ಶನಿವಾರ, ಡಿಸೆಂಬರ್ 5, 2020
21 °C

ಟೀಕಿಸುವುದನ್ನು ಬಿಟ್ಟು ನಿರುದ್ಯೋಗ, ವಲಸೆ ಕುರಿತು ಮಾತನಾಡಿ: ತೇಜಸ್ವಿ ಯಾದವ್

ಎಎನ್‌ಐ Updated:

ಅಕ್ಷರ ಗಾತ್ರ : | |

Tejashwi Yadav

ಪಟ್ನಾ: ಬಿಹಾರ ಚುನಾವಣೆ ಪೂರ್ಣಗೊಳ್ಳಲು ಕೆಲವೇ ದಿನಗಳು ಬಾಕಿಯಿದ್ದು, ನಿರುದ್ಯೋಗ ಮತ್ತು ವಲಸೆ ವಿಷಯಗಳ ಕುರಿತು ಮಾತನಾಡುವಂತೆ ಆರ್‌ಜೆಡಿ ಮುಖಂಡ ತೇಜಸ್ವಿ ಯಾದವ್ ಶುಕ್ರವಾರ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರನ್ನು ಒತ್ತಾಯಿಸಿದ್ದಾರೆ.

ಈ ಕುರಿತು ಹಿಂದಿಯಲ್ಲಿ ಟ್ವೀಟ್ ಮಾಡಿರುವ ಅವರು, 'ಗೌರವಾನ್ವಿತ ನಿತೀಶ್ ಜಿ ಅವರು 15 ವರ್ಷಗಳ ತಮ್ಮ ಸರ್ಕಾರದ ಅವಧಿಯಲ್ಲಿ ರಾಜ್ಯದ ಶಿಕ್ಷಣ, ಆರೋಗ್ಯ ಮತ್ತು ಕೈಗಾರಿಕೆಗಳನ್ನು ನಾಶಪಡಿಸಿರುವುದಾಗಿ ಒಪ್ಪಿಕೊಂಡಿದ್ದಾರೆ. ಎರಡು ತಲೆಮಾರುಗಳ ವರ್ತಮಾನ ಮತ್ತು ಭವಿಷ್ಯವನ್ನೂ ಅವರು ಹಾಳುಮಾಡಿದ್ದಾರೆ. ನಿರುದ್ಯೋಗ, ಉದ್ಯೋಗ ಕೈಗಾರಿಕೆಗಳು, ಹೂಡಿಕೆ ಮತ್ತು ವಲಸೆಯ ಬಗ್ಗೆ ಅವರು ಏನನ್ನೂ ಮಾತನಾಡದಿರಲು ಇದುವೇ ಕಾರಣವಾಗಿದೆ. ಈ ವಿಷಯಗಳ ಬಗ್ಗೆ ಅವರು ಮಾತನಾಡಬೇಕಲ್ಲವೇ' ಎಂದಿದ್ದಾರೆ.

ನನ್ನ ಕುಟುಂಬವನ್ನು ಟೀಕಿಸುವ ಮೂಲಕ, ನಿತೀಶ್ ಕುಮಾರ್ ಅವರು, 6 ಜನ ಒಡಹುಟ್ಟಿದವರನ್ನು ಹೊಂದಿರುವ ಪ್ರಧಾನಿ ಮೋದಿಯವರ ವಿಚಾರ ಪ್ರಸ್ತಾಪಿಸಿದ್ದಾರೆ. ಅಂತಹ ಭಾಷೆಯನ್ನು ಬಳಸುವ ಮೂಲಕ ನಿತೀಶ್ ಕುಮಾರ್, ಮಹಿಳೆಯರು ಮತ್ತು ನನ್ನ ತಾಯಿಯ ಭಾವನೆಗಳನ್ನು ಅವಮಾನಿಸಿದ್ದಾರೆ. ಹಣದುಬ್ಬರ, ಭ್ರಷ್ಟಾಚಾರ, ನಿರುದ್ಯೋಗ ಇತ್ಯಾದಿ ಮುಖ್ಯ ವಿಷಯಗಳ ಬಗ್ಗೆ ಅವರು ಮಾತನಾಡುವುದಿಲ್ಲ, ಬದಲಿಗೆ ಅವರು ನಮ್ಮನ್ನು ನಿಂದಿಸುತ್ತಾರೆ' ಎಂದು ಹೇಳಿದ್ದಾರೆ.

'ಸಿಎಂ ನಿತೀಶ್ ಕುಮಾರ್ ನಮ್ಮ ವಿರುದ್ಧ ಏನೇ ಹೇಳಿದರೂ ಅದು ನಮಗೆ ಆಶೀರ್ವಾದ ಎಂದುಕೊಳ್ಳುವೆ. ಆದರೆ, ಅವರು ನಮ್ಮನ್ನು ನಿಂದಿಸುವ ಮೂಲಕ ಪರೋಕ್ಷವಾಗಿ ಪ್ರಧಾನಿ ಮೋದಿ ಅವರನ್ನು ಹೊಗಳಲು ಪ್ರಯತ್ನಿಸುತ್ತಿದ್ದಾರೆ' ಎಂದು ಹೇಳಿದರು.

'ಯುವಜನರಿಗೆ ಉದ್ಯೋಗ ಒದಗಿಸುವುದು, ಬಡತನವನ್ನು ನಿರ್ಮೂಲನೆ ಮಾಡುವುದು, ಕಾರ್ಖಾನೆಗಳನ್ನು ತೆರೆಯುವುದು ಮತ್ತು ಆಹಾರ ಸಂಸ್ಕರಣಾ ಘಟಕಗಳನ್ನು ನಿರ್ಮಿಸುವುದು ಆರ್‌ಜೆಡಿಯ ಏಕೈಕ ಗಮನವಾಗಿದೆ. ಬಿಹಾರದ ಜನರು ರಾಜ್ಯಕ್ಕೆ ಸಂಬಂಧಿಸಿದ ವಿಷಯಗಳನ್ನು ಗಮನದಲ್ಲಿರಿಸಿಕೊಂಡು ಮತ ಚಲಾಯಿಸಲು ನಿರ್ಧರಿಸಿದ್ದಾರೆ' ಎಂದು ಯಾದವ್ ಹೇಳಿದ್ದಾರೆ.

ಬಿಹಾರ ವಿಧಾನಸಭೆ ಚುನಾವಣೆ ಮೂರು ಹಂತಗಳಲ್ಲಿ ನಡೆಯಲಿದೆ. ಅಕ್ಟೋಬರ್‌ 28ರಂದು ಮೊದಲ ಹಂತದ ಮತದಾನ ನಡೆದಿದ್ದು, ನವೆಂಬರ್ 3, ನವೆಂಬರ್ 7 ರಂದು ಎರಡು ಮತ್ತು ಮೂರನೇ ಹಂತದ ಚುನಾವಣೆ ನಡೆಯಲಿದೆ. ನ.10ರಂದು ಫಲಿತಾಂಶ ಪ್ರಕಟವಾಗಲಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು