ಬುಧವಾರ, ಮಾರ್ಚ್ 22, 2023
19 °C

ಅಕ್ರಮ ಗಣಿಗಾರಿಕೆ: ₹4 ಕೋಟಿ ಜಮೆ ಮಾಡಲು ಜಿಂದಾಲ್‌ಗೆ ಎನ್‌ಜಿಟಿ ಸೂಚನೆ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ರಾಜಸ್ಥಾನದ ಬಿಲ್ವಾಡ ಜಿಲ್ಲೆಯ ಪುರ ಗ್ರಾಮದಲ್ಲಿ ಜಿಂದಾಲ್‌ ಸಾ ಲಿಮಿಟೆಡ್‌ ಅಕ್ರಮವಾಗಿ ನಡೆಸಿದ ಗಣಿ ಸ್ಫೋಟದಿಂದಾಗಿ ಹಲವು ಮನೆಗಳು ಹಾನಿಗೊಂಡಿದ್ದು, ಸಂತ್ರಸ್ತರಿಗೆ ಪರಿಹಾರ ಒದಗಿಸಲು ₹4 ಕೋಟಿ ಜಮಾ ಮಾಡುವಂತೆ ಜಿಂದಾಲ್‌ ಸಂಸ್ಥೆಗೆ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ(ಎನ್‌ಜಿಟಿ) ನಿರ್ದೇಶನ ನೀಡಿದೆ.

ರಾಷ್ಟ್ರೀಯ ಹಸಿರು ನ್ಯಾಯಮಂಡಳಿ ಅಧ್ಯಕ್ಷ, ನ್ಯಾಯಮೂರ್ತಿ ಆದರ್ಶ್‌ ಕುಮಾರ್‌ ಗೋಯಲ್ ನೇತೃತ್ವದ ಪೀಠವು ಈ ಆದೇಶ ಹೊರಡಿಸಿದೆ. ಅಕ್ರಮ ಗಣಿಗಾರಿಕೆ ಮತ್ತು ಸ್ಫೋಟದಿಂದಾಗಿ ಹಲವು ಮನೆಗಳು ಹಾನಿಗೊಳಗಾಗಿವೆ ಎಂದು 2019ರಲ್ಲಿ ರಾಜಸ್ಥಾನ ಮಾಲಿನ್ಯ ನಿಯಂತ್ರಣ ಮಂಡಳಿಯು(ಪಿಸಿಬಿ) ಸಲ್ಲಿಸಿದ ವರದಿಯಲ್ಲಿ ಪ್ರಸ್ತಾಪಿಸಲಾಗಿದೆ. 375 ಸಂತ್ರಸ್ತರಿಗೆ ತಲಾ ₹1ಲಕ್ಷ ನೀಡಲಾಗುವುದು’ ಎಂದು ಪೀಠವು ಹೇಳಿದೆ. 

ಈ ಪ್ರಕರಣದ ಸಂತ್ರಸ್ತರಿಗೆ ಪರಿಹಾರ ಒದಗಿಸಲು ಮತ್ತು ಪರಿಸರ ಸಂರಕ್ಷಣೆಗಾಗಿ ಬಿಲ್ವಾಡ ಜಿಲ್ಲಾ ಮ್ಯಾಜಿಸ್ಟ್ರೇಟ್‌ ಬಳಿ ₹4 ಕೋಟಿ ಜಮಾ ಮಾಡುವಂತೆ ಜಿಂದಾಲ್‌ ಸಾ ಲಿಮಿಟೆಡ್‌ಗೆ ಪೀಠವು ಸೂಚಿಸಿದೆ.

‘ಭವಿಷ್ಯದಲ್ಲಿ ಜನರಿಗೆ ತೊಂದರೆಯಾಗದಂತೆ ವೈಜ್ಞಾನಿಕ ವಿಧಾನದ ಮೂಲಕ ಗಣಿಯಲ್ಲಿ ಸ್ಫೋಟ ನಡೆಸಬೇಕು. ಗಣಿಗಾರಿಕೆ ವೇಳೆ ಎಲ್ಲಾ ಸುರಕ್ಷತಾ ಕ್ರಮಗಳನ್ನು ಪಾಲಿಸಬೇಕು. ಸುರಕ್ಷತಾ ನಿಯಮಗಳನ್ನು ಪಾಲಿಸದಿದ್ದರೆ ಗಣಿಗಾರಿಕೆ ಸ್ಥಗಿತಗೊಳಿಸುವ ಎಲ್ಲಾ ಅಧಿಕಾರ ಜಿಲ್ಲಾ ಮ್ಯಾಜಿಸ್ಟ್ರೇಟ್‌ ಅವರಿಗೆ ಇದೆ’ ಎಂದು ಎನ್‌ಜಿಟಿ ಎಚ್ಚರಿಸಿದೆ.

‘ಸಂತ್ರಸ್ತರಿಗೆ ವಿತರಿಸಿದ ನಂತರ ಉಳಿದ ಹಣವನ್ನು ಪರಿಸರ ಸಂರಕ್ಷಣಾ ಕಾರ್ಯಗಳಿಗೆ ಬಳಸಬೇಕು. ಈ ಕಾರ್ಯವನ್ನು ಜಿಲ್ಲಾ ಮ್ಯಾಜಿಸ್ಟ್ರೇಟ್‌ ಎರಡು ತಿಂಗಳ ಒಳಗೆ ಪೂರ್ಣಗೊಳಿಸಬೇಕು. ರಾಜಸ್ಥಾನದ ಮಾಲಿನ್ಯ ನಿಯಂತ್ರಣ ಮಂಡಳಿ ಮತ್ತು ಪರಿಸರ ಇಲಾಖೆ ಇದರ ಮೇಲ್ವಿಚಾರಣೆ ನಡೆಸಬೇಕು’ ಪೀಠವು ತಿಳಿಸಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು