ಶನಿವಾರ, 27 ಮೇ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಮ-ಕೃಷ್ಣನನ್ನು ನಿರ್ಲಕ್ಷ್ಯಿಸುವುದು ಪಕ್ಷವೊಂದರ ಜನರ ಸ್ವಭಾವ: ಯೋಗಿ ಆದಿತ್ಯನಾಥ್

Last Updated 19 ಸೆಪ್ಟೆಂಬರ್ 2021, 1:59 IST
ಅಕ್ಷರ ಗಾತ್ರ

ಲಖನೌ: ರಾಮ ಮತ್ತು ಕೃಷ್ಣರನ್ನು ನಿರ್ಲಕ್ಷ್ಯಿಸುವುದು ಮತ್ತು ಆಪತ್ಕಾಲದಲ್ಲಿ ಇಟಲಿಗೆ ಪಲಾಯನ ಮಾಡುವುದು ಒಂದು ನಿರ್ದಿಷ್ಟ ಪಕ್ಷದ ಜನರ ಸ್ವಭಾವವಾಗಿದೆ ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಶನಿವಾರ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರನ್ನು ಗುರಿಯಾಗಿಸಿಕೊಂಡು ವಾಗ್ದಾಳಿ ನಡೆಸಿದರು.

ಬಿಜೆಪಿ ಆಯೋಜಿಸಿದ್ದ 'ಪ್ರಬುದ್ಧ ವರ್ಗ ಸಮ್ಮೇಳನ'ದಲ್ಲಿ ಭಾಷಣ ಮಾಡುವಾಗ ಮುಖ್ಯಮಂತ್ರಿ ಯೋಗಿ ರಾಹುಲ್ ಗಾಂಧಿಯ ಹೆಸರೇಳದೆಯೇ ಕಿಡಿಕಾರಿದರು.

'ಒಂದು ಪಕ್ಷದ ಜನರು ಆಪತ್ಕಾಲದಲ್ಲಿ ಇಟಲಿಗೆ ಪಲಾಯನ ಮಾಡುತ್ತಾರೆ. ಅವರ ಕುಟುಂಬ ಸದಸ್ಯರು ಪ್ರಧಾನಿಯಾಗಲು ಉತ್ತರ ಪ್ರದೇಶವು ಸಹಾಯ ಮಾಡಿತ್ತು. ಆದರೆ, ಅವರು ವಿದೇಶಕ್ಕೆ ಹೋಗಿ ರಾಜ್ಯ ಮತ್ತು ದೇಶವನ್ನು ಟೀಕಿಸುತ್ತಾರೆ. ಅವರು ಉತ್ತರ ಪ್ರದೇಶದಿಂದ ಎಲ್ಲವನ್ನೂ ಬಯಸುತ್ತಾರೆ. ಆದರೆ ಇಲ್ಲಿನ ಜನರನ್ನು ಟೀಕಿಸುವುದು ಮತ್ತು ಅವಮಾನಿಸುವುದು ಮತ್ತು ದೇವರು ಮತ್ತು ದೇವತೆಗಳ ಬಗ್ಗೆ ಟೀಕೆ ಮಾಡುವುದು ಅವರ ಪ್ರವೃತ್ತಿಯಾಗಿದೆ' ಎಂದು ದೂರಿದರು.

'ರಾಮ ಮತ್ತು ಕೃಷ್ಣರನ್ನು ತಿರಸ್ಕರಿಸುವುದು ಕೂಡ ಅವರ ಅಭ್ಯಾಸಗಳಲ್ಲಿ ಒಂದಾಗಿದೆ. ಯಾರಾದರೂ ಆಕಸ್ಮಿಕವಾಗಿ ಹಿಂದೂಗಳಾದರೆ ಹೀಗೆಲ್ಲ ಆಗುತ್ತದೆ' ಎಂದು ಯೋಗಿ ಟೀಕಿಸಿದರು.

ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ ಅವರ 'ಬುಲ್ಡೋಜರ್' ಹೇಳಿಕೆಯನ್ನು ಉಲ್ಲೇಖಿಸಿದ ಆದಿತ್ಯನಾಥ್, 'ಸರ್ಕಾರಿ ಭೂಮಿಯನ್ನು ಮತ್ತು ಜನರ ಆಸ್ತಿಯನ್ನು ಅಕ್ರಮವಾಗಿ ಅತಿಕ್ರಮಿಸುವವರಿಗೆ ಒಂದೇ ಪರಿಹಾರವೆಂದರೆ ಅದು ಬುಲ್ಡೋಜರ್. ಹಿಂದಿನ ಸರ್ಕಾರದ ಅವಧಿಯಲ್ಲಿ, ಪೂರ್ವ ಉತ್ತರ ಪ್ರದೇಶದ ಜನರು ಪ್ರವಾಹದಲ್ಲಿ ಮುಳುಗಿದ್ದರು ಮತ್ತು ಮಕ್ಕಳು ಮತ್ತು ನಾಗರಿಕರು ಎನ್ಸೆಫಲೈಟಿಸ್‌ ಮತ್ತು ಡೆಂಗಿಯಿಂದ ಬಳಲುತ್ತಿದ್ದರು. ಆ ಸಮಯದಲ್ಲಿ, ಜವಾಬ್ದಾರಿಯುತ ಜನರು (ಅದನ್ನು ನಿರ್ವಹಿಸುವ ಬದಲು) ಸೈಫೈನಲ್ಲಿ ಸಿನಿಮಾ ತಾರೆಯರ ನೃತ್ಯಗಳನ್ನು ಆನಂದಿಸುವುದರಲ್ಲಿ ನಿರತರಾಗಿದ್ದರು. ಇಂತಹ ಜನರು ರಾಷ್ಟ್ರ ಮತ್ತು ಸಮಾಜದ ಹಿತಾಸಕ್ತಿಗಳನ್ನು ಹೇಗೆ ಮರೆಯುತ್ತಾರೆಂದು ನನಗೆ ಅರ್ಥವಾಗುತ್ತಿಲ್ಲ. ದೇಶ ಬಲಿಷ್ಠವಾಗಿದ್ದರೆ ಎಲ್ಲರೂ ಒಟ್ಟಾಗಿ ಬಲಿಷ್ಠರಾಗುತ್ತಾರೆ' ಎಂದು ಹೇಳಿದ್ದಾರೆ.

ತಮ್ಮ ಭಾಷಣದಲ್ಲಿ, ಒಬ್ಬರ ವೈಯಕ್ತಿಕ ಹಿತಾಸಕ್ತಿಗಳಗಿಂತ ಹೆಚ್ಚಾಗಿ ದೇಶದ ಹಿತಾಸಕ್ತಿಯನ್ನು ಒತ್ತಿ ಹೇಳಿರುವ ಅವರು, 'ವೈಯಕ್ತಿಕ ಆಸೆಗಳು, ಆರಾಧನೆಯ ವಿಧಾನ, ನಂಬಿಕೆಯ ಸ್ವಾತಂತ್ರ್ಯ ಮತ್ತು ಧರ್ಮವು 'ರಾಷ್ಟ್ರ ಧರ್ಮ'ದ ಮುಂದೆ ಗೌಣ. ನೀವೆಲ್ಲರೂ ಸಮಾಜಕ್ಕೆ ಸರಿಯಾದ ದೃಷ್ಟಿಕೋನವನ್ನು ಒದಗಿಸಬೇಕು ಮತ್ತು ಸರಿಯಾದ ಮಾರ್ಗವನ್ನು ತೋರಿಸಬೇಕು, ನಿಮಗೆ ಗಲಭೆ ಮತ್ತು ಮಾಫಿಯಾ ಸರ್ಕಾರ ಬೇಕೇ ಅಥವಾ ಉತ್ತರ ಪ್ರದೇಶದಲ್ಲಿ ರಾಮ ರಾಜ್ಯ ಬೇಕೇ ಎಂದು ನೀವೇ ನಿರ್ಧರಿಸಬೇಕು' ಎಂದು ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT