ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

'ನಿತೀಶ್‌ಗೆ ಸಿ.ಎಂ ಸ್ಥಾನ: ಬಿಜೆಪಿ ಬದ್ಧ'

Last Updated 11 ನವೆಂಬರ್ 2020, 19:04 IST
ಅಕ್ಷರ ಗಾತ್ರ

ಪಟ್ನಾ: ‘ಬಿಹಾರದ ಮುಖ್ಯಮಂತ್ರಿ ಯಾರಾಗುತ್ತಾರೆ ಎಂಬ ವಿಚಾರದಲ್ಲಿ ಯಾವುದೇ ಗೊಂದಲ ಇಲ್ಲ. ಯಾರು ಎಷ್ಟೇ ಸ್ಥಾನಗಳನ್ನು ಪಡೆದರೂ ನಿತೀಶ್‌ ಅವರೇ ಮುಖ್ಯಮಂತ್ರಿ ಆಗುತ್ತಾರೆ ಎಂದು ಪಕ್ಷದ ಉನ್ನತ ಮಟ್ಟದ ನಾಯಕರು ಜನರಿಗೆ ಮಾತು ಕೊಟ್ಟಿದ್ದರು. ಅದಕ್ಕೆ ಬದ್ಧರಾಗಿರುತ್ತೇವೆ’ ಎಂದು ಬಿಜೆಪಿ ಮುಖಂಡ, ರಾಜ್ಯದ ಉಪಮುಖ್ಯಮಂತ್ರಿ ಸುಶೀಲ್‌ ಕುಮಾರ್‌ ಮೋದಿ ಸ್ಪಷ್ಟಪಡಿಸಿದ್ದಾರೆ.

ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಗೆ ಜೆಡಿಯುಗಿಂತ ಹೆಚ್ಚಿನ ಸ್ಥಾನಗಳು ಲಭ್ಯವಾದ ಬಳಿಕ, ‘ಬಿಜೆಪಿಯು ತನ್ನದೇ ಪಕ್ಷದ ಯಾರನ್ನಾದರೂ ಮುಖ್ಯಮಂತ್ರಿ ಗಾದಿಯಲ್ಲಿ ಕೂರಿಸಬಹುದು ಮತ್ತು ನಿತೀಶ್‌ ಅವರನ್ನು ರಾಷ್ಟ್ರರಾಜಕಾರಣಕ್ಕೆ ಕರೆಯಬಹುದು’ ಎಂದು ಕೆಲವು ಮಾಧ್ಯಮಗಳು ವರದಿ ಮಾಡಿದ್ದವು.

ಎನ್‌ಡಿಎ ಮೈತ್ರಿಕೂಟಕ್ಕೆ ಎಲ್‌ಜೆಪಿ ಹಾನಿ ಉಂಟುಮಾಡಿದೆ ಎಂಬುದನ್ನು ಒಪ್ಪಿಕೊಂಡಿರುವ ಸುಶೀಲ್‌ ಕುಮಾರ್‌, ‘ಆ ಪಕ್ಷ ವಿಶೇಷವಾಗಿ ಜೆಡಿಯುಗೆ ಹೆಚ್ಚು ಹಾನಿ ಉಂಟುಮಾಡಿದೆ. ಬಿಜೆಪಿಯ ಬಂಡಾಯ ಅಭ್ಯರ್ಥಿಗಳಿಗೆ ಅವರು ಟಿಕೆಟ್‌ ನೀಡಿರದಿದ್ದರೆ, ಇನ್ನೂ 25ರಿಂದ 30 ಸ್ಥಾನಗಳನ್ನು ಪಡೆಯಲು ಜೆಡಿಯುಗೆ ಸಾಧ್ಯವಾಗುತ್ತಿತ್ತು. ಎನ್‌ಡಿಎಗೆ 150ಕ್ಕೂ ಹೆಚ್ಚು ಸ್ಥಾನಗಳು ಲಭಿಸುತ್ತಿದ್ದವು. ಕೆಲವು ಕ್ಷೇತ್ರಗಳಲ್ಲಿ ಆ ಪಕ್ಷ ಬಿಜೆಪಿಗೂ ಹಾನಿ ಉಂಟುಮಾಡಿದೆ’ ಎಂದರು.

‘ಮುಖ್ಯಮಂತ್ರಿ ಯಾರಾಗುತ್ತಾರೆ ಎಂಬುದು ಈಗಾಗಲೇ ಸ್ಪಷ್ಟವಾಗಿರುವ ವಿಚಾರ’ ಎಂದು ಬಿಜೆಪಿಯ ರಾಜ್ಯ ಘಟಕದ ಅಧ್ಯಕ್ಷ ಸಂಜಯ್‌ ಜೈಸ್ವಾಲ್‌ ಸಹ ಹೇಳಿದ್ದಾರೆ.

ಮಹಾರಾಷ್ಟ್ರಕ್ಕೆ ಹೋಲಿಕೆ ಸಲ್ಲ: ಬಿಹಾರದ ಚುನಾವಣಾ ಫಲಿತಾಂಶವನ್ನು ಮಹಾರಾಷ್ಟ್ರದ ರಾಜಕೀಯದ ಜತೆಗೆ ಹೋಲಿಕೆ ಮಾಡಲು ನಿರಾಕರಿಸಿದ ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ, ಬಿಜೆಪಿ ಮುಖಂಡ ದೇವೇಂದ್ರ ಫಡಣವೀಸ್‌, ‘ನಿತೀಶ್‌ ಅವರನ್ನು ಮುಖ್ಯಮಂತ್ರಿಯಾಗಿ ಮುಂದುವರಿಸಲು ಬಿಜೆಪಿ ಬದ್ಧ’ ಎಂದಿದ್ದಾರೆ.

7 ಲಕ್ಷ ನೋಟಾ ಮತ

ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಈ ಬಾರಿ ಏಳು ಲಕ್ಷಕ್ಕೂ ಹೆಚ್ಚು ಮತದಾರರು ‘ನೋಟಾ’ ಮತ ಚಲಾಯಿಸಿದ್ದಾರೆ ಎಂದು ಚುನಾವಣಾ ಆಯೋಗ ತಿಳಿಸಿದೆ.

ಈ ಬಾರಿ ಸುಮಾರು 4 ಕೋಟಿ ಮತಗಳು ಚಲಾವಣೆಯಾಗಿದ್ದವು. ಅದರಲ್ಲಿ ಶೇ 1.7ರಷ್ಟು, ಅಂದರೆ 7,06,252 ಮಂದಿ ಕಣದಲ್ಲಿರುವ ಯಾವುದೇ ಅಭ್ಯರ್ಥಿಗೆ ಮತಚಲಾಯಿಸಲು ನಿರಾಕರಿಸಿ, ‘ನೋಟಾ’ಗೆ ಮತ ಹಾಕಿದ್ದಾರೆ.

ಹಲವು ಕ್ಷೇತ್ರಗಳಲ್ಲಿ, ಗೆದ್ದ ಅಭ್ಯರ್ಥಿಯ ಗೆಲುವಿನ ಅಂತರಕ್ಕಿಂತಲೂ ಹೆಚ್ಚಿನ ಮತಗಳು ‘ನೋಟಾ’ಗೆ ಬಿದ್ದಿರುವ ಉದಾಹರಣೆಗಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT