ಬುಧವಾರ, ಅಕ್ಟೋಬರ್ 21, 2020
24 °C

PV Web Exclusive | ಮುಸ್ಲಿಂ ಕುಟುಂಬದ ಹಿಂದೂ ಸೊಸೆಗೆ ಸೀಮಂತವಿಲ್ಲ

ಹಮೀದ್‌ ಕೆ. Updated:

ಅಕ್ಷರ ಗಾತ್ರ : | |

Prajavani

ಕಂಪೆನಿಯ ಹೆಸರು ಜನರ ಮನಸ್ಸಿನಲ್ಲಿ ಉಳಿಯುವಂತೆ ಮಾಡುವುದು, ಗ್ರಾಹಕರು ಸರಕು ಖರೀದಿಸುವಂತೆ ಮನವೊಲಿಸುವುದು, ಗ್ರಾಹಕರಿಗೆ ಮಾಹಿತಿ ನೀಡುವುದು ಜಾಹೀರಾತುಗಳ ಮುಖ್ಯ ಉದ್ದೇಶ. ಜಾಹೀರಾತಿಗೆ ಇದಕ್ಕಿಂತ ಮಹತ್ತಾದ ಉದ್ದೇಶವೇನೂ ಇರುವುದಿಲ್ಲ. ಆದರೆ, ಜಾಹೀರಾತು ಪ್ರಕಟವಾದ ಬಳಿಕ ಅದನ್ನು ನೋಡುವ ಜನರು ಹೇಗೆ ಬೇಕಾದರೂ ತೆಗೆದುಕೊಳ್ಳಬಹುದು ಎಂಬುದಕ್ಕೆ ತೀರಾ ಈಚಿನ ಉದಾಹರಣೆ ತನಿಷ್ಕ್‌ ಚಿನ್ನಾಭರಣ ಕಂಪೆನಿಯ ಜಾಹೀರಾತು. ಇದು ಮೊದಲನೆಯ ನಿದರ್ಶನವೇನೂ ಅಲ್ಲ.

ಮುಸ್ಲಿಂ ಕುಟುಂಬದ ಹಿಂದೂ ಸೊಸೆಯ ಸೀಮಂತ ಎಂದು ತೋರುವಂತಹ ಜಾಹೀರಾತನ್ನು ತನಿಷ್ಕ್‌ ಕಂಪನಿಯು ಸಿದ್ಧಪಡಿಸಿ ಪ್ರಸಾರ ಮಾಡಿತ್ತು. ವೈವಿಧ್ಯತೆಯಲ್ಲಿ ಏಕತೆಯನ್ನು ಸಂಭ್ರಮಿಸುವಂತಹ, ಬಹಳ ಭಾವನಾತ್ಮಕ ಎನಿಸುವಂತಹ ದೃಶ್ಯಗಳು ಜಾಹೀರಾತಿನಲ್ಲಿ ಇದ್ದವು. ಆದರೆ, ‘ಮುಸ್ಲಿಂ ಕುಟುಂಬದಲ್ಲಿ ಹಿಂದೂ ಸೊಸೆ ಇರುವಂತೆ ಬಿಂಬಿಸಿದ ಕಾರಣ’ಕ್ಕೆ ಈ ಜಾಹೀರಾತಿನ ವಿರುದ್ಧ ಸಾಮಾಜಿಕ ಜಾಲ ತಾಣಗಳಲ್ಲಿ ಟೀಕೆಗಳು ವ್ಯಕ್ತವಾದವು, ಇಂದೋರ್‌ನ ತನಿಷ್ಕ್‌ ಮಳಿಗೆಯ ಮುಂದೆ ಪ್ರತಿಭಟನೆ ನಡೆಯಿತು. ಸಿಬ್ಬಂದಿಯನ್ನು ಬೆದರಿಸಿ ಕ್ಷಮಾಪಣೆ ಪತ್ರ ಬರೆಸಿಕೊಳ್ಳಲಾಯಿತು ಎಂದೆಲ್ಲ ವರದಿಯಾಗಿವೆ. ಕೊನೆಗೆ, ತಮಿಳುನಾಡಿನ ಕೈಗಾರಿಕಾ ಅಭಿವೃದ್ಧಿ ನಿಗಮ (ಟಿಡ್ಕೊ) ಮತ್ತು ಟಾಟಾ ಸಮೂಹ ಗಣನೀಯ ಪಾಲುದಾರಿಕೆ ಹೊಂದಿರುವ ಕಂಪನಿಯು ಜಾಹೀರಾತನ್ನು ಹಿಂದಕ್ಕೆ ಪಡೆಯಿತು. ಜಾಹೀರಾತನ್ನು ಟೀಕಿಸಿದವರು ಮತ್ತು ಜಾಹೀರಾತು ಪ್ರಕಟಿಸಿದವರ ಮಟ್ಟಿಗೆ ಎಲ್ಲವೂ ಇಲ್ಲಿಗೆ ಸುಖಾಂತ್ಯ.

ಮುಖ್ಯವಾಹಿನಿಯ ಮಾಧ್ಯಮ, ಸಾಮಾಜಿಕ ಜಾಲತಾಣಗಳಲ್ಲಿ ಪರ–ವಿರೋಧದ ಚರ್ಚೆ ಮುಂದುವರಿದಿದೆ. ಜನರ ಮಾತಿನ ನಡುವೆಯೂ ತನಿಷ್ಕ್‌ ಜಾಹೀರಾತು ಇಣುಕುವ ಸಾಧ್ಯತೆ ಇದೆ. 

ಟಾಟಾ ಸಮೂಹಕ್ಕೆ ಉದ್ಯಮ ವಲಯದಲ್ಲಿ ಮತ್ತು ಭಾರತದ ಜನರ ಮನಸ್ಸಿನಲ್ಲಿ ಗೌರವದ ಸ್ಥಾನ ಇದೆ. ಇಂತಹ ಟಾಟಾ ಸಮೂಹವು ಮಾಲೀಕತ್ವ ಹೊಂದಿರುವ ಕಾರಣದಿಂದ ಸದುದ್ದೇಶದಿಂದಲೇ ಈ ಜಾಹೀರಾತು ಸೃಷ್ಟಿಸಲಾಗಿದೆ ಎಂದು ಭಾವಿಸುವವರ ಸಂಖ್ಯೆಯೇನೂ ಕಡಿಮೆ ಇಲ್ಲ. ಪ್ರತಿಭಟನೆಯಿಂದಾಗಿ ಜಾಹೀರಾತನ್ನು ಹಿಂದಕ್ಕೆ ಪಡೆದಾಗ ‘ಅಯ್ಯೋ ಟಾಟಾ ಸಮೂಹ ಹೀಗೆ ಮಾಡಿತಲ್ಲ’ ಎಂದು ನೊಂದವರೂ ಇರಬಹುದು. ನೈತಿಕವಾಗಿ, ಸಾಂವಿಧಾನಿಕವಾಗಿ, ಕಾನೂನಾತ್ಮಕವಾಗಿ ಅಥವಾ ಸೌಂದರ್ಯಾತ್ಮಕವಾಗಿ (ಏಸ್ತೆಟಿಕಲಿ ಎಂಬ ಅರ್ಥದಲ್ಲಿ) ಜಾಹೀರಾತಿನಲ್ಲಿ ಯಾವ ಲೋಪವೂ ಇಲ್ಲ. ಹಾಗಿದ್ದರೂ ಜಾಹೀರಾತನ್ನು ಹಿಂದಕ್ಕೆ ಪಡೆಯುವ ನಿರ್ಧಾರವನ್ನು ತನಿಷ್ಕ್‌ ಸಂಸ್ಥೆ ಮಾಡಿದೆ.

ತನಿಷ್ಕ್‌ ಸಂಸ್ಥೆಯಲ್ಲಿ ಅತಿ ದೊಡ್ಡ ಪಾಲು ಹೊಂದಿರುವುದು ತಮಿಳುನಾಡು ಸರ್ಕಾರ. ಹಾಗಾಗಿ, ಜಾಹೀರಾತು ವಿವಾದದ ಬಗ್ಗೆ ತಮಿಳುನಾಡು ಸರ್ಕಾರದ ನಿಲುವು ಏನು ಎಂದು ಡಿಎಂಕೆ ಸಂಸದೆ ಕನಿಮೊಳಿ ಪ್ರಶ್ನಿಸಿದ್ದಾರೆ. ಅದಕ್ಕೆ ಸರ್ಕಾರದಿಂದ ಉತ್ತರ ಬಂದ ಹಾಗೆ ಇಲ್ಲ. ತಮಿಳುನಾಡು ಸರ್ಕಾರದ ಕೈಗಾರಿಕಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಎನ್‌. ಮುರುಘಾನಂದಂ ತನಿಷ್ಕ್‌ ಸಂಸ್ಥೆಯ ಅಧ್ಯಕ್ಷ. ಪ್ರಜಾಸತ್ತಾತ್ಮಕವಾಗಿ ಆಯ್ಕೆಯಾದ ತಮಿಳುನಾಡು ಸರ್ಕಾರವು ಜಾಹೀರಾತಿನ ಬಗ್ಗೆ ಪ್ರತಿಕ್ರಿಯೆ ನೀಡಬೇಕು ಎಂದು ಜನರು ನಿರೀಕ್ಷಿಸಿದರೆ ಅದು ತಪ್ಪಾಗುವುದೇ? ತನಿಷ್ಕ್, ಟಾಟಾ ಸಮೂಹದ ಒಡೆತನದ ಸಂಸ್ಥೆ ಎಂಬ ಭಾವನೆ ಜನರಲ್ಲಿದೆ. ತನಿಷ್ಕ್‌ ನಲ್ಲಿ ಶೇ 28 ಪಾಲು ಇರುವುದು ತಮಿಳುನಾಡು ಸರ್ಕಾರದ್ದು ಮತ್ತು ಶೇ 25 ಪಾಲು ಟಾಟಾ ಸಮೂಹದ್ದು. 

ಇನ್ನೊಂದು ವಿಚಾರ ಇದೆ. ಬರಹದ ಆರಂಭದಲ್ಲಿಯೇ ಪ್ರಸ್ತಾಪಿಸಿದ ಜಾಹೀರಾತಿನ ಉದ್ದೇಶದ ವಿಷಯ ಅದು. ವಿವಾದದ ಮೂಲಕವೇ ಪ್ರಚಾರ ಪಡೆಯುವ ಕಾರ್ಯತಂತ್ರ ಇದೆ. ದೊಡ್ಡ ಮಟ್ಟದ ವಿವಾದ ಯಾವುದೇ ಜಾಹೀರಾತಿಗಿಂತ ಹೆಚ್ಚಿನ ಪ್ರಚಾರ ತಂದು ಕೊಡುತ್ತದೆ. ತನಿಷ್ಕ್‌ ಕಂಪೆನಿಗೆ ಕೂಡ ಈಗ ದೊಡ್ಡ ಮಟ್ಟದ ಪ್ರಚಾರ ಸಿಕ್ಕಿದೆ ಎಂಬುದು ನಿಜ. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು