ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮರಳು ಅಕ್ರಮ ಗಣಿಗಾರಿಕೆ: ಹಸಿರು ಪೀಠಕ್ಕೆ ಅತೃಪ್ತಿ

Last Updated 3 ಮಾರ್ಚ್ 2021, 21:06 IST
ಅಕ್ಷರ ಗಾತ್ರ

ನವದೆಹಲಿ: ಮರಳು ಅಕ್ರಮ ಗಣಿಗಾರಿಕೆಯ ನಿಯಂತ್ರಣ ಪರಿಣಾಮಕಾರಿಯಾಗಿ ಆಗುತ್ತಿಲ್ಲ ಎಂದು ಹಸಿರು ಪೀಠವು ಅಸಮಾಧಾನ ವ್ಯಕ್ತಪಡಿಸಿದೆ. ಮರಳು ಗಣಿಗಾರಿಕೆಯನ್ನು ವೈಜ್ಞಾನಿಕವಾಗಿ ಹೇಗೆ ನಡೆಸಬಹುದು ಎಂಬ ಬಗ್ಗೆ ರಾಷ್ಟ್ರ ಮಟ್ಟದ ತಜ್ಞರ ಜತೆಗೆ ಮೂರು ತಿಂಗಳೊಳಗೆ ಚರ್ಚೆ ನಡೆಸಬೇಕು. ಕೇಂದ್ರದ ಮಾಲಿನ್ಯ ನಿಯಂತ್ರಣ ಮಂಡಳಿ ಮತ್ತು ಗಣಿಗಾರಿಕೆ ಹಾಗೂ ಜಲಶಕ್ತಿ ಸಚಿವಾಲಯಗಳ ಜತೆಗೆ ಸಮನ್ವಯದೊಂದಿಗೆ ಪರಿಸರ ಮತ್ತು ಅರಣ್ಯ ಸಚಿವಾಲಯವು ಈ ಸಭೆಯನ್ನು ಆಯೋಜಿಸಬೇಕು ಎಂದು ಪೀಠವು ಹೇಳಿದೆ.

ಮರಳು ಗಣಿಗಾರಿಕೆ ನಡೆಸುವವರು ‘ಸುಸ್ಥಿರ ಮರಳು ಗಣಿಗಾರಿಕೆ ಮತ್ತು ನಿರ್ವಹಣಾ ಮಾರ್ಗಸೂಚಿ, 2016’ ಅನ್ನು ಪಾಲಿಸುತ್ತಿದ್ದಾರೆ ಎಂಬುದನ್ನು ಖಾತರಿಪಡಿಸಿಕೊಳ್ಳಲು ರಾಜ್ಯ ಮಟ್ಟದಲ್ಲಿಯೂ ಇಂತಹ ಸಭೆಗಳನ್ನು ನಡೆಸಬೇಕು ಎಂದು ಹಸಿರು ಪೀಠದ ಅಧ್ಯಕ್ಷ ನ್ಯಾಯಮೂರ್ತಿ ಆದರ್ಶ ಕುಮಾರ್ ಗೋಯಲ್‌ ಹೇಳಿದ್ದಾರೆ.

ಮರಳು ಗಣಿಗಾರಿಕೆಗೆ ಸಂಬಂಧಿಸಿದ ಹಲವು ಅರ್ಜಿಗಳನ್ನು ವಿಲೇವಾರಿ ಮಾಡಿದ ಅವರು, ಇಂತಹ ಸಭೆಗಳು ಕಾನೂನು ಜಾರಿಯ ಬಗ್ಗೆ ಸ್ಪಷ್ಟತೆ ಹಾಗೂ ಪರಿಸರ ರಕ್ಷಣೆಗೆ ನೆರವಾಗುತ್ತವೆ ಎಂದರು. ಮರಳು ಗಣಿಗಾರಿಕೆಯ ಸ್ಥಿತಿಗತಿಯ ಬಗ್ಗೆ ಪ್ರತಿ ರಾಜ್ಯವೂ ವಾರ್ಷಿಕ ವರದಿಯನ್ನು ಕೇಂದ್ರ ಅರಣ್ಯ ಮತ್ತು ಪರಿಸರ ಸಚಿವಾಲಯಕ್ಕೆ ಸಲ್ಲಿಸಬೇಕು. ಇದರ ಆಧಾರದಲ್ಲಿ ಮರಳು ಗಣಿಕಾರಿಗೆ ಮಾರ್ಗಸೂಚಿಯನ್ನು ಸಚಿವಾಲಯವು ಕಾಲಕಾಲಕ್ಕೆ ಪರಿಷ್ಕರಿಸಬಹುದು ಎಂದು ಪೀಠವು ಹೇಳಿದೆ.

ಪರಿಸರ ಪರಿಣಾಮ ವಿಶ್ಲೇಷಣಾ ಸಮಿತಿಯ ನೇತೃತ್ವದ ತಂಡವು ಮರಳು ಗಣಿಗಾರಿಕೆ ಪ್ರದೇಶಗಳನ್ನು ಕಾಲಕಾಲಕ್ಕೆ ಪರಿಶೀಲಿಸಬೇಕು. ಪರಿಶೀಲನಾ ವರದಿ ಸಿದ್ಧಪಡಿಸಬೇಕು ಎಂದು ಸೂಚಿಸಿದೆ.

ಮರಳು ಗಣಿಗಾರಿಕೆಗೆ ನಿಗಾ ಮತ್ತು ಜಾರಿ ಮಾರ್ಗಸೂಚಿ 2020 ಅನ್ನು ಪರಿಸರ ಸಚಿವಾಲಯವು ಸಿದ್ಧಪಡಿಸಿದೆ. ಮರಳು ಗಣಿಗಾರಿಕೆ ಪ್ರದೇಶಗಳ ಮೇಲೆ ನಿಗಾ ಇರಿಸಲು ಕತ್ತಲೆಯಲ್ಲಿಯೂ ಚಿತ್ರೀಕರಣ ತಂತ್ರಜ್ಞಾನ ಇರುವ ಡ್ರೋನ್‌ ಕ್ಯಾಮೆರಾ ಬಳಸಬೇಕು, ಮರಳಿನ ಮೂಲಗಳನ್ನು ಗುರುತಿಸಲು ಕ್ರಮ ಕೈಗೊಳ್ಳಬೇಕು, ಪರಿಸರ ಅನುಮೋದನೆ ದೊರೆತ ಬಳಿಕ ಮರಳು ಗಣಿಗಾರಿಕೆ ಸ್ಥಳಗಳ ಮೇಲೆ ನಿಗಾ ಇರಿಸಬೇಕು ಮುಂತಾದ ಅಂಶಗಳು ಈ ಮಾರ್ಗಸೂಚಿಯಲ್ಲಿ ಇವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT