ಬುಧವಾರ, ಜನವರಿ 19, 2022
26 °C

ಪೆಗಾಸಸ್‌– ಸಂಸತ್‌ ಕಲಾಪಕ್ಕೆ ಅಡ್ಡಿಪಡಿಸುವುದರಲ್ಲಿ ಅರ್ಥವೇ ಇಲ್ಲ: ಸಚಿವ ನಖ್ವಿ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಪೆಗಾಸಸ್‌ ಗೂಢಚರ್ಯೆ ಪ್ರಕರಣ ವಾಸ್ತವಗಳನ್ನು ಆಧರಿಸಿ ಇಲ್ಲವಾದ ಕಾರಣ ಮುಂಬರುವ ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ಇದೇ ವಿಷಯವನ್ನು ಕಾಂಗ್ರೆಸ್ ಪ್ರಸ್ತಾಪಿಸುವುದರಲ್ಲಿ ಅರ್ಥವಿಲ್ಲ ಎಂದು ಕೇಂದ್ರ ಸಚಿವ ಮುಕ್ತಾರ್‌ ಅಬ್ಬಾಸ್‌ ನಖ್ವಿ ಹೇಳಿದ್ದಾರೆ.

ಮುಂಬರುವ ವಿಧಾನಸಭಾ ಚುನಾವಣೆಗೂ ಸಂಸತ್ತಿನ ಚಳಿಗಾಲದ ಅಧಿವೇಶನಕ್ಕೂ ಸಂಬಂಧ ಕಲ್ಪಿಸುವ ಯತ್ನವನ್ನು ವಿರೋಧ ಪಕ್ಷಗಳು ಮಾಡಬಾರದು ಎಂದು ಅವರು ವಿನಂತಿಸಿದ್ದಾರೆ.

ರಾಜ್ಯಸಭೆಯ ಉಪನಾಯಕರೂ ಆಗಿರುವ ಸಚಿವ ನಖ್ವಿ ಅವರು ಸುದ್ದಿಸಂಸ್ಥೆಗೆ ನೀಡಿರುವ ಸಂದರ್ಶನದಲ್ಲಿ ಈ ವಿಷಯ ತಿಳಿಸಿದ್ದಾರೆ. ಲೋಕಸಭೆ ಮತ್ತು ರಾಜ್ಯಸಭೆಗಳ ಅಧ್ಯಕ್ಷರು ಕೈಗೊಳ್ಳುವ ನಿರ್ಧಾರದಂತೆ ಎಲ್ಲಾ ವಿಷಯಗಳ ಮೇಲೆ ಚರ್ಚಿಸಲು ಸರ್ಕಾರ ಸಿದ್ಧವಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಕಳೆದ ಸಂಸತ್‌ ಅಧಿವೇಶನವನ್ನು ಕಾಂಗ್ರೆಸ್ ಸಮರ್ಪಕವಾಗಿ ನಡೆಯಲು ಅವಕಾಶ ನೀಡದ ಇದ್ದ ಬಗ್ಗೆ ಕೇಳಿದಾಗ, ‘ಕಳೆದ ಏಳು ವರ್ಷಗಳಲ್ಲಿ ಪ್ರಜಾಪ್ರಭುತ್ವ ಕೆಲಸ ನಿರ್ವಹಿಸುತ್ತದೆ ಮತ್ತು ವಂಶಾಡಳಿತ ಅಡ್ಡಿ ಉಂಟುಮಾಡುತ್ತದೆ ಎಂಬುದನ್ನು ಪ್ರಧಾನಿ ನರೇಂದ್ರ ಮೋದಿ ಸಾಬೀತುಪಡಿಸಿದ್ದಾರೆ’ ಎಂದರು.

ಕಳೆದ ಅಧಿವೇಶನದ ವೇಳೆ ವಿರೋಧ ಪಕ್ಷಗಳ ಒಗ್ಗಟ್ಟಿನ ಬಗ್ಗೆ ಕೇಳಿದಾಗ, ‘ಪ್ರಬಲ (ಮಜಬೂತ್‌) ವಿರೋಧ ಪಕ್ಷ ಇರಬೇಕೇ ಹೊರತು ಅಸಹಾಯಕ (ಮಜಬೂರ್‌) ವಿರೋಧ ಪಕ್ಷ ಇರಬಾರದು ಎಂಬುದೇ ಬಿಜೆಪಿ ಮತ್ತು ಪ್ರಧಾನಿ ಮೋದಿ ಅವರ ನಿಲುವು. ಆದರೆ ವಿರೋಧ ಪಕ್ಷದ ನೇತೃತ್ವ ವಹಿಸುವ ಹರಸಾಹಸದಲ್ಲಿ ಇಂತಹ ಪಕ್ಷಗಳು ತಮ್ಮ ಪ್ರಭಾವ ಕಳೆದುಕೊಳ್ಳುತ್ತಿವೆ’ ಎಂದರು.

‘ವಿಷಯಗಳ ವಿಚಾರದಲ್ಲಿ ವಿರೋಧ ಪಕ್ಷಗಳು ಒಟ್ಟಾಗಬೇಕಿತ್ತು, ಆದರೆ ಕಳೆದ ಬಾರಿ ಅಡ್ಡಿ ಉಂಟುಮಾಡುವುದಕ್ಕಾಗಿಯೇ ಒಟ್ಟಾಗಿದ್ದರು’ ಎಂದು ಸಚಿವ ನಖ್ವಿ ಕುಟುಕಿದರು.

ನವೆಂಬರ್ 29ರಿಂದ ಡಿಸೆಂಬರ್‌ 23ರವರೆಗೆ ಸಂಸತ್ತಿನ ಚಳಿಗಾಲದ ಅಧಿವೇಶನ ನಿಗದಿಯಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು