಿಕ, ಚೀನಾ, ಜಪಾನ್ ಮತ್ತು ಫ್ರಾನ್ಸ್‌ ದೇಶಗಳ ಸಾಲಿಗೆ ಸೇರಿದೆ. ಕ್ರೀಡೆಯಲ್ಲಿ ಉದ್ದೀಪನ ಮದ್ದು ಬಳಕೆಯ ಪಿಡುಗನ್ನು ಮಟ್ಟ ಹಾಕಲು ಇದರಿಂದ ಸಾಧ್ಯವಾಗಲಿದೆ’ ಎಂದೂ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT