ಮಂಗಳವಾರ, ಸೆಪ್ಟೆಂಬರ್ 28, 2021
21 °C

ದೆಹಲಿಯು ಹೆಚ್ಚು ಆಮ್ಲಜನಕ ಕೇಳಿತ್ತು ಎನ್ನುವುದು ಸರಿಯಲ್ಲ: ಏಮ್ಸ್ ನಿರ್ದೇಶಕ

ಪ್ರಜಾವಾಣಿ ವೆಬ್ ಡೆಸ್ಕ್‌ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಕೊರೊನಾ ಸಾಂಕ್ರಾಮಿಕದ ಉತ್ತುಂಗದ ಸಮಯದಲ್ಲಿ ದೆಹಲಿ ಸರ್ಕಾರವು ಅಗತ್ಯಕ್ಕಿಂತ ನಾಲ್ಕು ಪಟ್ಟು ಹೆಚ್ಚು ವೈದ್ಯಕೀಯ ಆಮ್ಲಜನಕಕ್ಕೆ ಬೇಡಿಕೆ ಇಟ್ಟಿತ್ತು ಎಂದು ಹೇಳುವುದು ಸರಿಯಲ್ಲ ಎಂದು ಏಮ್ಸ್ ನಿರ್ದೇಶಕ ಡಾ.ರಣದೀಪ್ ಗುಲೇರಿಯಾ ಹೇಳಿದ್ದಾರೆ.

ಈ ವಿಚಾರವು, ಬಿಜೆಪಿ ಮತ್ತು ಎಎಪಿ ನಡುವೆ ವಾಕ್ಸಮರಕ್ಕೆ ಕಾರಣವಾಗಿತ್ತು.

‘ಸದ್ಯ, ಸಲ್ಲಿಕೆಯಾಗಿರುವುದು ದೆಹಲಿಯ ಆಮ್ಲಜನಕ ಲೆಕ್ಕಪರಿಶೋಧನೆಯ ಮಧ್ಯಂತರ ವರದಿಯಾಗಿದೆ, ಅಂತಿಮ ವರದಿಗಾಗಿ ನಾವು ಕಾಯಬೇಕು.’ ಎಂದು ರಾಷ್ಟ್ರ ರಾಜಧಾನಿಯ ಆಸ್ಪತ್ರೆಗಳಲ್ಲಿ ಆಮ್ಲಜನಕದ ಬಳಕೆಯ ಲೆಕ್ಕ ಪರಿಶೋಧಿಸಲು ಸುಪ್ರೀಂ ಕೋರ್ಟ್ ರಚಿಸಿರುವ ಐದು ಸದಸ್ಯರ ಸಮಿತಿಯ ಮುಖ್ಯಸ್ಥರಾಗಿರುವ ಡಾ. ಗುಲೇರಿಯಾ ಎನ್‌ಡಿಟಿವಿಗೆ ತಿಳಿಸಿದ್ದಾರೆ.

ದೆಹಲಿ ಸರ್ಕಾರವು ಆಮ್ಲಜನಕದ ಅಗತ್ಯವನ್ನು ‘ಉತ್ಪ್ರೇಕ್ಷಿಸಿದೆ’ಎಂಬ ವರದಿಯನ್ನು ಉಲ್ಲೇಖಿಸಿ, ಬಿಜೆಪಿ ವಕ್ತಾರ ಸಂಬಿತ್ ಪಾತ್ರಾ ಅವರು ಶುಕ್ರವಾರ ಎಎಪಿ ಸರ್ಕಾರದ ವಿರುದ್ಧ ‘ಕ್ರಿಮಿನಲ್ ನಿರ್ಲಕ್ಷ್ಯ’ಎಂದು ಆರೋಪಿಸಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ್ದ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು, ನಾನು ಮಾಡಿದ ‘ಏಕೈಕ ಅಪರಾಧ’ಎಂದರೆ ‘ಎರಡು ಕೋಟಿ ಜನರ ಉಸಿರಾಟಕ್ಕಾಗಿ ಹೋರಾಡಿದ್ದು.’ ಎಂದು ಹೇಳಿದ್ದರು.

ದೆಹಲಿ ಸರ್ಕಾರವು ‘ತಪ್ಪು ಸೂತ್ರ’ವನ್ನು ಬಳಸಿಕೊಂಡು ಏಪ್ರಿಲ್ 30 ರಂದು 700 ಮೆ.ಟನ್ ಆಮ್ಲಜನಕವನ್ನು ಹಂಚಿಕೆ ಮಾಡಲು ಕೇಳಿದೆ ಎಂದು ಗುಲೇರಿಯಾ ನೇತೃತ್ವದ ಸಮಿತಿಯ ವರದಿಯಲ್ಲಿ ಉಲ್ಲೇಖಿಸಿದೆ ಎಂದು ಸಂಬಿತ್ ಪಾತ್ರಾ ಎತ್ತಿ ತೋರಿಸಿದ್ದರು.

‘ಈ ವಿಷಯವು ಸುಪ್ರೀಂ ಕೋರ್ಟ್‌ನಲ್ಲಿದೆ. ಉನ್ನತ ನ್ಯಾಯಾಲಯವು ಇದರ ಬಗ್ಗೆ ಏನು ಹೇಳುತ್ತದೆ ಎಂಬುದನ್ನು ನಾವು ಕಾದು ನೋಡಬೇಕು. ಸಕ್ರಿಯ ಪ್ರಕರಣಗಳ ಲೆಕ್ಕಾಚಾರ ಮತ್ತು ಇತರ ಅಂಶಗಳನ್ನು ಪರಿಗಣಿಸಬೇಕಾಗಿದೆ’ಎಂದು ಗುಲೇರಿಯಾ ತಿಳಿಸಿದ್ದಾರೆ.

ಪೂರ್ವ ದೆಹಲಿ ಸಂಸದ ಗೌತಮ್ ಗಂಭೀರ್ ಮತ್ತು ಮಾಜಿ ಸಚಿವ ಕಪಿಲ್ ಮಿಶ್ರಾ ಸೇರಿದಂತೆ ಬಿಜೆಪಿ ನಾಯಕರು ಈ ವಿಚಾರದ ಬಗ್ಗೆ ದೆಹಲಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದರು. ಇದು‘ಕ್ರಿಮಿನಲ್ ನಿರ್ಲಕ್ಷ್ಯ’ ಎಂದು ಕರೆದಿದ್ದ ಅವರು ಕ್ಷಮೆಯಾಚಿಸಬೇಕೆಂದು ಒತ್ತಾಯಿಸಿದ್ದರು. ಬಿಜೆಪಿ ವಕ್ತಾರ ಸಂಬಿತ್ ಪಾತ್ರಾ ಇದನ್ನು ‘ಘೋರ ಅಪರಾಧ’ ಎಂದು ಬಣ್ಣಿಸಿದ್ದರು.

ಇದನ್ನೂ ಓದಿ.. ನಾಲ್ಕು ಪಟ್ಟು ಹೆಚ್ಚು ಆಮ್ಲಜನಕ ಕೇಳಿದ್ದ ದೆಹಲಿ ಸರ್ಕಾರ: 'ಸುಪ್ರೀಂ' ಸಮಿತಿ

‘ಎರಡು ಕೋಟಿ ಜನರ ಉಸಿರಾಟಕ್ಕಾಗಿ ಹೋರಾಡಿದ್ದು, ನನ್ನ ಅಪರಾಧ’ ಎಂದು ಸಿಎಂ ಅರವಿಂದ್ ಕೇಜ್ರಿವಾಲ್ ಪ್ರತಿಕ್ರಿಯೆ ನೀಡಿದ್ದು, ‘ಬಿಜೆಪಿ, ಚುನಾವಣಾ ರ್‍ಯಾಲಿ ಮಾಡುತ್ತಿರುವಾಗ, ರಾತ್ರಿಯಿಡೀ ನಾನು ಎಚ್ಚರವಾಗಿದ್ದು, ದೆಹಲಿ ಜನರಿಗೆ ಆಮ್ಲಜನಕದ ವ್ಯವಸ್ಥೆ ಮಾಡಿದ್ದೇನೆ. ನಾನು ಜನರಿಗಾಗಿ  ಹೋರಾಡಿದೆ. ಜನರಿಗಾಗಿ ಆಮ್ಲಜನಕ ಕೊಡಿ ಎಂದು ಮನವಿ ಮಾಡಿದೆ’ ಎಂದು ಹೇಳಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು