ರಿಷಿ ಸುನಕ್ ಅವರನ್ನು ವೈಸ್‌ರಾಯ್ ಎಂದ ನಟ ಅಮಿತಾಬ್ ಬಚ್ಚನ್!

ನವದೆಹಲಿ: ರಿಷಿ ಸುನಕ್ ಅವರು ಬ್ರಿಟನ್ ಪ್ರಧಾನಿಯಾಗುತ್ತಿರುವ ಸುದ್ದಿಯನ್ನು ಬಾಲಿವುಡ್‌ನ ಸೂಪರ್‌ಸ್ಟಾರ್, ನಟ ಅಮಿತಾಬ್ ಬಚ್ಚನ್ ಸಂಭ್ರಮಿಸಿದ್ದಾರೆ. ಅಷ್ಟೇ ಅಲ್ಲ, ರಿಷಿ ಅವರನ್ನು ‘ವೈಸ್‌ರಾಯ್’ ಎಂದು ಕರೆದಿದ್ದಾರೆ.
ಇನ್ಫೊಸಿಸ್ ಸಂಸ್ಥಾಪಕ ನಾರಾಯಣಮೂರ್ತಿ ಅವರ ಮಗಳು ಅಕ್ಷತಾ ಮೂರ್ತಿ ಅವರ ಗಂಡ ರಿಷಿ ಸುನಕ್ ಅವರು ಸೋಮವಾರ ಬ್ರಿಟನ್‌ನ ಆಡಳಿತಾರೂಢ ಕನ್ಸರ್ವೇಟಿವ್ ಪಕ್ಷದ ನಾಯಕತ್ವವನ್ನು ಪಡೆದುಕೊಳ್ಳುವಲ್ಲಿ ಯಶಸ್ವಿಯಾದರು. ಹೀಗಾಗಿ, ಆ ದೇಶದ ಪ್ರಧಾನಿ ಹುದ್ದೆಗೆ ಆಯ್ಕೆಯಾದ ಬಿಳಿಯನಲ್ಲದ ಮೊದಲ ವ್ಯಕ್ತಿ ಎಂಬ ಹೆಗ್ಗಳಿಕೆಗೆ ರಿಷಿ ಪಾತ್ರರಾದರು.
T 4449 - Bharat mata ki Jai 🚩🚩🚩
Now the UK finally has a new Viceroy as its Prime Minister from the Mother Country .. 🇮🇳— Amitabh Bachchan (@SrBachchan) October 24, 2022
ಈ ಹಿನ್ನೆಲೆಯಲ್ಲಿ ಟ್ವೀಟ್ ಮಾಡಿರುವ ಅಮಿತಾಬ್ ಬಚ್ಚನ್, ‘ಅಂತಿವಾಗಿ ಬ್ರಿಟನ್ ಈಗ ತನ್ನ ಪ್ರಧಾನಿಯಾಗಿ ಹೊಸ ವೈಸ್‌ರಾಯ್ ಅನ್ನು ತನ್ನ ಮಾತೃ ದೇಶದಿಂದ ಪಡೆದುಕೊಂಡಿದೆ’ ಎಂದು ಹೇಳಿದ್ದಾರೆ.
ವೈಸ್‌ರಾಯ್ ಎಂದರೆ, ಸಾಮ್ರಾಜ್ಯವೊಂದರ ವಸಾಹತುವಿನಲ್ಲಿ ಅಧಿಕಾರ ನಡೆಸಲು ನೇಮಕಗೊಂಡ ಆಡಳಿತಗಾರ ಎಂಬ ಅರ್ಥವಿದೆ.
ತೆಲುಗು ನಟ ಚಿರಂಜೀವಿ ಕೂಡ ಟ್ವೀಟ್ ಮಾಡಿದ್ದು, ‘ಭಾರತವು ಸ್ವಾತಂತ್ರ್ಯೋತ್ಸವದ ಅಮೃತಮಹೋತ್ಸವವನ್ನು ಆಚರಿಸಿಕೊಂಡಿರುವ ಈ ಸಂದರ್ಭದಲ್ಲಿ ಬ್ರಿಟಿಷರು ಭಾರತ ಮೂಲದ, ಹಿಂದೂವನ್ನು ಪ್ರಧಾನಿಯಾಗಿ ಪಡೆಯುತ್ತಾರೆ ಎಂದು ಯಾರು ಭಾವಿಸಿದ್ದರು? ಎಂದು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.
ರಿಷಿ ಸುನಕ್ ಅವರು ಬ್ರಿಟನ್ ಪ್ರಧಾನಿ ಹುದ್ದೆಗೇರುತ್ತಿರುವುದಕ್ಕೆ ಭಾರತ ಪ್ರಧಾನಿ ನರೇಂದ್ರ ಮೋದಿ, ಅಮೆರಿಕದ ಅಧ್ಯಕ್ಷ ಬೈಡನ್ ಸೇರಿದಂತೆ ವಿಶ್ವದ ಹಲವು ನಾಯಕರು, ಗಣ್ಯರು ಶುಭ ಕೋರಿದ್ದಾರೆ.
ಚಾರಿತ್ರಿಕ ಬಂಧವನ್ನು ಆಧುನಿಕ ಪಾಲುದಾರಿಕೆಯಾಗಿ ಪರಿವರ್ತಿಸಿಕೊಳ್ಳುತ್ತಿರುವ ಈ ಹೊತ್ತಿನಲ್ಲಿ ಭಾರತ–ಬ್ರಿಟನ್ ನಡುವಣ ‘ಸಜೀವ ಸೇತುವೆ’ಗೆ ವಿಶೇಷ ದೀಪಾವಳಿಯ ಶುಭಾಶಯ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ರಿಷಿ ಸುನಕ್ ಬ್ರಿಟನ್ ಪ್ರಧಾನಿಯಾಗುತ್ತಿರುವುದು ವಿಸ್ಮಯಕಾರಿ, ಇದೊಂದು ಮೈಲಿಗಲ್ಲು. ಈ ಬೆಳವಣಿಗೆಯು ಪ್ರಾಮುಖ್ಯತೆ ಪಡೆದುಕೊಂಡಿದೆ ಎಂದು ಅಮೆರಿಕದ ಅಧ್ಯಕ್ಷ ಜೋ ಬೈಡನ್ ಹೇಳಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.