ಬುಧವಾರ, ಮಾರ್ಚ್ 29, 2023
26 °C

ಪರೀಕ್ಷಾ ಪೇ ಚರ್ಚಾ | ‘ಸಾಮಾನ್ಯ’ರಿಂದಲೇ ಬೆಳಗುತ್ತಿದೆ ಭಾರತ: ಪ್ರಧಾನಿ ಮೋದಿ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ‘ನಮ್ಮ ಸಂಪುಟವು ‘ಸಾಮಾನ್ಯ’ ಪ್ರತಿಭೆಗಳಿಂದ ತುಂಬಿದೆ. ಅಂಥವರಿಂದ ಆರ್ಥಿಕ ನಿರ್ವಹಣೆ ನಡೆಯುತ್ತಿದೆ ಎಂದು ಟೀಕಿಸಲಾಗಿತ್ತು. ಆದರೆ, ಅಂಥ ‘ಸಾಮಾನ್ಯ’ ಪ್ರತಿಭೆಯುಳ್ಳ ಜನರಿಂದಲೇ ಇಂದು ಜಗತ್ತಿನಲ್ಲಿ ಭಾರತವು ಪ್ರಕಾಶಿಸುತ್ತಿದೆ’ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. 

ಇಲ್ಲಿನ ತಾಲ್‌ಕಟೋರಾ ಕ್ರೀಡಾಂಗಣದಲ್ಲಿ ಶುಕ್ರವಾರ ‘ಪರೀಕ್ಷಾ ಪೇ ಚರ್ಚಾ 2023’ರ ಆರನೇ ಆವೃತ್ತಿಯಲ್ಲಿ ವಿದ್ಯಾರ್ಥಿಗಳ ಪ್ರಶ್ನೆಗಳಿಗೆ ಉತ್ತರಿಸಿದ ಅವರು, ‘ಟೀಕೆಗಳಿಂದಲೇ ಪ್ರಜಾಪ್ರಭುತ್ವವು ಸದೃಢವಾಗಿ ಹೊರಹೊಮ್ಮಲು ಸಾಧ್ಯ. ಟೀಕೆಯು ನಮ್ಮನ್ನು ಬಲಪಡಿಸುವ ಅಂಶವಾಗಿದೆ. ಆದರೆ, ಟೀಕೆ ಮತ್ತು ಆರೋಪಗಳ ನಡುವೆ ವಿಶಾಲವಾದ ಅಂತರವಿದೆ’ ಎಂದರು. 

ವಿದ್ಯಾರ್ಥಿಯೊಬ್ಬರ ಪ್ರಶ್ನೆಗೆ ಉತ್ತರಿಸಿದ ಅವರು, ‘ಎರಡು–ಮೂರು ವರ್ಷಗಳ ಹಿಂದೆ ನಮ್ಮ ಸರ್ಕಾರದಲ್ಲಿ ಆರ್ಥಿಕ ತಜ್ಞರಿಲ್ಲ ಎಂದು ಬರೆಯಲಾಗಿತ್ತು. ನಮ್ಮ ಸರ್ಕಾರದಲ್ಲಿ ‘ಸಾಮಾನ್ಯ’ ಜನರೇ ಇದ್ದಾರೆ. ಪ್ರಧಾನಿಗೂ ಅರ್ಥಿಕ ತಿಳಿವಳಿಕೆ ಇಲ್ಲ ಎಂದೂ ಬರೆಯಲಾಗಿತ್ತು ಎಂಬುದನ್ನು ನೀವು ನೋಡಿದ್ದೀರಿ. ಆದರೆ, ಈಗ ಅದೇ ‘ಸಾಮಾನ್ಯ’ರ ಆಡಳಿತವಿರುವ ದೇಶವು ಜಗತ್ತಿನಲ್ಲಿ ಪ್ರಕಾಶಮಾನವಾಗಿ ಹೊಳೆಯುತ್ತಿದೆ. ಜಾಗತಿಕ ಆರ್ಥಿಕತೆಯ ವಿಷಯವು ಚರ್ಚೆಯಾಗುವಾಗ, ಕೋವಿಡೋತ್ತರ ಯುಗದಲ್ಲಿ ಭಾರತವು ಭರವಸೆಯ ಕಿರಣವಾಗಿ ಹೊರಹೊಮ್ಮಿದೆ’ ಎಂದೂ ಹೇಳಿದರು.

‘ಜಗತ್ತಿನಲ್ಲಿ ಅರ್ಥಶಾಸ್ತ್ರಜ್ಞರ ಕೊರತೆಯಿಲ್ಲ. ಆರ್ಥಿಕ ಪರಿಸ್ಥಿತಿಗಳಲ್ಲಿ ಯಾವ ರೀತಿಯ ಅವಕಾಶವು ಪರಿಣಾಮ ಬೀರುತ್ತದೆ ಎಂಬುದರ ಕುರಿತು ಮಾರ್ಗದರ್ಶನ ನೀಡಲು ಅನೇಕ ನೊಬೆಲ್ ಪ್ರಶಸ್ತಿ ಪುರಸ್ಕೃತರು ಇದ್ದಾರೆ. ಈ ದಿನಗಳಲ್ಲಿ ತಮ್ಮ ಬುದ್ಧಿವಂತಿಕೆಯನ್ನು ಪ್ರದರ್ಶಿಸುವ ಜನರು ಮೂಲೆಮೂಲೆಗಳಲ್ಲಿ ಸಿಗುತ್ತಾರೆ’ ಎಂದು ಅವರು ಪ್ರತಿಪಾದಿಸಿದರು.

ಯಶಸ್ಸಿಗಾಗಿ ಅಡ್ಡದಾರಿ ಹಿಡಿಯದಿರಿ: ಮೋದಿ ಕಿವಿಮಾತು
ನವದೆಹಲಿ:
‘ವಿದ್ಯಾರ್ಥಿಗಳು ಪರೀಕ್ಷಾ ಯಶಸ್ಸಿಗಾಗಿ ಎಂದಿಗೂ ಅಡ್ಡದಾರಿ ಹಿಡಿಯಬಾರದು. ಮೋಸದ ಪ್ರವೃತ್ತಿಯು ನಿಮಗೆ ಅಥವಾ ಮತ್ತೊಬ್ಬರಿಗೆ ಪರೀಕ್ಷೆಯಲ್ಲಿ ಸಹಾಯಕ್ಕೆ ಬರಬಹುದು. ಆದರೆ, ದೀರ್ಘಾವಧಿಯಲ್ಲಿ ಅದು ಉಪಯೋಗಕ್ಕೆ ಬರುವುದಿಲ್ಲ. ಜೀವನದಲ್ಲಿ ಮುನ್ನಡೆ ಸಾಧಿಸಲು ಕಠಿಣ ಪರಿಶ್ರಮ ಮಾತ್ರ ಸಹಾಯವಾಗುತ್ತದೆ’ ಎಂದು ಪ್ರಧಾನಿ ಮೋದಿ ಅವರು ವಿದ್ಯಾರ್ಥಿಗಳಿಗೆ ಸಲಹೆ ನೀಡಿದ್ದಾರೆ. 

‘ಗ್ಯಾಜೆಟ್‌ಗಳ ಅತಿಯಾದ ಬಳಕೆಯು ಅಪಾಯಕಾರಿ. ಮೊಬೈಲ್ ಫೋನ್‌ನ ಸ್ಮಾರ್ಟ್‌ನೆಸ್ ಅನ್ನು ನಂಬುವುದಕ್ಕಿಂತ ನಿಮ್ಮಲ್ಲಿನ ಸ್ಮಾರ್ಟ್‌ನೆಸ್ ಮೇಲೆ ನಂಬಿಕೆ ಇಡಿ. ತಂತ್ರಜ್ಞಾನದಿಂದ ವಿಚಲಿತರಾಗಬೇಡಿ. ಸಾಮಾಜಿಕ ಮಾಧ್ಯಮಗಳಲ್ಲಿನ ಸಂವಹನಕ್ಕಾಗಿ ನೀವು ಮೊಬೈಲ್ ಫೋನ್ ಬಳಸುವಾಗ ಅದಕ್ಕಾಗಿಯೇ ಪ್ರತ್ಯೇಕ ಸಮಯ ನಿಗದಿಪಡಿಸಿಕೊಳ್ಳಿ’ ಎಂದೂ ಹೇಳಿದ್ದಾರೆ.

‘ಪರೀಕ್ಷಾ ಫಲಿತಾಂಶದ ಬಗ್ಗೆ ಕುಟುಂಬದ ಸದಸ್ಯರು ನಿರೀಕ್ಷೆಗಳನ್ನು ಹೊಂದಿರುವುದು ಸಹಜ. ಆದರೆ, ಅದನ್ನೇ ಸಾಮಾಜಿಕ ಪ್ರತಿಷ್ಠೆಯನ್ನಾಗಿ ಪರಿಗಣಿಸುವುದು ತಪ್ಪು. ಅಂತೆಯೇ, ವಿದ್ಯಾರ್ಥಿಗಳು ಪರೀಕ್ಷಾ ಫಲಿತಾಂಶವೇ ಜೀವನದ ಅಂತ್ಯವಲ್ಲ ಎಂಬುದನ್ನು ಮನಗಾಣಬೇಕು’ ಎಂದೂ ಮೋದಿ ಕಿವಿಮಾತು ಹೇಳಿದ್ದಾರೆ.

‘10 ಮತ್ತು 12ನೇ ತರಗತಿಯ ಪರೀಕ್ಷೆಗಳು ಮುಗಿದ ಬಳಿಕ ಪೋಷಕರು ತಮ್ಮ ಮಕ್ಕಳಿಗೆ ಸ್ವಲ್ಪ ಹಣವನ್ನು ಸಣ್ಣ ಪ್ರವಾಸ ಕೈಗೊಳ್ಳಲು ಸೂಚಿಸಬೇಕು. ಆ ಪ್ರವಾಸಿ ತಾಣಗಳ ಬಗ್ಗೆ ಬರೆಯಲು ಹೇಳಬೇಕು’ ಎಂದು ಪ್ರಧಾನಿ ಅವರು ಪೋಷಕರಿಗೆ ಸಲಹೆ ನೀಡಿದ್ದಾರೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು