ಸೋಮವಾರ, ಜನವರಿ 25, 2021
17 °C

ನಿವಾರ್ ತೀವ್ರತೆ ದುರ್ಬಲ: ಪುದುಚೇರಿ ಕರಾವಳಿ ದಾಟಿದ ಚಂಡಮಾರುತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚೆನ್ನೈ: ‘ನಿವಾರ್’‌ ಚಂಡಮಾರುತ ಗುರುವಾರ ಬೆಳಗ್ಗೆ 2.30ರ ಸುಮಾರಿಗೆ ಪುದುಚೇರಿ ಕರಾವಳಿಯನ್ನು ಅಪ್ಪಳಿಸಿದ್ದು ಚಂಡಮಾರುತದ ತೀವ್ರತೆ ದುರ್ಬಲವಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಮುಂದಿನ ಕೆಲವು ಗಂಟೆಗಳಲ್ಲಿ ನಿವಾರ್ ಚಂಡಮಾರುತದ ತೀವ್ರತೆ ದುರ್ಬಲಗೊಳ್ಳಲಿದೆ. ಇಲ್ಲಿಯವರೆಗೂ ಪುದುಚೇರಿಯಲ್ಲಿ 233 ಮಿ.ಮೀಟರ್ ಹಾಗೂ ಕಡಲೂರಿನಲ್ಲಿ 237 ಮಿ.ಮೀಟರ್ ಮಳೆಯಾಗಿದೆ ಎಂದು ಹವಾಮಾನ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಆದಾಗ್ಯೂ ಚೆನ್ನೈ, ಪುದುಚೇರಿ, ನಾಗಪಟ್ಟಣಂ, ಕಾಂಚೀಪುರಂ, ಚಿದಂಬರಂ, ತಿರುವಲ್ಲೂರು, ಚೆಂಗಲ್ಪಟ್ಟು ಸೇರಿದಂತೆ ತಮಿಳುನಾಡಿನ 16 ಜಿಲ್ಲೆಗಳಲ್ಲಿ ಚಂಡಮಾರುತದ ಪರಿಣಾಮ ವ್ಯಾಪಕ ಮಳೆ ಸುರಿಯುತ್ತಿದ್ದು ಗುರುವಾರವೂ ಸರ್ಕಾರಿ ರಜೆ ಘೋಷಿಸಲಾಗಿದೆ. 

ಬುಧವಾರ ಬೆಳಿಗ್ಗೆ 5.30ರ ಹೊತ್ತಿಗೆ ಗಂಟೆಗೆ 7 ಕಿ.ಮೀ. ವೇಗದಲ್ಲಿ ಸಾಗುತ್ತಿದ್ದ ‘ನಿವಾರ್‌’ ಸಂಜೆ 5 ಗಂಟೆಯ ಹೊತ್ತಿಗೆ ವೇಗವನ್ನು 16 ಕಿ.ಮೀ.ಗೆ ಹೆಚ್ಚಿಸಿಕೊಂಡಿತ್ತು. ಚಂಡಮಾರುತವು ಭೂ ಪ್ರದೇಶವನ್ನು ಅಪ್ಪಳಿಸುವ ಸಂದರ್ಭದಲ್ಲಿ ಗಾಳಿಯ ವೇಗ ಗಂಟೆಗೆ 60–70 ಕಿ.ಮೀ. ವೇಗದಲ್ಲಿತ್ತು ಎಂದು ಹವಾಮಾನ ಇಲಾಖೆ ತಿಳಿಸಿದೆ.

ಭಾರತೀಯ ನೌಕಾಪಡೆ ಮತ್ತು ಭಾರತೀಯ ಕರಾವಳಿ ಗಸ್ತು ಪಡೆ ಕೂಡ ವ್ಯಾಪಕ ಸಿದ್ಧತೆಗಳನ್ನು ಮಾಡಿಕೊಂಡಿದೆ. ರಾಜ್ಯ ವಿಪತ್ತು ನಿರ್ವಹಣಾ ತಂಡಗಳ ಜತೆಗೆ ಕೇಂದ್ರ ವಿಪತ್ತು ನಿರ್ವಹಣಾ ಪಡೆಯ ತಂಡಗಳನ್ನು ಕರಾವಳಿ ಪ್ರದೇಶಗಳಲ್ಲಿ ನಿಯೋಜಿಸಲಾಗಿದೆ.

ತಮಿಳುನಾಡಿನ ವಿವಿಧ ಭಾಗಗಳಲ್ಲಿ 465 ಆಂಬುಲೆನ್ಸ್‌ಗಳು ಸಿದ್ಧವಾಗಿ ನಿಂತಿವೆ. ‘ನಿವಾರ್‌’ನಿಂದ ಹೆಚ್ಚು ತೊಂದರೆಗೆ ಒಳಗಾಗುವ ಪ್ರದೇಶ ಪುದುಚೇರಿ ಮತ್ತು ತಮಿಳುನಾಡಿನ ಕಡಲೂರು ಜಿಲ್ಲೆ ಎಂದು ಗುರುತಿಸಲಾಗಿರುವುದರಿಂದ ಈ ಪ್ರದೇಶಗಳ ಮೇಲೆ ಗಮನ ಕೇಂದ್ರೀಕರಿಸಲಾಗಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು