ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಸ್ಸಾಂ- ಮಿಜೋರಾಂ ಗಡಿ ವಿವಾದ: ಶಾಂತಿಯುತ ಪರಿಹಾರಕ್ಕೆ ಕೇಂದ್ರ ಯತ್ನ

Last Updated 1 ಆಗಸ್ಟ್ 2021, 18:28 IST
ಅಕ್ಷರ ಗಾತ್ರ

ನವದೆಹಲಿ: ಅಸ್ಸಾಂ–ಮಿಜೋರಾಂ ಗಡಿ ಸಂಘರ್ಷದ ತನಿಖೆಯನ್ನು ಸಿಬಿಐನಂತಹ ಸಂಸ್ಥೆಗಳಿಂದ ನಡೆಸುವ ಯಾವುದೇ ಉದ್ದೇಶವನ್ನು ಕೇಂದ್ರ ಸರ್ಕಾರ ಹೊಂದಿಲ್ಲ. ಗಡಿ ವಿವಾದವನ್ನು ಶಾಂತಿಯುತ ಮಾರ್ಗದಲ್ಲಿ ಪರಿಹರಿಸುವ ಉದ್ದೇಶ ಹೊಂದಿದೆ ಎಂದು ಮೂಲಗಳು ತಿಳಿಸಿವೆ.

ಸದ್ಯದ ಪರಿಸ್ಥಿತಿಯನ್ನು ಮತ್ತಷ್ಟು ಉಲ್ಬಣಗೊಳಿಸುವ ಯಾವುದೇ ನಿರ್ಧಾರ ತೆಗೆದುಕೊಳ್ಳಲು ಬಯಸುವುದಿಲ್ಲ ಎಂದುಕೇಂದ್ರ ಸರ್ಕಾರದ ಇಬ್ಬರು ಹಿರಿಯ ಅಧಿಕಾರಿಗಳು ಹೇಳಿದ್ದಾರೆ.ಅಲ್ಲದೆ, ತನಿಖೆಗೆ ಯಾವುದೇ ರಾಜ್ಯ ಸರ್ಕಾರದಿಂದ ಮನವಿ ಬಂದಿಲ್ಲ ಎಂದು ತಿಳಿಸಿದ್ದಾರೆ.

ಗಡಿ ವಿವಾದವನ್ನು ಶಾಂತಿಯುತವಾಗಿ ಪರಿಹರಿ ಸುವ ಸಂಬಂಧ ಇಬ್ಬರು ಮುಖ್ಯಮಂತ್ರಿಗಳಾದ ಹಿಮಂತ ಬಿಸ್ವಾ ಶರ್ಮಾ ಮತ್ತು ಝೋರಾಮ್‌ಥಂಗಾ ಜೊತೆ ಕೇಂದ್ರ ಗೃಹ ಸಚಿವ ಅಮಿತ್ ಶಾ ನಿರಂತರ ಸಂಪರ್ಕದಲ್ಲಿದ್ದಾರೆ ಎಂದು ಅವರು ಹೇಳಿದ್ದಾರೆ.

ಜುಲೈ 26ರಂದು ನಡೆದ ಹಿಂಸಾಚಾರದ ನಂತರ, ಅಸ್ಸಾಂ ಮತ್ತು ಮಿಜೋರಾಂ ಪೋಲಿಸರು ಪರಸ್ಪರರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಗಡಿ ಗುರುತಿಗೆ ನಿರ್ಧಾರ: ಘರ್ಷಣೆ ಮತ್ತು ಹಿಂಸಾಚಾರಕ್ಕೆ ಪದೇ ಪದೇ ಕಾರಣವಾಗುತ್ತಿರುವ ಗಡಿ ಸಂಘರ್ಷಕ್ಕೆ ಶಾಶ್ವತ ಪರಿಹಾರ ಒದಗಿಸಲು ಮುಂದಾಗಿರುವ ಕೇಂದ್ರ ಸರ್ಕಾರ, ಈಶಾನ್ಯ ರಾಜ್ಯಗಳ ಗಡಿಗಳನ್ನು ಉಪಗ್ರಹ ಚಿತ್ರಗಳ ಮೂಲಕ ಗುರುತಿಸಲಿದೆ.

ಉಪಗ್ರಹ ಚಿತ್ರಣದ ಮೂಲಕ ಅಂತರ್ ರಾಜ್ಯ ಗಡಿಗಳನ್ನು ಗುರುತಿಸುವ ಕಲ್ಪನೆಯನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ಕೆಲವು ತಿಂಗಳ ಹಿಂದೆ ಪ್ರಸ್ತಾಪಿಸಿದ್ದರು.ಈಶಾನ್ಯ ಭಾಗದ ಅಂತರರಾಜ್ಯಗಡಿರೇಖೆಯನ್ನು ಮತ್ತು ಕಾಡುಗಳನ್ನು ವೈಜ್ಞಾನಿಕ ವಿಧಾನದಲ್ಲಿ ರೂಪಿಸಲು ಶಾ ಸೂಚಿಸಿದ್ದರು.

ಗಡಿ ಗುರುತು ಕಾರ್ಯವನ್ನು ಈಶಾನ್ಯ ಬಾಹ್ಯಾಕಾಶ ಅನ್ವಯ ಕೇಂದ್ರಕ್ಕೆ (ಎನ್ಇಎಸ್‌ಎಸಿ) ನೀಡಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಬಾಹ್ಯಾಕಾಶ ತಂತ್ರಜ್ಞಾನದ ನೆರವು ಒದಗಿಸುವ ಮೂಲಕ ಈಶಾನ್ಯ ಪ್ರದೇಶದ ಅಭಿವೃದ್ಧಿ ಪ್ರಕ್ರಿಯೆಯನ್ನು ಹೆಚ್ಚಿಸಲು ಎನ್‌ಇಎಸ್‌ಎಸಿ ಸಹಾಯ ಮಾಡುತ್ತಿದೆ.

ಮಾತುಕತೆಗೆ ಒಪ್ಪಿಗೆ

ಗೃಹ ಸಚಿವ ಅಮಿತ್ ಶಾ ಮತ್ತು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಜತೆಗಿನ ದೂರವಾಣಿ ಚರ್ಚೆಯಂತೆ ಅಸ್ಸಾಂ ಜತೆಗಿನ ಗಡಿ ಸಮಸ್ಯೆಯನ್ನು ಮಾತುಕತೆಯ ಮೂಲಕ ಪರಿಹರಿಸಲು ತಮ್ಮ ಸರ್ಕಾರ ಒಪ್ಪಿಕೊಂಡಿದೆ ಎಂದು ಮಿಜೋರಾಂ ಮುಖ್ಯಮಂತ್ರಿ ಝೋರಾಮ್‌ಥಂಗಾ ಅವರು ಭಾನುವಾರ ತಿಳಿಸಿದ್ದಾರೆ.

‘ಗಡಿ ಸಂಘರ್ಷಕ್ಕೆ ಕೇಂದ್ರ ಸರ್ಕಾರದಿಂದ ಸೌಹಾರ್ದಯುತ ಪರಿಹಾರ ಸಿಗಲಿದೆ ಎಂದು ನಾನು ಆಶಿಸುತ್ತೇನೆ’ ಎಂದು ಝೋರಾಮ್‌ಥಂಗಾ ಟ್ವೀಟ್ ಮಾಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ, ಅಮಿತ್ ಶಾ ಮತ್ತು ಮೇಘಾಲಯ, ನಾಗಾಲ್ಯಾಂಡ್, ಅರುಣಾಚಲ ಪ್ರದೇಶ, ಮಣಿಪುರ, ತ್ರಿಪುರ ಮತ್ತು ಸಿಕ್ಕಿಂ ಮುಖ್ಯಮಂತ್ರಿಗಳನ್ನು ತಮ್ಮ ಟ್ವೀಟ್‌ಗೆ ಟ್ಯಾಗ್ ಮಾಡಿದ್ದಾರೆ.

ಇದಕ್ಕೆ ಟ್ವೀಟ್ ಮೂಲಕ ಪ್ರತಿಕ್ರಿಯಿಸಿರುವ ಅಸ್ಸಾಂ ಮುಖ್ಯಮಂತ್ರಿ ಶರ್ಮಾ, ‘ಕೇಂದ್ರವು ಸಮಸ್ಯೆಯನ್ನು ಪರಿಹರಿಸಲು ಮುಂದಾದರೆ ಮಾತುಕತೆಗೆ ಅಸ್ಸಾಂ ಸಿದ್ಧವಿದೆ. ಅಸ್ಸಾಂ ಯಾವಾಗಲೂ ಮಾತುಕತೆಯ ಪರವಾಗಿದೆ. ನಾವು ಯಾರ ಭೂಮಿಯನ್ನೂ ಆಕ್ರಮಿಸಿಕೊಳ್ಳಲು ಹೋಗಿಲ್ಲ. ನಾವು ಯಾವಾಗಲೂ ಶಾಂತಿಯನ್ನು ಬಯಸುತ್ತೇವೆ. ನಮ್ಮ ಉದ್ದೇಶವನ್ನು ಕೇಂದ್ರದ ಮುಂದಿಡುತ್ತೇವೆ. ಎರಡೂ ರಾಜ್ಯಗಳುಭವಿಷ್ಯದ ದೃಷ್ಟಿಯಿಂದ ಹೇಗೆ ನಿರ್ಧಾರ ತೆಗೆದುಕೊಳ್ಳಬೇಕು ಎಂಬುದು ಇಲ್ಲಿ ಮುಖ್ಯ. ಹಿಂಸಾಚಾರ ಮರುಕಳಿಸುವುದು ಸರಿಯಲ್ಲ’ ಎಂದು ಅಭಿಪ್ರಾಯಪಟ್ಟಿದ್ದಾರೆ.

‘ಘಟನೆ ನಡೆದ ಜುಲೈ 26ರಂದು ಝೋರಾಮ್‌ಥಂಗಾ ಅವರಿಗೆ ಕನಿಷ್ಠ 12 ಬಾರಿ ಕರೆ ಮಾಡಿದ್ದೇನೆ. ಕ್ವಾರಂಟೈನ್ ಅವಧಿ ಮುಗಿದ ಬಳಿಕ ಅವರು ಕರೆ ಮಾಡುವುದಾಗಿ ಭರವಸೆ ನೀಡಿದ್ದಾರೆ’ ಎಂದು ಶರ್ಮಾ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT