ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಖಾಲಿಸ್ತಾನ ಪರ ಗುಂಪಿನ ಝೂಮ್‌ ಕಾಲ್‌ನಲ್ಲಿ ಭಾಗಿ; ಒಪ್ಪಿಕೊಂಡ ನಿಕಿತಾ ಜೇಕಬ್‌

Last Updated 17 ಫೆಬ್ರುವರಿ 2021, 8:32 IST
ಅಕ್ಷರ ಗಾತ್ರ

ಮುಂಬೈ: ರೈತ ಹೋರಾಟಕ್ಕೆ ಬೆಂಬಲ ಸೂಚಿಸಲು ರೂಪಿಸಲಾದ 'ಟೂಲ್‌ಕಿಟ್‌' ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಪೊಲೀಸರ ವಿಚಾರಣೆಗೆ ಸಹಕರಿಸುತ್ತಿರುವುದಾಗಿ ಆರೋಪಿ ನಿಕಿತಾ ಜೇಕಬ್‌ ಪರ ವಕೀಲರು ಬಾಂಬೆ ಹೈ ಕೋರ್ಟ್‌ಗೆ ತಿಳಿಸಿದ್ದಾರೆ.

ವಕೀಲೆ ಮತ್ತು ಹೋರಾಟಗಾರ್ತಿ ನಿಕಿತಾ ಜೇಕಬ್‌ ಟೂಲ್‌ಕಿಟ್‌ ರಚನೆಯ ಬಗ್ಗೆ ದೆಹಲಿ ಪೊಲೀಸರಿಗೆ ನೀಡಿರುವ ಹೇಳಿಕೆಯಲ್ಲಿ 'ಮಾಹಿತಿಯನ್ನು ಒಳಗೊಂಡ ದಾಖಲೆಗಳನ್ನು ರೂಪಿಸುತ್ತಿದ್ದೆ, ಅದರಲ್ಲಿ ಹಿಂಸಾಚಾರ ಹೊತ್ತಿಸುವ ಯಾವುದೇ ಉದ್ದೇಶವಿರಲಿಲ್ಲ' ಎಂದಿದ್ದಾರೆ. ಪ್ರಕರಣದ ಸಂಬಂಧ ಈಗಾಗಲೇ ಬಾಂಬೆ ಹೈ ಕೋರ್ಟ್‌ನಲ್ಲಿ ಪ್ರಯಾಣ ಜಾಮೀನಿಗೆ ಅರ್ಜಿ ಸಲ್ಲಿಸಿದ್ದಾರೆ.

ತಾನು ಈ ವಿಚಾರದಲ್ಲಿ ಮುಗ್ದೆ ಎಂದು ಹೇಳಿಕೊಳ್ಳುವ ಜೊತೆಗೆ ಖಾಲಿಸ್ತಾನಪರ ಸದಸ್ಯರು ಇದ್ದ ಝೂಮ್‌ ವಿಡಿಯೊ ಕಾನ್ಫರೆನ್ಸ್‌ನಲ್ಲಿ ಭಾಗಿಯಾಗಿದ್ದಾಗಿ ಒಪ್ಪಿಕೊಂಡಿದ್ದಾರೆ. ದೆಹಲಿಯ ನ್ಯಾಯಾಲಯದಲ್ಲಿ ಜಾಮೀನಿಗಾಗಿ ಅರ್ಜಿ ಸಲ್ಲಿಸಲು ಅಲ್ಲಿಗೆ ಹೋಗಲು ಸಾಧ್ಯವಾಗುವಂತೆ ಜಾಮೀನು ಕೋರಿ ಸೋಮವಾರ ಅರ್ಜಿ ಸಲ್ಲಿಸಿದ್ದರು.

ರಾಷ್ಟ್ರ ರಾಜಧಾನಿಯಲ್ಲಿ ರೈತರ ಪ್ರತಿಭಟನೆಯಲ್ಲಿ ಶಾಂತಿಯುತವಾಗಿ ಭಾಗಿಯಾಗಲು ಪ್ರೇರೇಪಿಸಲು ಮಾಹಿತಿ ಹಂಚಿಕೊಂಡಿದ್ದಾಗಿ ತಿಳಿಸಿದ್ದಾರೆ. ಕಾನೂನು ಬಾಹಿರವಾದ ಯಾವುದೇ ಚಟುವಟಿಕೆಗಳನ್ನು ನಡೆಸಿಲ್ಲ ಎಂದಿರುವ ಅವರು, ಹಲವು ರಾಷ್ಟ್ರಗಳ ಸದಸ್ಯರ ಮೂಲಕ ಸ್ವಯಂ ಸೇವಕರ ಅಭಿಯಾನ ರಚನೆಯಾಗಿತ್ತು. ಪರಿಸರಕ್ಕೆ ಸಂಬಂಧಿಸಿದ ವಿಚಾರಗಳು ಸೇರಿದಂತೆ ಜಾಗತಿಕವಾಗಿ ಹಲವು ಸಮಸ್ಯೆಗಳ ಕುರಿತು ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಸಹಕಾರ ನೀಡಲು ಮುಂದೆ ಬಂದಿದ್ದರು ಎಂದಿದ್ದಾರೆ.

ಎಕ್ಸ್‌ಆರ್‌ ಕಾಪ್‌ ಗ್ರೂಪ್‌ ( XR COP Group), ಎಕ್ಸ್ ಆರ್‌ ಇಂಡಿಯಾ ಚಾಪ್ಟರ್‌, ಎಕ್ಸ್‌ಆರ್‌ ಮುಂಬೈ ಹಾಗೂ ‌ಗ್ಲೋಬಲ್‌ ಸಪೋರ್ಟ್‌ ಗುಂಪುಗಳಲ್ಲಿ ಸ್ವಯಂಸೇವಕರಾಗಿದ್ದಾಗಿ ನಿಕಿತಾ ಹೇಳಿದ್ದಾರೆ.

ಟೂಲ್‌ಕಿಟ್ ಹಂಚಿಕೊಳ್ಳುವಲ್ಲಿ ಯಾವುದೇ ಧಾರ್ಮಿಕ, ರಾಜಕೀಯ ಅಥವಾ ಹಣಕಾಸು ಉದ್ದೇಶಗಳಿರಲಿಲ್ಲ, ಜಾಗೃತಿ ಮೂಡಿಸುವ ಸಲುವಾಗಿ ಮಾಡಿದ ದಾಖಲೆಗಳು, ಅದರಿಂದ ಹಿಂಸಾಚಾರ ಅಥವಾ ಭೌತಿಕ ಹಾನಿಗಾಗಿ ಪ್ರೇರೇಪಿಸಲು ಅಲ್ಲ ಎಂದಿದ್ದಾರೆ.

ಹವಾಮಾನ ಮತ್ತು ಪರಿಸರದ ಬಗ್ಗೆ ಶಾಂತಿಯುತ ಹೋರಾಟ ನಡೆಸುವ ಎಕ್ಸ್‌ಆರ್‌ ಇಂಡಿಯಾ ಗುಂಪು, ಭಾರತದ ಕೃಷಿಕರ ಕುರಿತು ವಿಡಿಯೊಗಾಗಿ ಸ್ವೀಡನ್‌ನ ಹೋರಾಟಗಾರ್ತಿ ಗ್ರೇಟಾ ಥನ್‌ಬರ್ಗ್‌ ಅವರಿಗೆ ಟೂಲ್‌ಕಿಟ್‌ ಕಳುಹಿಸಲಾಗಿತ್ತು ಎಂದು ವಿವರಿಸಿರುವುದಾಗಿ ಇಂಡಿಯಾ ಟುಡೆ ವರದಿ ಮಾಡಿದೆ.

ಖಾಲಿಸ್ತಾನ ಪರ ಸಂಘಟನೆಯ ಝೂಮ್‌ ಕಾಲ್?

ಜನವರಿ 11ರ ಬೆಳಗಿನ ಜಾವ 2:30ಕ್ಕೆ 'ಆಸ್ಟ್‌ ಇಂಡಿಯಾ ವೈ' ಅಭಿಯಾನದಿಂದ ( ಪೋಯೆಟಿಕ್‌ ಜಸ್ಟಿಸ್‌ ಫೌಂಡೇಶನ್ (ಪಿಜೆಎಫ್‌) ) ಝೂಮ್‌ ಕಾನ್ಫರೆನ್ಸ್‌ ಆಯೋಜಿಸಲಾಗಿತ್ತು. ಅಲ್ಲಿ ರೈತರಿಗೆ ಬೆಂಬಲ ಸೂಚಿಸಲು ಕಾರ್ಯಾಚರಿಸಲಾಗುತ್ತಿರುವ ಸಂಗತಿಗಳ ಬಗ್ಗೆ ಮಾಹಿತಿ ಹಂಚಿಕೊಳ್ಳಲಾಯಿತು. ಎಕ್ಸ್‌ಆರ್‌ ಇಂಡಿಯಾ ಸಂಘಟನೆ ಮೂಲಕವಾಗಿ ಶಾಂತನೂ ಮುಲುಕ್‌ ಮತ್ತು ನಿಕಿತಾ ಜೇಕಬ್‌ ವಿಡಿಯೊ ಕಾಲ್‌ನಲ್ಲಿ ಭಾಗಿಯಾಗಿದ್ದರು.

ಖಾಲಿಸ್ತಾನಪರ ಹೋರಾಟದ ಸಂಘಟನೆ ಎಂದು ಗುರುತಿಸಲಾಗಿರುವ ಪೋಯೆಟಿಕ್‌ ಜಸ್ಟಿಸ್‌ ಫೌಂಡೇಶನ್ (ಪಿಜೆಎಫ್‌) ಈ ವಿಡಿಯೊ ಕಾನ್ಫರೆನ್ಸ್‌ ಆಯೋಜಿಸಿತ್ತು ಎಂದು ಪೊಲೀಸರು ಆರೋಪಿಸಿದ್ದು, ತನಿಖೆ ಕೈಗೊಂಡಿದ್ದಾರೆ. ಆ ವಿಡಿಯೊ ಕಾನ್ಫರೆನ್ಸ್‌ ಬಗ್ಗೆ ಮಾಹಿತಿ ಕೋರಿ ಝೂಮ್‌ ವೇದಿಕೆಗೆ ದೆಹಲಿ ಪೊಲೀಸರು ಪತ್ರ ಬರೆದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT