ಮಂಗಳವಾರ, ಅಕ್ಟೋಬರ್ 20, 2020
21 °C
ಪಶ್ಚಿಮ ಘಟ್ಟದ ಪರಿಸರ ಸೂಕ್ಷ್ಮ ವಲಯ

ಡಿ.31ರೊಳಗೆ ಅಧಿಸೂಚನೆ: ಎನ್‌ಜಿಟಿ ಸೂಚನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ಪಶ್ಚಿಮ ಘಟ್ಟದಲ್ಲಿನ ಪರಿಸರ ಸೂಕ್ಷ್ಮ ವಲಯ ಕುರಿತು ಡಿಸೆಂಬರ್ 31ರೊಳಗೆ ಅಧಿಸೂಚನೆ ಹೊರಡಿಸುವಂತೆ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (ಎನ್‌ಜಿಟಿ)ಯು ಕೇಂದ್ರದ ಪರಿಸರ ಮತ್ತು ಅರಣ್ಯ ಸಚಿವಾಲಯಕ್ಕೆ ನಿರ್ದೇಶನ ನೀಡಿದೆ.

ಅಲ್ಲದೆ, ಈ ಸಂಬಂಧ ಮತ್ತಷ್ಟು ವಿಳಂಬ ತೋರಿದಲ್ಲಿ ಯಾವುದೇ ರೀತಿಯ ಸಮರ್ಥನೆಗೆ ಅವಕಾಶವಿಲ್ಲ ಎಂದು ನ್ಯಾಯಮೂರ್ತಿ ಆದರ್ಶಕುಮಾರ್‌ ಗೋಯೆಲ್‌ ನೇತೃತ್ವದ ಹಸಿರು ಪೀಠ ತಿಳಿಸಿದೆ.

ಅಧಿಸೂಚನೆ ಅಂತಿಮಗೊಳಿಸುವಂತೆ ಸೂಚಿಸಲಾದ ಅಗತ್ಯ ಆದೇಶವನ್ನು ಪಾಲಿಸಬೇಕು. ಒಂದೊಮ್ಮೆ, ವಿಳಂಬ ಕಂಡುಬಂದಲ್ಲಿ ಪರಿಸರ ಮತ್ತು ಅರಣ್ಯ ಸಚಿವಾಲಯದ ಪರಿಸರ ಸೂಕ್ಷ್ಮ ವಲಯ ವಿಭಾಗದ ಸಲಹೆಗಾರರ ವೇತನ ತಡೆ ಹಿಡಿಯಲು ನಿರ್ದೇಶನ ನೀಡುವುದು ಅನಿವಾರ್ಯವಾಗಲಿದೆ ಎಂದು ಪೀಠವು ಎಚ್ಚರಿಕೆ ನೀಡಿದೆ.

ಪ್ರಕರಣದ ವಿಚಾರಣೆಯನ್ನು ನಿಗದಿಗೊಳಿಸಿರುವ ಮುಂದಿನ ದಿನಾಂಕಕ್ಕೆ ಮೊದಲೇ ಈ ಕುರಿತ ಅನುಸರಣಾ ವರದಿಯನ್ನು ನ್ಯಾಯಮಂಡಳಿಗೆ ಇ–ಮೇಲ್ ಮೂಲಕ ಸಲ್ಲಿಸಬೇಕು ಎಂದೂ ನ್ಯಾಯಪೀಠ ಸೂಚಿಸಿದೆ.

ಎಂಟು ವರ್ಷಗಳಿಂದ ಪ್ರಕರಣದ ವಿಚಾರಣೆ ನಡೆಯುತ್ತಲೇ ಇರುವುದರಿಂದ ಅಭಿವೃದ್ಧಿಯ ಅಗತ್ಯವನ್ನು ಪ್ರತಿಪಾದಿಸುವ ರಾಜ್ಯ ಸರ್ಕಾರಗಳು ಪಶ್ಚಿಮ ಘಟ್ಟದಲ್ಲಿನ ಕೆಲವು ಪ್ರದೇಶಗಳನ್ನು ಪರಿಸರ ಸೂಕ್ಷ್ಮ ವಲಯದಿಂದ ಹೊರಗಿಡುವಂತೆ ಬೇಡಿಕೆ ಸಲ್ಲಿಸುತ್ತಿವೆ. ಆದರೆ, ಪರಿಸರ ಸಂರಕ್ಷಣೆಯ ನಿಟ್ಟಿನಲ್ಲಿ ಅಂತಹ ಬೇಡಿಕೆಗಳಿಗೆ ಅವಕಾಶ ದೊರೆಯದಂತೆ ಅಧಿಸೂಚನೆಯನ್ನು ಅಂತಿಮಗೊಳಿಸಬೇಕು ಎಂದು ಪೀಠ ಒತ್ತಿ ಹೇಳಿದೆ.

ಪಶ್ಚಿಮ ಘಟ್ಟದ ಪರಿಸರ ಸೂಕ್ಷ್ಮ ವಲಯವು ತೀವ್ರ ಅಪಾಯದಲ್ಲಿದೆ ಎಂದು ಅಭಿಪ್ರಾಯಪಟ್ಟಿರುವ ನ್ಯಾಯಮಂಡಳಿಯು, ಪರಿಸರದ ಮೇಲೆ ಪ್ರತಿಕೂಲ ಪರಿಣಾಮ ಬೀರುವ ಅಭಿವೃದ್ಧಿ ಚಟುವಟಿಕೆಗಳಿಗೆ ಅನುಮತಿ ನೀಡದಂತೆ ಘಟ್ಟದ ವ್ಯಾಪ್ತಿಯ ಕರ್ನಾಟಕ ಗುಜರಾತ್‌, ಮಹಾರಾಷ್ಟ್ರ, ಗೋವಾ, ತಮಿಳುನಾಡು ಮತ್ತು ಕೇರಳ ರಾಜ್ಯಗಳ ಮೇಲೆ ನಿರ್ಬಂಧ ವಿಧಿಸಿತ್ತು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು