ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕನ್ಹಯ್ಯ ಹತ್ಯೆ: ಎನ್‌ಐಎ ತನಿಖೆ | ಹಂತಕರಿಗೆ ಪಾಕ್‌ ಉಗ್ರರ ನಂಟು

ಯುಎಪಿಎ ಪ್ರಕರಣ ದಾಖಲು; ಹಂತಕರಿಗೆ ಪಾಕ್‌ ಉಗ್ರರ ನಂಟು
Last Updated 29 ಜೂನ್ 2022, 15:36 IST
ಅಕ್ಷರ ಗಾತ್ರ

ನವದೆಹಲಿ:ರಾಜಸ್ಥಾನದ ಉದಯಪುರದಲ್ಲಿ ಟೈಲರ್ ಕನ್ಹಯ್ಯ ಲಾಲ್‌ ಅವರನ್ನು ಕತ್ತು ಸೀಳಿ ಹತ್ಯೆ ಮಾಡಿರುವ ಇಬ್ಬರು ಆರೋಪಿಗಳು, ಈ ಹತ್ಯೆಯ ಮೂಲಕ ದೇಶದಾದ್ಯಂತ ಜನಸಮೂಹಕ್ಕೆ ಭೀತಿ ಮೂಡಿಸುವ ಯೋಜನೆ ಹೊಂದಿದ್ದರು ಎಂದು ಪ್ರಕರಣದ ತನಿಖೆ ನಡೆಸುತ್ತಿರುವ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಬುಧವಾರ ಹೇಳಿದೆ.

ಹಂತಕರಲ್ಲಿ ಒಬ್ಬಾತನಿಗೆ ಪಾಕ್‌ ಮೂಲದ ಉಗ್ರ ಸಂಘಟನೆಗಳ ಜತೆಗೆ ನಂಟು ಇದ್ದು, ಹತ್ಯೆಗೂ ಮೊದಲು ಪಾಕ್‌ಗೆ ಹಲವು ಬಾರಿ ಫೋನ್‌ ಕರೆ ಮಾಡಿರುವುದು ಮತ್ತು ಐಸಿಸ್ ಉಗ್ರರ ವಿಡಿಯೊಗಳನ್ನು ವೀಕ್ಷಿಸಿರುವುದು ತನಿಖೆಯಲ್ಲಿ ಕಂಡುಬಂದಿದೆ ಎಂದು ರಾಜಸ್ಥಾನದ ಎಸ್‌ಐಟಿ ಮೂಲಗಳು ಹೇಳಿವೆ.

‍‍ಪ್ರಕರಣ ಸಂಬಂಧ ಇನ್ನೂ ಐವರನ್ನು ತನಿಖಾ ತಂಡ ರಾಜಸ್ಥಾನದಲ್ಲಿ ವಶಕ್ಕೆ ಪಡೆದಿದೆ.

ಪ್ರವಾದಿ ಮಹಮ್ಮದ್‌ ಅವರ ಅವಹೇಳನ ಮಾಡಿದ್ದ ಬಿಜೆಪಿ ವಕ್ತಾರೆಯಾಗಿದ್ದ ನೂಪುರ್ ಶರ್ಮಾ ಅವರನ್ನು ಬೆಂಬಲಿಸಿ ಸಾಮಾಜಿಕ ಮಾಧ್ಯಮದಲ್ಲಿ ವಿವಾದಾತ್ಮಕ ಪೋಸ್ಟ್‌ ಹಂಚಿಕೊಂಡಿದ್ದರು ಎನ್ನುವ ಕಾರಣಕ್ಕೆ ಟೈಲರ್‌ ಕನ್ಹಯ್ಯ ಅವರ ಶಿರಚ್ಛೇದ ಮಾಡಿದ ರಿಯಾಜ್‌ ಅಖ್ತಾರಿ ಮತ್ತು ಗೌಸ್‌ ಮಹ್ಮದ್‌ ಎಂಬುವವರನ್ನು ರಾಜಸ್ಥಾನ ಪೊಲೀಸರು ಬಂಧಿಸಿದ್ದು, ಎನ್‌ಐಎ ಇವರ ವಿರುದ್ಧ ಕಾನೂನುಬಾಹಿರ ಚಟುವಟಿಕೆಗಳ (ತಡೆ) ಕಾಯ್ದೆ (ಯುಎಪಿಎ) ಮತ್ತು ಭಾರತ ದಂಡ ಸಂಹಿತೆಯ ವಿವಿಧ ಸೆಕ್ಷನ್‌ಗಳಡಿ ಪ್ರಕರಣ ದಾಖಲಿಸಿ, ವಿಚಾರಣೆ ನಡೆಸುತ್ತಿದೆ.

‘ಆರೋಪಿಗಳು ಹರಿತ ಆಯುಧಗಳಿಂದಕನ್ಹಯ್ಯ ಅವರ ದೇಹದ ಮೇಲೆ ಹಲವು ಕಡೆ ಇರಿದಿದ್ದಾರೆ. ಈ ಭೀಕರ ಹತ್ಯೆಯನ್ನು ಮೊಬೈಲ್‌ನಲ್ಲಿ ಚಿತ್ರೀಕರಿಸಿಕೊಂಡು, ಈ ವಿಡಿಯೊವನ್ನು ದೇಶದಾದ್ಯಂತ ಜನರಲ್ಲಿ ಆತಂಕ ಮೂಡಿಸಲು ಮತ್ತು ಭಯೋತ್ಪಾದನೆ ಬಿತ್ತುವ ಉದ್ದೇಶದಿಂದ ಸಾಮಾಜಿಕ ಮಾಧ್ಯಮಗಳಲ್ಲಿ ಹರಿಯಬಿಟ್ಟಿದ್ದಾರೆ. ಇದೊಂದು ಯೋಜಿತ ಕೃತ್ಯ’ ಎಂದು ಎನ್‌ಐಎ ವಕ್ತಾರರು ತಿಳಿಸಿದ್ದಾರೆ.

ಹಂತಕರಿಗೆ ಪಾಕ್‌ ಉಗ್ರರ ನಂಟು

‘ಕನ್ಹಯ್ಯ ಲಾಲ್‌ ಹತ್ಯೆಯ ಹಂತಕರಲ್ಲಿ ಒಬ್ಬನಾದ ಮಹಮ್ಮದ್ ರಿಯಾಜ್‌ ಅನ್ಸಾರಿ ಪಾಕ್‌ ಮೂಲದ ಭಯೋತ್ಪಾದಕ ಗುಂಪುಗಳ ಜತೆಗೆ ನಂಟು ಹೊಂದಿದ್ದು, ಈತ 2014ರಲ್ಲಿ ಕರಾಚಿಗೆ ಭೇಟಿ ನೀಡಿರುವುದು ಕಂಡುಬಂದಿದೆ’ ಎಂದು ರಾಜಸ್ಥಾನ ಪೊಲೀಸ್ ಮಹಾನಿರ್ದೇಶಕ ಎಂ.ಎಲ್. ಲಾಥರ್ ಬುಧವಾರ ತಿಳಿಸಿದ್ದಾರೆ.

‘ಅನ್ಸಾರಿಗೆ ಪಾಕ್‌ ಮೂಲದ ಉಗ್ರ ಸಂಘಟನೆ ದಾವಾತ್‌– ಎ –ಇಸ್ಲಾಂ ಮತ್ತು ಇನ್ನೂ ಕೆಲವು ಉಗ್ರ ಸಂಘಟನೆಗಳ ಸಂಪರ್ಕವಿದೆ’ ಎಂದು ಲಾಥರ್‌ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘ಅನ್ಸಾರಿ ಎರಡು ಬಾರಿ ನೇಪಾಳಕ್ಕೂ ಭೇಟಿ ನೀಡಿದ್ದ. ಈತನಿಗೆ ದುಬೈ ನಂಟೂ ಇದೆ. ಪಾಕಿಸ್ತಾನದ 10 ಮೊಬೈಲ್‌ ನಂಬರುಗಳು ಅನ್ಸಾರಿ ಮೊಬೈಲ್‌ನಲ್ಲಿ ಪತ್ತೆಯಾಗಿವೆ. ಪಾಕಿಸ್ತಾನಕ್ಕೆ ಹಲವು ಬಾರಿ ಫೋನ್‌ ಕರೆಗಳನ್ನು ಮಾಡಿದ್ದಾನೆ’ ಎಂದು ತನಿಖಾ ತಂಡದ ಮೂಲಗಳು ಹೇಳಿವೆ.

ಪ್ರಧಾನಿ ಮೋದಿಗೆ ಹತ್ಯೆ ಬೆದರಿಕೆ

ಆರೋಪಿಗಳು ಕನ್ಹಯ್ಯ ಹತ್ಯೆಯ ಹೊಣೆ ಹೊತ್ತುಕೊಂಡು, ‘ಇದು ಇಸ್ಲಾಂಗೆ ಅವಮಾನ ಮಾಡಿದ್ದಕ್ಕೆ ಪ್ರತೀಕಾರ’ ಎಂಬ ಹೇಳಿಕೆ ವಿಡಿಯೊ ತುಣುಕನ್ನು ಮಂಗಳವಾರ ಸಂಜೆ ಸಾಮಾಜಿಕ ಜಾಲತಾಣಗಳಲ್ಲಿ ಬಿಡುಗಡೆ ಮಾಡಿದ್ದರು.

ಜತೆಗೆ ‘ಏ ಮೋದಿ, ಇವನ ತಲೆ ಕತ್ತರಿಸಿದ್ದೇವೆ’. ‘ಇದೇ ಕತ್ತಿ ನಿನ್ನ ಕುತ್ತಿಗೆಗೂ ಬರಲಿದೆ, ನಿನಗೂ ಇದೇ ಗತಿ’ ಎಂದು ಹಂತಕ ಗಡ್ಡಧಾರಿ ಅಖ್ತಾರಿ ಕೊಲೆ ಬೆದರಿಕೆ ಹಾಕಿರುವ ಅಂಶ ವಿಡಿಯೊ ತುಣುಕಿನಲ್ಲಿದೆ. ‘ನೀನು ಬೆಂಕಿ ಹತ್ತಿಸಿದ್ದೀಯಾ, ನಾವು ಅದನ್ನು ನಂದಿಸುತ್ತೇವೆ’ ಎಂದು ಆತ ಹೇಳಿರುವುದು ವಿಡಿಯೊ ತುಣುಕಿನಲ್ಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT