ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಬಿಜೆಪಿ ಸೋಲಿಸಲು ವಿಪಕ್ಷಗಳು ಒಗ್ಗೂಡಲಿ’; ನಿತೀಶ್ ಕುಮಾರ್ ಕರೆ

ಫತೇಹಾಬಾದ್ ರ‍್ಯಾಲಿಯಲ್ಲಿ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಕರೆ
Last Updated 25 ಸೆಪ್ಟೆಂಬರ್ 2022, 14:08 IST
ಅಕ್ಷರ ಗಾತ್ರ

ಫತೇಹಾಬಾದ್ (ಹರಿಯಾಣ): ಬಿಜೆಪಿಯನ್ನು ಎದುರಿಸಲು ಕಾಂಗ್ರೆಸ್ ಮತ್ತು ಎಡಪಕ್ಷಗಳು ಸೇರಿದಂತೆ ಎಲ್ಲಾ ವಿರೋಧಪಕ್ಷಗಳು ಒಗ್ಗೂಡುವಂತೆ ಬಿಹಾರದ ಮುಖ್ಯಮಂತ್ರಿ ನಿತೀಶ್‌ ಕುಮಾರ್ ಅವರು ಭಾನುವಾರ ಕರೆ ನೀಡಿದ್ದು, 2024ರ ಸಾರ್ವತ್ರಿಕ ಚುನಾವಣೆಯಲ್ಲಿ ಬಿಜೆಪಿಯನ್ನು ಹೀನಾಯವಾಗಿ ಸೋಲಿಸಬೇಕೆಂದು ಹೇಳಿದ್ದಾರೆ.

ಮಾಜಿ ಉಪಪ್ರಧಾನಿ ದೇವಿ ಲಾಲ್ ಅವರ 109ನೇ ಜನ್ಮದಿನಾಚರಣೆ ಅಂಗವಾಗಿ ಇಂಡಿಯನ್ ನ್ಯಾಷನಲ್ ಲೋಕದಳ (ಐಎನ್‌ಎಲ್‌ಡಿ) ಆಯೋಜಿಸಿದ್ದ ಮೆಗಾ ರ‍್ಯಾಲಿಯಲ್ಲಿಮಾತನಾಡಿದ ಅವರು, ‘ಬಿಜೆಪಿಯೇತರ ಪಕ್ಷಗಳೆಲ್ಲಾ ಒಗ್ಗೂಡಿದರೆ ದೇಶವನ್ನು ನಾಶ ಮಾಡುತ್ತಿರುವವರನ್ನು ಕಿತ್ತೊಗೆಯಬಹುದು. ರಾಜಕೀಯವಾಗಿ ಲಾಭ ಪಡೆಯುವ ಸಲುವಾಗಿ ಬಿಜೆಪಿಯು ಹಿಂದೂ– ಮುಸ್ಲಿಂ ಹೆಸರಲ್ಲಿ ಗೊಂದಲ ಸೃಷ್ಟಿಸುತ್ತಿವೆ’ ಎಂದು ಆರೋಪಿಸಿದರು.

‘ಸಮಾಜದಲ್ಲಿ ಹಿಂದೂ– ಮುಸ್ಲಿಮರ ನಡುವೆ ಸಂಘರ್ಷವಿಲ್ಲ. ಆದರೆ, ಕೆಲವು ಕಿಡಿಗೇಡಿಗಳು ಎಲ್ಲೆಡೆ ಇದ್ದಾರೆ’ ಎಂದರು.

ಕಾಂಗ್ರೆಸ್ ಮತ್ತು ಎಡಪಕ್ಷಗಳನ್ನು ಹೊರತುಪಡಿಸಿ ವಿರೋಧಪಕ್ಷಗಳು ಮುಂಚೂಣಿಯಲ್ಲಿರಲು ಸಾಧ್ಯವಿಲ್ಲ. ಕಾಂಗ್ರೆಸ್ ವಿರೋಧಿ ಇತಿಹಾಸವನ್ನು ಹೊಂದಿರುವ ನಾಯಕರೂ ಈಗ ಜತೆಗೂಡಿ ಕೆಲಸ ಮಾಡಬೇಕಿದೆ ಎಂದು ಅವರು ಅಭಿಪ್ರಾಯಪಟ್ಟರು.

ಐಎನ್‌ಎಲ್‌ಡಿ ನಾಯಕ ಓಂಪ್ರಕಾಶ್ ಚೌತಾಲ, ಶಿರೋಮಣಿ ಅಕಾಲಿ ದಳದ ನಾಯಕ ಸುಖ್‌ಬೀರ್ ಸಿಂಗ್ ಬಾದಲ್ ಅವರು ಬಹುಕಾಲದಿಂದಲೂ ಕಾಂಗ್ರೆಸ್ ವಿರೋಧಿಸುತ್ತಾ ಬಂದಿದ್ದಾರೆ.

ವೇದಿಕೆಯಲ್ಲಿ ಸಿಪಿಎಂ ನಾಯಕ ಸೀತಾರಾಂ ಯೆಚೂರಿ, ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್, ಶಿವಸೇನಾದ ನಾಯಕ ಅರವಿಂದ್ ಸಾವಂತ್,ಬಿಹಾರದ ಉಪ ಮುಖ್ಯಮಂತ್ರಿ, ಆರ್‌ಜೆಡಿ ನಾಯಕ ತೇಜಸ್ವಿ ಯಾದವ್ ಉಪಸ್ಥಿತರಿದ್ದರು. ಆದರೆ, ಕಾಂಗ್ರೆಸ್ ಪಕ್ಷದ ಪರವಾಗಿ ಯಾರೂ ವೇದಿಕೆಯಲ್ಲಿ ಇರಲಿಲ್ಲ.

‘ಬಿಜೆಪಿಯೇತರ ಮತ್ತು ಕಾಂಗ್ರೆಸೇತರ ಪಕ್ಷಗಳನ್ನು ಉಲ್ಲೇಖಿಸುವುದು ಈ ಸಮಯದ ಅಗತ್ಯವಾಗಿದೆ. ಆದರೆ, ಯಾವುದೇ ತೃತೀಯ ರಂಗವಲ್ಲ ಎಂದು ಪ್ರತಿಪಾದಿಸಿದ ನಿತೀಶ್, ಹಾಗಾದಾಗ ಮಾತ್ರ ಅಂಥ ರಂಗ ಭರ್ಜರಿಯಾಗಿ ಗೆಲುವು ಸಾಧಿಸಲಿದೆ’ ಎಂದರು.

ರ‍್ಯಾಲಿಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ನಿತೀಶ್ ಕುಮಾರ್, ತಾವು ಪ್ರಧಾನಿ ಸ್ಥಾನದ ಆಕಾಂಕ್ಷಿಯಲ್ಲ ಎಂದು ಸ್ಪಷ್ಟಪಡಿಸಿದರು.

‘ಕೇಂದ್ರದ ಬಿಜೆಪಿ ಸರ್ಕಾರದ ಅಡಿಯಲ್ಲಿ ಯಾವುದೇ ಕೆಲಸಗಳು ನಡೆಯುತ್ತಿಲ್ಲ. ಮಾಧ್ಯಮಗಳು ಸೇರಿದಂತೆ ವಿವಿಧ ಸಂಸ್ಥೆಗಳ ಮೇಲೆ ನಿಯಂತ್ರಣ ಹೇರುತ್ತಿರುಬವ ಬಿಜೆಪಿಯು ಏಕಪಕ್ಷೀಯವಾಗಿ ಕೆಲಸ ಮಾಡುತ್ತಿದೆ’ ಎಂದರು ಆರೋಪಿಸಿದರು.

ಬಾಕ್ಸ್

‘2024ರಲ್ಲಿ ಸರ್ಕಾರ ಬದಲಿಸುವ ಸಮಯ ಬಂದಿದೆ’

ಫತೇಹಾಬಾದ್: ‘2024ರಲ್ಲಿ ಕೇಂದ್ರ ಸರ್ಕಾರವನ್ನು ಬದಲಾವಣೆ ಮಾಡಲು ಎಲ್ಲರೂ ಒಗ್ಗೂಡಿ ಕೆಲಸ ಮಾಡುವ ಸಮಯ ಬಂದಿದೆ’ ಎಂದು ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ ಭಾನುವಾರ ಹೇಳಿದ್ದಾರೆ.

ಐಎನ್‌ಎಲ್‌ಡಿ ಮೆಗಾ ರ‍್ಯಾಲಿಯಲ್ಲಿ ವಿವಿಧ ವಿರೋಧಪಕ್ಷಗಳ ನಾಯಕರು ಒಂದೇ ವೇದಿಕೆಯಲ್ಲಿ ಒಗ್ಗೂಡಿದ್ದನ್ನು ಗಮನಿಸಿ ಪವಾರ್ ಅವರು, ಮೇಲಿನ ಮಾತುಗಳನ್ನಾಡಿದರು.

ಕೃಷಿ ಕಾಯ್ದೆಗಳ ವಿರೋಧಿಸಿ ನಡೆಸಿದ ಪ್ರತಿಭಟನೆಯನ್ನು ಉಲ್ಲೇಖಿಸಿದ ಅವರು, ‘ರೈತರು ಮತ್ತು ಯುವಕರು ಆತ್ಮಹತ್ಯೆ ಮಾಡಿಕೊಳ್ಳುವುದೇ ಪರಿಹಾರವಲ್ಲ. 2024ರಲ್ಲಿ ಕೇಂದ್ರದಲ್ಲಿ ಸರ್ಕಾರವನ್ನು ಬದಲಾವಣೆ ಮಾಡುವುದೇ ನಿಜವಾದ ಪರಿಹಾರ. ಅದಕ್ಕಾಗಿ ಎಲ್ಲರೂ ಒಗ್ಗೂಡಿ ಕೆಲಸ ಮಾಡುವ ಸಮಯ ಬಂದಿದೆ. ಇದಕ್ಕಾಗಿ ಎಲ್ಲರೂ ಶ್ರಮಿಸಬೇಕು’ ಎಂದು ಹೇಳಿದರು.

‘ರಾಷ್ಟ್ರರಾಜಧಾನಿಯ ಗಡಿ ಪ್ರದೇಶಗಳಲ್ಲಿ ರೈತರು ಪ್ರತಿಭಟನೆ ನಡೆಸಿದರು. ಆದರೆ, ಬಹಳ ದಿನಗಳ ಬಳಿಕವೂ ಕೇಂದ್ರ ಸರ್ಕಾರವು ಅವರ ಬೇಡಿಕೆಗಳತ್ತ ಗಮನ ಹರಿಸಲಿಲ್ಲ. ಅಷ್ಟೇ ಅಲ್ಲ, ರೈತರ ಮೇಲೆ ಹೂಡಿದ್ದ ಮೊಕದ್ದಮೆಗಳನ್ನು ವಾಪಸ್ ಪಡೆಯುವುದಾಗಿ ಸರ್ಕಾರ ಹೇಳಿತ್ತು. ಆದರೆ, ಇದುವರೆಗೂ ಆ ಭರವಸೆಯನ್ನು ಈಡೇರಿಸಿಲ್ಲ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT