ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಮ್ಲಜನಕ ಕೊರತೆಯಿಂದಲೇ ಸಾವು: ಕೇಂದ್ರಕ್ಕೆ ದೆಹಲಿ ತಿರುಗೇಟು

Last Updated 21 ಜುಲೈ 2021, 18:18 IST
ಅಕ್ಷರ ಗಾತ್ರ

ನವದೆಹಲಿ: ಕೋವಿಡ್‌ ಎರಡನೇ ಅಲೆ ಸಂದರ್ಭದಲ್ಲಿ ಆಮ್ಲಜನಕ ಕೊರತೆಯಿಂದ ಯಾರೂ ಸತ್ತಿದ್ದು ವರದಿಯಾಗಿಲ್ಲ ಎಂಬ ಕೇಂದ್ರ ಸರ್ಕಾರದ ಹೇಳಿಕೆಯನ್ನು ದೆಹಲಿ ಸರ್ಕಾರವು ಖಂಡಿಸಿದೆ.

ಕೇಂದ್ರವು ತನ್ನ ತಪ್ಪನ್ನು ಮರೆಮಾಚಲು ಪ್ರಯತ್ನಿಸುತ್ತಿದೆ ಎಂದು ದೆಹಲಿ ಉಪ ಮುಖ್ಯಮಂತ್ರಿಮನೀಶ್ ಸಿಸೋಡಿಯಾ ಬುಧವಾರ ಹೇಳಿದ್ದಾರೆ. ನಿರ್ವಹಣೆ ವೈಫಲ್ಯ ಹಾಗೂ ಏಪ್ರಿಲ್ 13ರ ನಂತರ ತರಲಾದ ‘ಆಮ್ಲಜನಕ ವಿತರಣಾ ನೀತಿ’ಯಲ್ಲಿನ ಬದಲಾವಣೆಯಿಂದ ದೇಶದಾದ್ಯಂತ ಆಮ್ಲಜನಕ ಕೊರತೆ ಉಂಟಾಗಿ, ಸಾವುಗಳು ಸಂಭವಿಸಿದವು ಎಂದು ಅವರು ಆರೋಪಿಸಿದ್ದಾರೆ.

ಕೋವಿಡ್ ಎರಡನೇ ಅಲೆಯಲ್ಲಿ ಆಮ್ಲಜನಕದ ಕೊರತೆಯಿಂದಾಗಿ ಸಂಭವಿಸಿದ ಎಲ್ಲಾ ಸಾವುಗಳ ಬಗ್ಗೆ ದೆಹಲಿ ಸರ್ಕಾರ ತನಿಖೆ ನಡೆಸಲು ಸಿದ್ಧವಿದ್ದು, ಸಮಿತಿ ರಚನೆಗೆ ಕೇಂದ್ರ ಸರ್ಕಾರ ಅನುಮತಿ ನೀಡಬೇಕು ಎಂದು ಅವರು ಆಗ್ರಹಿಸಿದ್ದಾರೆ. ತನಿಖೆ ನಡೆಸಲು ಕೇಂದ್ರ ಸರ್ಕಾರ ಅವಕಾಶ ನೀಡುತ್ತಿಲ್ಲ ಎಂದು ಅವರು ಆರೋಪಿಸಿದ್ದಾರೆ.

‘ಸರ್ಕಾರವು ನಾಚಿಕೆಯಿಲ್ಲದೆ ಸಂಸತ್ತಿನಲ್ಲಿ ಹಸಿ ಸುಳ್ಳು ಹೇಳಿದೆ. ಏಪ್ರಿಲ್ 15ರಿಂದ ಮೇ 5ರವರೆಗೆ ಆಮ್ಲಜನಕದ ಕೊರತೆ
ಯಿಂದಾಗಿ ಸಂಪೂರ್ಣ ಅವ್ಯವಸ್ಥೆ ಉಂಟಾಗಿತ್ತು. ಹೀಗಾಗಿ ರೋಗಿಗಳು ಮೃತಪಡುವಂತಾಯಿತು’ ಎಂದು ಅವರು ಹೇಳಿದ್ದಾರೆ.

ಆಮ್ಲಜನಕ ಕೊರತೆಯಿಂದ ಯಾರೂ ಮೃತಪಟ್ಟಿಲ್ಲ ಎಂದು ಕೇಂದ್ರ ಸರ್ಕಾರ ಹೇಳಿರುವುದು ಸಂಪೂರ್ಣ ಸುಳ್ಳು ಎಂಬುದಕ್ಕೆ ದೆಹಲಿ ಆರೋಗ್ಯ ಸಚಿವಸತ್ಯೇಂದ್ರ ಜೈನ್ ಅವರೂ ದನಿಗೂಡಿಸಿದ್ದಾರೆ. ‘ಆಮ್ಲಜನಕದ ಕೊರತೆ ಇಲ್ಲದಿರುತ್ತಿದ್ದರೆ, ಆಸ್ಪತ್ರೆಗಳು ಏಕೆ ಕೋರ್ಟ್ ಮೆಟ್ಟಿಲು ಹತ್ತಬೇಕಿತ್ತು’ ಎಂದು ಪ್ರಶ್ನಿಸಿದ್ದಾರೆ.

‘ಇಂತಹ ಸಾವುಗಳ ಬಗ್ಗೆ ಮಾಹಿತಿ ಸಂಗ್ರಹಿಸಲು ಮತ್ತು ಮೃತರ ಕುಟುಂಬಗಳಿಗೆ ₹5 ಲಕ್ಷ ಪರಿಹಾರ ನೀಡಲು ದೆಹಲಿ ಸರ್ಕಾರ ಸಮಿತಿ ರಚಿಸಿತ್ತು. ಆದರೆ ಕೇಂದ್ರವು ಲೆಫ್ಟಿನೆಂಟ್ ಗವರ್ನರ್ ಮೂಲಕ ಸಮಿತಿಯನ್ನು ವಿಸರ್ಜಿಸಿತು’ ಎಂದು ಅವರು ಆರೋಪಿಸಿದ್ದಾರೆ.

ಆದರೆ, ಮಹಾರಾಷ್ಟ್ರ ಆರೋಗ್ಯ ಸಚಿವ ರಾಜೇಶ್ ಟೋಪೆ ಅವರು ವ್ಯತಿರಿಕ್ತ ಹೇಳಿಕೆ ನೀಡಿದ್ದಾರೆ. ‘ರಾಜ್ಯದಲ್ಲಿ ಆಮ್ಲಜನಕದ ಕೊರತೆಯಿಂದ ಜನರು ಸತ್ತರು ಎಂದು ನಾವು ಹೇಳಿಲ್ಲ. ಮೃತಪಟ್ಟವರ ಪೈಕಿ ಕೆಲವು ರೋಗಿಗಳು ಇತರೆ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದರು. ಆಮ್ಲಜನಕದ ಕೊರತೆಯಿಂದ ಯಾವುದೇ ಸಾವು ಸಂಭವಿಸಿಲ್ಲ’ ಎಂದು ಹೇಳಿದ್ದಾರೆ.

ಕೇಂದ್ರದ ನೀತಿಯೇ ಕಾರಣ

ಕೇಂದ್ರ ಸರ್ಕಾರವು ಆಮ್ಲಜನಕದ ರಫ್ತನ್ನು ಶೇ 700ರಷ್ಟು ಹೆಚ್ಚಿಸಿದ್ದೇ ಕೊರತೆ ಉಂಟಾಗಲು ಕಾರಣ ಎಂದು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಆರೋಪಿಸಿದ್ದಾರೆ.

‘ಸರ್ಕಾರವು ಆಮ್ಲಜನಕವನ್ನು ಸಾಗಿಸಲು ಟ್ಯಾಂಕರ್‌ ವ್ಯವಸ್ಥೆ ಮಾಡಲಿಲ್ಲ. ಉನ್ನತಾಧಿಕಾರ ಸಮಿತಿ ಮತ್ತು ಸಂಸದೀಯ ಸಮಿತಿಯ ಸಲಹೆಯನ್ನು ಕಡೆಗಣಿಸಿದ್ದರಿಂದ ಸಾವು ಸಂಭವಿಸಿದವು ಎಂದು ಆರೋಪಿಸಿದ ಅವರು,ಆಸ್ಪತ್ರೆಗಳಲ್ಲಿ ಆಮ್ಲಜನಕ ಘಟಕ
ಗಳನ್ನು ನಿರ್ಮಿಸಲು ಯಾವುದೇ ಕ್ರಮ ಗಳನ್ನು ತೆಗೆದುಕೊಳ್ಳಲಿಲ್ಲ’ ಎಂದಿದ್ದಾರೆ.

ಕೇಂದ್ರ ಆರೋಗ್ಯ ಖಾತೆ ರಾಜ್ಯ ಸಚಿವೆ ಭಾರತಿ ಪವಾರ್ ಅವರು ಸದನವನ್ನು ದಾರಿ ತಪ್ಪಿಸುತ್ತಿದ್ದಾರೆ ಎಂದುರಾಜ್ಯಸಭಾ ಸದಸ್ಯ, ಕಾಂಗ್ರೆಸ್‌ ಹಿರಿಯ ಮುಖಂಡ ಕೆ.ಸಿ. ವೇಣುಗೋಪಾಲ್ ಆರೋಪಿಸಿದ್ದಾರೆ. ಸಚಿವೆಯ ವಿರುದ್ಧ ಹಕ್ಕುಚ್ಯುತಿ ನಿರ್ಣಯ ಮಂಡನೆ ಮಾಡುವ ಬೆದರಿಕೆ ಹಾಕಿದ್ದಾರೆ.

ಪ್ರತಿಪಕ್ಷಗಳ ದ್ವಂದ್ವ ನಿಲುವಿಗೆ ಬಿಜೆಪಿ ತರಾಟೆ

ಆಮ್ಲಜನಕ ಕೊರತೆಯಿಂದ ಸಾವು ಸಂಭವಿಸಿವೆ ಎಂಬ ವಿಚಾರದಲ್ಲಿ ಕಾಂಗ್ರೆಸ್ ಹಾಗೂ ಎಎಪಿ ದ್ವಂದ್ವ ನಿಲುವು ಪ್ರದರ್ಶಿಸುತ್ತಿವೆ ಎಂದು ಬಿಜೆಪಿ ಆರೋಪಿಸಿದೆ. ಕೋವಿಡ್ ಎರಡನೇ ಅಲೆಯಲ್ಲಿ ಆಮ್ಲಜನಕದ ಕೊರತೆಯಿಂದಾಗಿ ರೋಗಿಗಳು ಮೃತಪಟ್ಟಿದ್ದಾರೆ ಎಂದು ಎಎಪಿ ಮತ್ತು ಕಾಂಗ್ರೆಸ್ ಮುಖಂಡರು ಹೇಳಿದ್ದಾರೆಯೇ ಹೊರತು, ಅದನ್ನು ಕೇಂದ್ರ ಸರ್ಕಾರಕ್ಕೆ ವರದಿ ಮಾಡಿಲ್ಲ ಎಂದು ಬಿಜೆಪಿ ತಿಳಿಸಿದೆ.
‘ಆಮ್ಲಜನಕದ ಕೊರತೆಯಿಂದಾಗಿ ಸಂಭವಿಸಿದ ಸಾವಿನ ಅಂಕಿ ಅಂಶಗಳನ್ನು ನೀಡುವಂತೆ ನಿಮ್ಮ ಮುಖ್ಯಮಂತ್ರಿ ಮತ್ತು ಆರೋಗ್ಯ ಸಚಿವರನ್ನು ಕೇಳಿ. ರಾಜ್ಯ ಸರ್ಕಾರಗಳು ಯಾವ ದತ್ತಾಂಶಗಳನ್ನು ಕಳುಹಿಸಿವೆಯೋ ಅದನ್ನು ಕೇಂದ್ರ ಸರ್ಕಾರ ತಿಳಿಸಿದೆಯಷ್ಟೇ’ ಎಂದು ಬಿಜೆಪಿ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಹೇಳಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಬಿಜೆಪಿ ವಕ್ತಾರ ಸಂಬಿತ್ ಪಾತ್ರಾ, ‘ಆಮ್ಲಜನಕದ ಕೊರತೆಯಿಂದ ಕೋವಿಡ್ ರೋಗಿಗಳು ಸಾವನ್ನಪ್ಪಿದ್ದಾರೆ ಎಂಬುದಕ್ಕೆ ಯಾವುದೇ ಪುರಾವೆಗಳು ದೊರೆತಿಲ್ಲ ಎಂದು ಮಹಾರಾಷ್ಟ್ರ ಮತ್ತು ದೆಹಲಿ ಸರ್ಕಾರಗಳು ಆಯಾ ಹೈಕೋರ್ಟ್‌ಗಳಿಗೆ ತಿಳಿಸಿವೆ’ ಎಂದು ಹೇಳಿದರು.

ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡುತ್ತಿರುವ ಸಮಯದಲ್ಲಿ ದೇಶದಲ್ಲಿ ಗೊಂದಲ ಮತ್ತು ಅರಾಜಕತೆ ಹರಡುವ ಏಕೈಕ ಕಾರ್ಯಸೂಚಿಯೊಂದಿಗೆ ಕೋವಿಡ್ ಸಾವಿನ ಬಗ್ಗೆ ಕಾಂಗ್ರೆಸ್ ಮತ್ತು ಎಎಪಿ ಸುಳ್ಳುಗಳನ್ನು ಹರಡುತ್ತಿವೆ ಎಂದು ಪಾತ್ರ ಆರೋಪಿಸಿದರು.

ಕೋವಿಡ್ ವಿರುದ್ಧದ ಹೋರಾಟದಲ್ಲಿ ಕಾಂಗ್ರೆಸ್ ಮತ್ತು ಎಎಪಿ ಬದ್ಧತೆಯನ್ನು ಅವರು ಪ್ರಶ್ನಿಸಿದರು. ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ ಸಂಜೆ ಕರೆದಿದ್ದ ಸಂಸತ್ತಿನ ನಾಯಕರ ಸಭೆಗೆ ಉಭಯ ಪಕ್ಷಗಳ ನಾಯಕರು ಬರಲಿಲ್ಲ ಎಂದಿದ್ದಾರೆ. ಆಮ್ಲಜನಕದ ಕೊರತೆಯಿಂದಾಗಿ ರೋಗಿಗಳು ಸಾಯುತ್ತಿರುವ ಬಗ್ಗೆ ಯಾವುದೇ ರಾಜ್ಯವು ಯಾವುದೇ ದತ್ತಾಂಶವನ್ನು ಕಳುಹಿಸಿಲ್ಲ ಎಂದು ಅವರು ಪ್ರತಿಪಾದಿಸಿದರು.

ದೆಹಲಿಯಲ್ಲಿರುವ ಜೈಪುರ ಗೋಲ್ಡನ್ ಆಸ್ಪತ್ರೆಯಲ್ಲಿ ಆಮ್ಲಜನಕದ ಕೊರತೆಯಿಂದಾಗಿ ಸುಮಾರು 21 ಜನರು ಸಾವನ್ನಪ್ಪಿದ್ದಾರೆ ಎಂಬುದಕ್ಕೆ ಯಾವುದೇ ಪುರಾವೆಗಳಿಲ್ಲ ಎಂದು ದೆಹಲಿ ಸರ್ಕಾರದ ಸಮಿತಿಯು ಹೈಕೋರ್ಟ್‌ಗೆ ತಿಳಿಸಿದೆ.

ಆಮ್ಲಜನಕದ ಕೊರತೆಯಿಂದ ಯಾರೂ ಸಾವನ್ನಪ್ಪಿಲ್ಲ ಎಂದು ಮಹಾರಾಷ್ಟ್ರ ಸರ್ಕಾರ ಬಾಂಬೆ ಹೈಕೋರ್ಟ್‌ಗೆ ತಿಳಿಸಿದೆ. ಛತ್ತೀಸಗಡ ಆರೋಗ್ಯ ಸಚಿವ ಟಿ.ಎಸ್ ಸಿಂಗ್‌ದೇವ್‌ ಕೂಡ ಇದೇ ರೀತಿಯ ಹೇಳಿಕೆ ನೀಡಿದ್ದಾರೆ ಎಂದು ಪಾತ್ರಾ ತಿಳಿಸಿದರು.

***

ಕೇಂದ್ರ ಸತ್ಯ ಮರೆಮಾಚುತ್ತಿದೆ. ಆಮ್ಲಜನಕ ಕೊರತೆಯಿಂದ ಮೃತರಾದ ರೋಗಿಗಳ ಸಂಬಂಧಿಕರು ಕೇಂದ್ರದ ವಿರುದ್ಧ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಬೇಕು
– ಸಂಜಯ್ ರಾವುತ್, ಶಿವಸೇನಾ ವಕ್ತಾರ

***

ಬಿಜೆಪಿ ಆಡಳಿತದ ರಾಜ್ಯಗಳಲ್ಲಿ ಜನರು ತೊಂದರೆ ಎದುರಿಸಿದ್ದರೂ, ಪ್ರತಿಪಕ್ಷಗಳ ಆಡಳಿತ ಇರುವ ರಾಜ್ಯ ಸರ್ಕಾರಗಳ ರೀತಿ ಕೋರ್ಟ್‌ಗೆ ಹೋಗಿರಲಿಲ್ಲ
– ಸಂಬಿತ್ ಪಾತ್ರಾ, ಬಿಜೆಪಿ ವಕ್ತಾರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT